ಶನಿವಾರ, ಜುಲೈ 31, 2021
27 °C

ಚುರುಮುರಿ | ಚಾಲೆಂಜ್ ಸ್ಮಶಾನ!

ಬಿ.ಆರ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಹೊಸ ಸೈಕಲ್ ಖರೀದಿಸಿದ್ದ ಚಂಬಸ್ಯ ಖುಷಿಯಿಂದ ಬೀಗುತ್ತಿದ್ದ. ಅವನನ್ನು ಕಂಡ ರುದ್ರೇಶಿ ‘ಸೈಕಲ್ ವಸಾದೇನಲೇ ಬಸ್ಸಿ?’ ಎಂದು ಕೇಳಿದ.

‘ಸೈಕಲ್ ಅನ್ನಬ್ಯಾಡಲೆ. ಇದು ನನ್ನ ಹಾರ್ಲೆ ಡೇವಿಡ್ಸನ್ ಬೈಕು! ಪೆಟ್ರೋಲು ಆಕ್ದಿದ್ರೂ ಜಿಂಕಿ ಓಡ್ದಂಗ್ ಓಡ್ತತಿ. ಮೈಲೇಜಿನ್ಯಾಗು ಕಮ್ಮಿಲ್ಲ’.

‘ಓ... ಅವುದು ಬಿಡಪ್ಪ, ಇಂಥ ರಾಯಲ್ ಬೈಕ ತಗಂಡದಿಯ, ಮತಿಪ್ಪಟ್ಟು ಸ್ವೀಟ್ ಕೊಡದುಲ್ವಾ?’

‘ಮದ್ಲು ಉದ್ಘಾಟನೆ. ಆಮ್ಯಾಗೆ ಸ್ವೀಟು. ಮಧ್ಯರಾತ್ರಿ ಮಸಾಣದಾಗೆ ಉದ್ಘಾಟನೆ ಮಾಡ್ತನಿ ಡೇವಿಡ್ಸನ್ನನ್ನ’.

‘ಅಲ್ಯಾಕಲೇ?’

‘ಜನ ಚೇಂಜ್ ಕೇಳ್ತದಾರಲೇ. ಮಸಾಣದಾಗೆ ಉದ್ಘಾಟನೆ ಮಾಡದೀಗ ಪ್ಯಾಸನ್ನಾಗೇತಿ. ಹೀಗೆ ಮಾಡದ್ರಿಂದ ಜನಗಳ ಮೂಢನಂಬಿಕಿ ದೂರ ಆಕ್ಕತಿ. ದೆವ್ವಭೂತ ಸುಳ್ಳು ಅಂತ ಪ್ರೂವ್ ಆಕ್ಕತಿ’.

‘ನಿನ್ ಉದ್ಘಾಟನಿಗಿ ಯಾರ‍್ಯಾರ್ ಬರ್ತಾರಲೇ ಬಸ್ಸಿ?’

‘ನಮ್ಮೇರಿಯಾ ಕೌನ್ಸಿಲ್ರು, ಕ್ಷೇತ್ರುದೆಮ್ಮೆಲ್ಲೆ, ಪ್ರಗತಿಪರ ಸ್ವಾಮಿಗಳು ಮತ್ತು ನೂರಾರು ಮೌಢ್ಯವಿರೋಧಿಗಳು’.

‘ಹಯ್ಯೋ ಮಂಗ್ಯಂತಗಂಬಂದೆ! ದೆವ್ವಭೂತ ಇಲ್ಲಂತ ಪ್ರೂವ್ ಮಾಡಕ್ಕೆ ದಂಡುದಾಳಿ ಬಾಜಾಭಜಂತ್ರಿನೆಲ್ಲ ಕರ್ಕೊಂಡೋದ್ರೆ ದೆವ್ವಭೂತ ಸಿಗ್ತಾವೇನ್ಲೇ? ಎಲ್ಲ ಮಸಾಣದಿಂದ ಗುಳೆ ಓಕ್ಕಾವು’.

‘ಅಂಗರೆ ನಿನ್ ಪ್ರಕಾರ ದೆವ್ವಭೂತ ಅದಾವೆ ಅಂತನಾ?’

‘ಅವದಾವೋ ಇಲ್ವೋ ಮುಖ್ಯ ಅಲ್ಕಣೊ ಬಸ್ಸಿ. ಪ್ರಚಾರಕ್ಕಂತ ಮಸಾಣ ಬಳಸ್ಕ್ಯಳದು ತಪ್ಪಲೇ. ನಿನಿಗಿ ದೆವ್ವಭೂತಿಲ್ಲ ಅಂತ ಮನವರಿಕಿ ಮಾಡ್ಕ್ಯಣಾದು ಅಷ್ಟು ಜರೂರಿತ್ತಪ್ಪಾಂದ್ರೆ, ಅಮಾಸಿ ಮಧ್ಯರಾತ್ರಿ ನಿನ್ ಡೇವಿಡ್ಸನ್‍ನ್ಯಾಗೆ ಮಸಾಣಕ್ಕೋಗಿ ಐದು ರೌಂಡ್ ವೊಡ್ಕ್ಯಂದ್ ಬಾರ್ಲೆ. ಆದ್ರೆ ನೀನ್ ಒಬ್ಬಾತ್ನೇ ವೋಗ್ಬಕು. ಜತಿಗ್ಯಾರೂ ಇರ್ಬಾರ್ದು. ಚಾಲೆಂಜ್ ಒಪ್‌ಗ್ಯಂತಿಯಾ?’

ಘೋಸ್ಟ್ ಪೆಪ್ಪರ್ ಚಾಲೆಂಜ್ ರೇಂಜಿಗೆ ರುದ್ರೇಶಿ ಚಾಲೆಂಜ್ ಮಾಡಿದ್ದು ನೋಡಿ ಚಂಬಸ್ಯ ಒಮ್ಮೆಗೇ ಗರಬಡಿದವನಂತಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು