ಭಾನುವಾರ, ಮಾರ್ಚ್ 26, 2023
32 °C

ಚುರುಮುರಿ | ನಾಮದ ಮಹಿಮೆ!

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಇದ್ಯಾಕ್ಸಾ ಹಿಂಗೆ ಗಡಿಗೆ ಗಾತ್ರ ಮಕ ಮಾಡಿಕ್ಯಂಡಿದೀರಿ? ಮಂಗನ ಕಾಯಿಲೆ ಬಂದದಾ?’ ಅಂತ ತುರೇಮಣೆಗೆ ವಿಚಾರಿಸಿದೆ.

‘ನನ್ನೆಂಡ್ರು, ‘ಕರೋನ ಮುಗಿದೋದ್ರೂ ಒಂದು ಟ್ರಿಪ್ಪಿಲ್ಲ, ಮೊಬೈಲ್ ಕೊಡುಸ್ಲಿಲ್ಲ’ ಅಂತ ಕ್ವಾಪ ಮಾಡಿಕ್ಯಂಡವುಳೆ! ಎಣ್ಣೇಗೆ ಅಂತ ಕಾಸು ಕದ್ದು ಮಡಗಿದ್ದೆ! ಅದನ್ನೂ ಜಪ್ತಿ ಮಾಡ್ಯವುಳೆ!’ ಅಂದ್ರು ತುರೇಮಣೆ.

‘ಅಲ್ಲ ಸಾ ಇಷ್ಟಕ್ಕೇ ಕಣ್ಣೀರು ಹಾಕಿದ್ರೆ ಹ್ಯಂಗೆ? ಇದೆಲ್ಲಾ ಮನೇಕಿ ಬಾತ್! ಯಾರದೋ ಕೆಟ್ಟ ಕಣ್ಣು ಬಿದ್ದಿರಬೇಕು! ಹಿರಿಯರಿಗೆ ಬೈಯ್ಯಬ್ಯಾಡ ಅಂತ ದಬಾಯ್ಸಕುಲ್ವೇ!’ ಅಂತ ಪುಳ್ಳೆ ಹಾಕಿದೆ.

‘ನಾನು ಬುಟ್ಟೇನಾ ದಬಾಸಿದೆ. ಆದರೆ ‘ನಿಮಗೆ ಮೆಚ್ಯೂರಿಟಿ ಇಲ್ಲ. ಮನೆಗೆ ಏನು ಕೊಡುಗೆ ಕೊಟ್ಟಿದೀರ? ನೀವಲ್ಲದಿದ್ರೆ ಇನ್ನೊಬ್ರು ಮನೆ ನಡೆಸ್ತರೆ. ಅಧಿಕಾರ ಬುಟ್ಟುಕೊಡಿ’ ಅಂತ ಮೂತಿ ತಿವಿದಳು ಕನೋ! ನಂದೇನೂ ನಡೀನಿಲ್ಲ. ಅದುಕ್ಕೆ ‘ಗಡವ ನೀ ಮಡಗಿದಂಗಿರು’ ಅಂತ ಅಮಿಕ್ಕಂಡು ಸುಮ್ಮಗಿದ್ದೀನಿ!’ ಅಂತ ಬೇಜಾರು ಮಾಡಿಕ್ಯಂದರು.

‘ಪರ್ಸೆಂಟೇಜು ಸರಿಯಾಗಿ ಕೊಟ್ಟಿಲ್ಲ ಅನ್ನಿಸ್ತದೆ? ಅದುಕ್ಕೇ ಅಧಿಕಾರ ಬುಡಿ ಅಂದಿರಬೇಕು!’ ಅಂತಂದೆ.

‘ನೀವು ಸುಮ್ಮಗಿರ್ರೀ! ನಂದೆಲ್ಲಿಕ್ಲೀ ಅಂತ ನೀವು ಬ್ಯಾರೆ! ಅಧಿಕಾರ ಬುಡದೇನು ಐದು ನಿಮಿಸದ ಕೆಲಸ! ಆಮೇಲೆ ಅಣ್ಣ ಎಲ್ಲಿಗೋಯ್ತದೆ?’ ಅಂತ ನನ್ನ ಬೈದ ಚಂದ್ರು.

‘ನನ್ಗೇನು ಇಂತೇ ತಾಪತ್ರಯ ಇಲ್ಲ ಕನ್ರಪ್ಪಾ! ನಮ್ಮನೇಳಿಗೆ ಸೋಮವಾರ ಶಿವನ ದೇವಸ್ಥಾನ, ಮಂಗಳವಾರ, ಶುಕ್ರವಾರ ಲಕ್ಷ್ಮೀ ದೇವಸ್ಥಾನ, ಗುರುವಾರ ರಾಯರ ಮಠ, ಶನಿವಾರ ಆಂಜನೇಯನ ದೇವಸ್ಥಾನಕ್ಕೆ ಕರಕೋಗಿ ದರ್ಶನ ಮಾಡಸಿದ್ರಾತು. ದಿನಕ್ಕೆ ಮೂರು ಊಟ, ಭಾನುವಾರ ಬಾಡೂಟ ಗ್ಯಾರಂಟಿ! ನೀನೂ ಹಿಂಗೇ ಮಾಡ್ಲಾ!’ ಅಂತು ಯಂಟಪ್ಪಣ್ಣ.

‘ಯಂಟಪ್ಪಣ್ಣಂದೇ ಈ ಹುನ್ನಾರೆಲ್ಲಾ ನಂತಾವ ಬ್ಯಾಡ! ರಾಜಕಾರಣಿಗಳ ಥರಾ ಪಂಗನಾಮ ತೇದು ಮಡಗಬ್ಯಾಡಿ’ ಅಂದ ತುರೇಮಣೆ ಮಾತಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.