ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಜಗವೇ ನಾಟಕರಂಗ

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಬಹಳ ದಿನಗಳ ಬಳಿಕ ಕಲಾಕ್ಷೇತ್ರಕ್ಕೆ ಹೋಗಿದ್ದೆ. ಬಹಳಷ್ಟು ಬದಲಾವಣೆ, ಹೊಸ ಪೋಸ್ಟರ್‌ಗಳು, ಬೋರ್ಡುಗಳು. ಹೊಚ್ಚ ಹೊಸ ನಾಟಕ- ‘ಆತ್ಮಸಾಕ್ಷಿ’, ನಿರ್ದೇಶನ- ಸ್ವರೂಪ್. ಇನ್ನೊಂದು ‘ಚಡ್ಡಿ ದಹನ’, ನಿರ್ದೇಶನ- ತರುಣ್... ಹಾಗೇ ಕಣ್ ಆಡಸ್ಕೊಂಡು ಕ್ಯಾಂಟೀನ್ ಕಡೆ ಹೋಗಿ ‘ಕಾಫಿ’ ಅಂದೆ. ‘ಹಾಲಿದೆ, ಕೊಡ್ಲಾ ಸಾರ್‌’, ‘ಸರಿ’, ‘ಪ್ಲೇನಾ...ಕೇಸರೀನಾ?’ ಅಂದ. ‘ಬಿಳಿ ಹಾಲೇ ಕೊಡಿ’.

ಅಷ್ಟರಲ್ಲಿ ನಮ್ಮ ಹುಬ್ಬಳ್ಳಿ ರಂಗಕರ್ಮಿ ಪಾಟೀಲರು ‘ಹ್ಯಾಂಗದಿರೀ ಸರಾ?’ ಅಂದ್ರು. ‘ಏನು ನಿಮ್ಮ ಕಡೀನೂ ಇಂಥಾ ನಾಟಕಾನss ಅವನ್ನೋ?’

‘ಏ... ಅಲ್ಲೀನೂ ಇಂಥಾ ಹೆಸರಿನ ನಾಟಕಾನssರೀ... ಅಲ್ಲೀನೂ ಈಗ ‘ಬಹದ್ದೂರ್ ಗಂಡು’, ‘ರೈತನ ಮಕ್ಕಳು’ ಇಲ್ಲ. ‘ಮೊಬೈಲ್ ಮುದುಕ-ಯುಟ್ಯೂಬ್ ಯುವಕ’, ‘ಕಮಿಷನ್ ಕೇಳ್ರಪ್ಪ’, ‘ಕೋಟಿಗೊಬ್ಬ ಪಿಎಸ್ಐ’ ನಾಟಕಗಳೇ ನೂರಾರು ಪ್ರದರ್ಶನ, ಹೌಸ್‌ಫುಲ್ ಓಡ್ತಾಯಿರೋದು.

‘ಸಂಗ್ಯಾ-ಬಾಳ್ಯಾ’, ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ಮತ್ತೆ ಹಿರಣ್ಣಯ್ಯ ಅವರ ‘ಲಂಚಾವತಾರ’ ಹಾಗೂ ಟಿ.ಎನ್.ಸೀತಾರಾಮ್ ಅವರ ‘ಆಸ್ಫೋಟ’, ‘ನಮ್ಮೊಳಗೊಬ್ಬ ನಾಜೂಕಯ್ಯ’, ಮುಖ್ಯಮಂತ್ರಿ ಚಂದ್ರು ಅಭಿನಯದ ‘ಮುಖ್ಯಮಂತ್ರಿ’ ನಾಟಕಗಳ ರಾಜಕೀಯ, ವರ್ತಮಾನದ ವಿಡಂಬನೆಗಳು ಕೊಟ್ಟ ಖುಷೀನೇ ಬೇರೆ ಅಂದುಕೊಳ್ಳುವಷ್ಟರಲ್ಲಿ, ಒಂದು ಪಾಂಪ್ಲೆಟ್ ಮುಂದೆ ಹಿಡಿದ ಒಬ್ಬ ಯುವಕ ‘ಸರ್, 22ನೇ ತಾರೀಖು ನಮ್ಮ ನಾಟಕ ‘ವೇಷ-ರೋಷ’ ಯಕ್ಷಗಾನ ಬಳಸಿ ಮಾಡಿರೋ ಹೊಸ ಪ್ರಯೋಗ. ಮೂಲ ಹಿಂದಿ ‘ಹಿಜಾಬ್- ಕಿತಾಬ್’ ಅಂತ, ದಯವಿಟ್ಟು ಬನ್ನಿ ಪ್ರೋತ್ಸಾಹಿಸಿ’ ಅಂದ.

ವಾಟ್ಸ್‌ಆ್ಯಪ್‌ನ ಸಂದೇಶದ ಸೌಂಡ್‌ ಬಂತು. ಓಪನ್ ಮಾಡಿ ನೋಡಿದರೆ ಅದರಲ್ಲೂ ಹೊಸ ನಾಟಕದ ಮಾಹಿತಿಯೇ! ಇದೇ ಶನಿವಾರ ಎರಡು ಪ್ರದರ್ಶನ- ‘ಸಿಲೆಬಸ್ ಸರ್ಕಸ್’ ಎಂಬ ನಾಟಕ, ಭಾನುವಾರ ಮಕ್ಕಳೇ ಅಭಿನಯಿಸುವ ‘ಕೂಸು ಬಡವಾಯಿತು’!

ತಲೆ ಚಿಟ್ ಹಿಡಿಯುತ್ತಿದ್ದಂತೆ, ಇನ್ನು ಫೇಸ್‌ಬುಕ್ ಓಪನ್ ಮಾಡೋದೇ ಬೇಡ ಎಂದು ನಿರ್ಧರಿಸಿ ಮನೆ ಕಡೆ ಹೊರಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT