ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಡಿಗೆ ನಂತರ..

Last Updated 8 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

‘ನುಡಿದರೆ ಮುತ್ತಿನ ಹಾರದಂತಿರಬೇಕು, ನಡೆದರೆ ರಾಹುಲ್ ಗಾಂಧಿಯಂತೆ ನಡೆಯಬೇಕು’ ಎಂದಳು ಮಡದಿ, ಮಂಜು ಬೀಳುತ್ತಿದ್ದರೂ ಅವರು ಭಾಷಣ ಮಾಡುತ್ತಿದ್ದುದನ್ನು ಟಿ.ವಿಯಲ್ಲಿ ನೋಡುತ್ತಾ.‌

ವ್ಹಾ! ವ್ಹಾ! ಎಂದೆ.

‘ಅಲ್ವೇ? ಯಾರು 4,000 ಕಿ.ಮೀ. ನಡೆದಿದಾರೆ ಹೇಳಿ ನೋಡೋಣ...’

‘ಮಾಜಿ ಪ್ರಧಾನಿ ಚಂದ್ರಶೇಖರ್’.

‘ಅವರು ರಾಜ್‍ಘಾಟ್‍ವರೆಗೆ ಮಾತ್ರ. ಆದರೆ ರಾಹುಲ್‍ಜಿ ಶ್ರೀನಗರದವರೆಗೆ ನಡೆದರಲ್ಲ ಕನ್ಯಾಕುಮಾರಿಯಿಂದ, 12 ರಾಜ್ಯಗಳ ಮೂಲಕ. ಅದೊಂದು ಅಚೀವ್‍ಮೆಂಟ್ ಅಲ್ಲವೆ?’

‘ಅವರಿಗೇ ಗೊತ್ತಿರಲಿಲ್ಲವಂತೆ ತಾನು ನಡೆಯಬಲ್ಲೆ ಅಂತ. ಗಾಳಿ, ದೂಳು, ಮಳೆ, ಚಳಿ ಕೊನೆಗೆ ಹಿಮ ಸುರಿಯುತ್ತಿದ್ದರೂ ಲೆಕ್ಕಿಸದೆ ನಡೆದೇಬಿಟ್ಟರು. ಅಂದರೆ ಅವರ ನಡತೆ ಚೆನ್ನಾಗಿದೆ ಎಂದಾಯಿತು’.

‘ನಡಿಗೆ ಚೆನ್ನಾಗಿದೆ ಎನ್ನಿ. ಅವರು ದಿವಸಕ್ಕೆ ಕನಿಷ್ಠ 20 ಕಿ.ಮೀ. ನಡೀತಿದ್ದರಂತಲ್ಲ. ನೀವು 3-4 ಕಿ.ಮೀ. ನಡೆದರೆ ಹೆಚ್ಚು. ಅದೂ ನಾನು ಹೊರಡಿಸಿದ ಮೇಲೆ’.

‘ಅವರನ್ನು ಯಾರು ಹೊರಡಿಸಿದರು?’

‘ಅವರ ವಿಲ್‌ಪವರ್ ಹೊರಡಿಸಿತು. ಛಲ ನಡೆಸಿತು. ಯಾರು ಎಷ್ಟೇ ಹೀಯಾಳಿಸಬಹುದು, ಜರಿಬಹುದು, ಲೇವಡಿ ಮಾಡಬಹುದು, ಆದರೆ ಅವರು ಅದನ್ನು ತಲೆಗೆ ಹಚ್ಚಿಕೊಳ್ಳದೆ ಸುಮಾರು ನಾಲ್ಕು ತಿಂಗಳು ನಿರಂತರವಾಗಿ ನಡೆದು ತಾನೂ ಮಾಡಬಲ್ಲೆ ಅಂತ ತೋರಿಸಿದರು’.

‘ಆಗದು ಎಂದು ಕೈ ಕಟ್ಟಿ ಕುಳಿತರೆ... ಎಂಬ ಹಾಡು ನೆನಪಿಗೆ ಬರೊಲ್ಲವೆ? ಬಿಳಿ ಟೀ ಶರ್ಟ್, ಗಡ್ಡ, ಸೆಲೆಬ್ರಿಟಿಗಳ ಜತೆ ಸೆಲ್ಫಿಗಳು... ಅವರಿಗೊಂದು ಹೊಸ ಜನ್ಮ ಬಂದಿದೆ’.

‘ಭಾರತ್ ಜೋಡೊ ಎನ್ನುತ್ತಾ ಈ ನಡಿಗೆ ಮುಗಿಸಿದರು ನಿಜ. ಆದರೆ ಅಟ್‌ಲೀಸ್ಟ್ ಕಾಂಗ್ರೆಸ್ ಜೋಡೊನಾದರೂ ಇದರಿಂದ ಆಗಬಹುದೆ?’

‘ಅದರ ಜತೆಗೆ ಅಪೊಸಿಷನ್ ಜೋಡೊ ಸಹ ಆಗಬೇಕಿದೆ’.

‘ಮೊದಲು ಕಾಂಗ್ರೆಸ್ ಜೋಡೊ ಆಗಲಿ. ಸದ್ಯದಲ್ಲೇ ನಡೆಯಲಿರುವ ಚುನಾವಣೆಗಳಲ್ಲಿ ಈ ಜೋಡೊ ನಡಿಗೆಯಿಂದ ಪಕ್ಷಕ್ಕೆ ಅನುಕೂಲ
ವಾಗಲಿದೆಯೆ? ನೋಡೋಣ. ದಿ ಪ್ರೂಫ್ ವಾಕಿಂಗ್ ಲೈಸ್ ಇನ್ ವೋಟಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT