‘ಏನ್ರಲೆ, ಎಲ್ರುದು ದೀಪಾವಳಿ ಆಯ್ತಾ? ಪಟಾಕಿ ಜೋರು ಅನ್ನಿ’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಹು ಕಣಲೆ, ಅಂಗಡಿಯೋನು ಗ್ಯಾರಂಟಿ ಪಟಾಕಿ ಅಂತ ಒಂದು ಕೊಟ್ಟಿದ್ದ, ಅದು ಒಂದ್ಸಲ ಹಚ್ಚಿದ್ರೆ ಐದ್ಸಲ ಢಂ ಅಂತಪ’ ಗುಡ್ಡೆ ನಕ್ಕ.
‘ಅದು ಮೋಸ್ಟ್‌ಲಿ ಕಾಂಗ್ರೆಸ್ ಪಟಾಕಿ ಇರ್ಬೇಕು ಕಣಲೆ, ಬಿಜೇಪಿದು ಯಾವುದೂ ಇರ್ಲಿಲ್ವಾ?’
‘ಇತ್ತು, ಇನ್ನೂ ಹೊಸಾದು, ಶಿಕಾರಿಪುರದ್ದು... ಹೆಂಗೆ ಸೌಂಡ್ ಮಾಡುತ್ತೋ ಈಗ್ಲೇ ಗೊತ್ತಾಗಲ್ಲ ಅಂದ ಅಂಗಡಿಯೋನು, ಅದ್ಕೆ ತರ್ಲಿಲ್ಲ’.
‘ಹೋಗ್ಲಿಬಿಡು, ನಮ್ ಕುಮಾರಣ್ಣ ಉದ್ದುದ್ದ ಸರ ಪಟಾಕಿ ಹಚ್ತಾ ಇದ್ರಲ್ಲ, ಎಲ್ಲ ಢಂ ಅಂದ್ವಾ?’ ಮಂಜಮ್ಮ ಕೇಳಿದಳು.
‘ಆ ಸರ ಪಟಾಕಿ ವಿರುದ್ಧ ಸಿದ್ರಾಮಣ್ಣ ಕರೆಂಟ್ ಪಟಾಕಿ ಹಚ್ಚಿ ಎಸೆದ್ರಂತಪ, ಅದರ ಸೌಂಡಿಗೆ ಎಲ್ಲ ಕಕ್ಕಾಬಿಕ್ಕಿ ಆಗೋದ್ರಂತೆ’.
‘ಅಲೆ ಇವ್ನ, ಹೌದಾ? ಆಮೇಲೆ ಅದ್ಯಾವುದೋ ಫ್ಯಾಮಿಲಿ ಪಟಾಕಿ ಅಂತ ಬಂದೇತಂತೆ, ನೋಡ್ಲಿಲ್ವಾ?’ ತೆಪರೇಸಿ ಕೇಳಿದ.
‘ಫ್ಯಾಮಿಲಿ ಪಟಾಕಿ ಅಂತ ಇತ್ತು. ಆದ್ರೆ ಅದನ್ನ ಹಚ್ಚೋದು ಕಷ್ಟ. ಎಲ್ಲಿ ಹಚ್ಚಿದ್ರೂ ಅದು ಎಲ್ಲ ರಾಜಕಾರಣಿಗಳ ಮನೇಲು ಢಂ ಅನ್ನುತ್ತಂತೆ. ಸಾವಾಸ ಬ್ಯಾಡ ಅಂತ ಬಿಟ್ ಬಂದೆ’ ಗುಡ್ಡೆ ನಕ್ಕ.
‘ಪಟಾಕಿ ವಿಷ್ಯ ಸಾಕು ಬಿಡ್ರಲೆ, ಇರೋವು ಇಲ್ದೋವು ಎಲ್ಲ ಹೇಳಿದ್ರಿ, ನಾಳೆ ಅಂತರ
ರಾಷ್ಟ್ರೀಯ ಪುರುಷರ ದಿನವಂತೆ, ಏನ್ಮಾಡೋಣ?’ ತೆಪರೇಸಿ ಮಾತು ಬದಲಿಸಿದ.
‘ಪುರುಷರ ದಿನ ವರ್ಷಕ್ಕೆ ಒಂದೇ, ಮಿಕ್ಕಿದ್ದೆಲ್ಲ ಮಹಿಳೆಯರ ದಿನಾನೇ. ನಡೀರಿ ಪಾರ್ಟಿ ಮಾಡಾಣ’ ಎಂದ ಕಡೆಮನಿ ಕೊಟ್ರ.
ಅಲ್ಲೀತನಕ ಸುಮ್ಮನಿದ್ದ ಪಂಚರಂಗಿ ಪರ್ಮೇಶಿ ‘ಮಂಜಮ್ಮ, ಪುರುಷರ ದಿನ ಅಂದಕೂಡ್ಲೆ ನೆನಪಾತು. ಬಾಳ ದಿನದಿಂದ ಕೇಳ್ಬೇಕು ಅಂತಿದ್ದೆ. ಈಗ ಮದುವೆಯಾದ ಹೆಣ್ಮಕ್ಕಳನ್ನ ಮುತ್ತೈದೇರು ಅಂತಾರೆ, ಗಂಡಸರಿಗೇನಂತಾರೆ?’ ಎಂದು ಕೇಳಿದ.
‘ನಿನ್ನಂಥೋರ್ನ ಮುಠ್ಠಾಳ ಅಂತಾರೆ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.