ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ‘ಬಾಯಿಗೆ ಬೀಗ’ ಪ್ರಶಸ್ತಿ

Last Updated 10 ಅಕ್ಟೋಬರ್ 2021, 19:47 IST
ಅಕ್ಷರ ಗಾತ್ರ

ಇಬ್ಬರು ಪತ್ರಕರ್ತರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿದ ಸುದ್ದಿ ಓದಿದ ಬೆಕ್ಕಣ್ಣ ತುಸು ಹ್ಯಾಪುಮೋರೆ ಮಾಡಿತು.

‘ಯೋಗಿಮಾಮ ಉತ್ತರಪ್ರದೇಶದಾಗೆ ಎಂಥ ಛಂದ ರಾಜ್ಯಭಾರ ಮಾಡಾಕಹತ್ಯಾನ, ರಾಜ್ಯದಾಗೆ ಎಷ್ಟು ಶಾಂತಿ ಹಬ್ಬೈತಿ... ಖರೇ ಅಂದ್ರ ಅವಂಗ ಕೊಡಬೇಕಿತ್ತು’ ಎಂದಿತು.

‘ದಿನಕ್ಕೆ ಹತ್ತಾರು ಅತ್ಯಾಚಾರ ನಡೀತೈತಿ ಅಲ್ಲಿ, ಕೊಲೆ, ಸುಲಿಗೆ ಯಾವುದೂ ಕಡಿಮೆಯಾಗಿಲ್ಲ. ಹಾಡಹಗಲೇ ರೈತರ ಮ್ಯಾಗೆ ದೊಡ್ಡ ಕಾರು ಹರಿಸಿ ಸಾಯಿಸ್ಯಾರ, ಶಾಂತಿ ಎಲ್ಲೈತಿ’ ಎಂದೆ.

‘ಉತ್ತರಪ್ರದೇಶ ಮೊದ್ಲು ಗೂಂಡಾರಾಜ್ ಆಗಿತ್ತು, ಈಗ ಯೋಗಿರಾಜ್ ಆಗೈತಿ. ಇನ್ನೇನ್ ಶಾಂತಿ ಬೇಕು? ಹೋಗಲಿ,ಮೋದಿ ಮಾಮಗಾದ್ರೂ ಕೊಡಬೌದಿತ್ತಿಲ್ಲೋ... ವಿಶ್ವಗುರು ಆಗೂದು ಅಂದ್ರ ಅಷ್ಟು ಸರಳ ಐತೇನು. ಇಡೀ ಬ್ರಹ್ಮಾಂಡದೊಳಗ ಮೋದಿಮಾಮನಷ್ಟು ಜನಪ್ರಿಯ ವಿಶ್ವಗುರು ಯಾರೂ ಇಲ್ಲ. ಸಂಸತ್ತಿನಿಂದ ನಾಕೈದು ಮೈಲಿ ದೂರದಾಗೆ ಹತ್ತು ತಿಂಗಳಿನಿಂದ ರೈತ್ರು ಅಷ್ಟೆಲ್ಲ ಪ್ರತಿಭಟನೆ ಮಾಡಿಕೋತ ಗದ್ದಲ ಎಬ್ಬಿಸಿದರೂ ಮೋದಿಮಾಮ ಎಷ್ಟ್ ಶಾಂತಿಯಿಂದ ಮೌನವಾಗೇ ಉತ್ತರ ಕೊಡಾಕ ಹತ್ಯಾನ. ಹೀಂಗ ಶಾಂತಿ ಕಾಪಾಡೂದಂದ್ರ ಸರಳ ಅಂದ್ಕಂಡಿಯೇನ್...’ ಎಂದೆಲ್ಲ ಅಲವತ್ತು
ಕೊಂಡಿತು.

‘ಮಂಗ್ಯಾನಂಥವ್ನೇ... ನೊಬೆಲ್ ಶಾಂತಿ ಹೆಂಥಾ ಸಾಧನೆಗೆ ಕೊಡ್ತಾರೆ ಅಂತಾದ್ರೂ ಗೊತ್ತೈತೇನ್ ನಿಂಗೆ’.

ನನ್ನ ಮಾತು ಕಿವಿಗೇ ಬೀಳದಂತೆ ಮೊಂಡುವಾದ ಮುಂದುವರಿಸಿತು.

‘ವಿರೋಧ ಪಕ್ಷದವರ ಬಾಯಿ ಮುಚ್ಚಿಸಿ ಶಾಂತಿ ಕಾಪಾಡೂದಷ್ಟೇ ಅಲ್ಲ... ತಮ್ಮದೇ ಪಕ್ಷದಾಗೆ ಭಿನ್ನಮತ, ಗದ್ದಲ ಮಾಡೋರ ಬಾಯಿನೂ ಹೆಂಗ ಮುಚ್ಚಿಸ್ತಾರ. ನೋಡೀಗ... ಯೆಡ್ಯೂರಜ್ಜಾರು, ವಿಜಯಣ್ಣ ಮಾತಾಡದಂಗೆ ಐಟಿ ದಾಳಿ ನಡೆಸಿದ್ರು. ಹೀಂಗ ಎಲ್ಲಾ ಥರದ ಭಿನ್ನಮತ ಮಟ್ಟ ಹಾಕಿದ್ರಷ್ಟೇ ಶಾಂತಿ ಇರತೈತಿ’.

‘ಹಂಗಾರೆ ನೊಬೆಲ್ ಶಾಂತಿ ಅಲ್ಲಲೇ... ಬಾಯಿಗೆ ಬೀಗ ಜಡಿಯೂದಕ್ಕೆ ಬ್ಯಾರೆ ಪ್ರಶಸ್ತಿ ಕೊಡಬೇಕು’ ನಾನು ನಕ್ಕೆ.

ಬೆಕ್ಕಣ್ಣನೂ ಹಟ ಬಿಡದೇ ‘ಹೌದು, ನೊಬೆಲ್ ಸೈಲೆನ್ಸಿಂಗ್ ಅವಾರ್ಡ್ ಅಂತ ಹೊಸದಾಗಿ ಸ್ಥಾಪನಾ ಮಾಡಬಕು’ ಎಂದಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT