ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ನಗೆ ಮದ್ದು

Last Updated 2 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

‘ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿದ್ದೀರಾ?...’ ಎನ್ನುತ್ತಾ ಆರೋಗ್ಯ ಕಾರ್ಯಕರ್ತೆ ಬಂದರು.

‘ಎಲ್ಲರಿಗೂ ಕೆಮ್ಮು, ನೆಗಡಿ, ಶೀತ. ಇಷ್ಟು ಬಿಟ್ಟರೆ ಇನ್ನಾವ ಬಾಧೆಯೂ ಇಲ್ಲ’ ಎಂದು
ಸುಮಿ ಸ್ವಾಗತಿಸಿದಳು.

‘ನೀವೇ ನೋಡಿ, ನಮ್ಮ ಮೂಗು ಮೂಲ ಆಕಾರ ಕಳೆದುಕೊಂಡು ಟೊಮೆಟೊ ಗಾತ್ರದಲ್ಲಿ ವಿಕಾರ ಆಗಿದೆ’ ಅಂದ ಶಂಕ್ರಿ.

‘ಈಗ ಸ್ವಲ್ಪ ಸುಧಾರಿಸಿದೆ, ನಿನ್ನೆ ದುಂಬಾ ದೆಗಡಿಯಾಗಿ ಕನ್ನಡ ಪದಗಳೇ ಅಸ್ತವ್ಯಸ್ತವಾಗಿದ್ದವು’ ಮಗಳು ಪಮ್ಮಿ ಹೇಳಿದಳು.

‘ನೆಗಡಿ ಡಾಕ್ಟರ್ ಹತ್ರ ಚಿಕಿತ್ಸೆ ಪಡೆದು, ಕನ್ನಡ ಪಂಡಿತರಿಂದ ಪದ ರಿಪೇರಿ ಮಾಡಿಸಿ ಕೊಳ್ಳಬೇಕು ಎಂದುಕೊಂಡಿದ್ದೆವು, ಹೆಂಡ್ತಿ ಮಾಡಿಕೊಟ್ಟ ಪರಿಣಾಮಕಾರಿ ಕಷಾಯ
ಕುಡಿದು ಚೇತರಿಸಿಕೊಂಡೆವು’ ಅಂದ ಶಂಕ್ರಿ.

‘ಆದರೂ ಮೂಗಿನಲ್ಲಿ ನಿರಂತರಜಲಧಾರೆಯಾಗುತ್ತಿದೆ’ ಪಮ್ಮಿ ಮೂಗು ಒರೆಸಿಕೊಂಡಳು.

‘ಹಾಗಂತ ಮೂಗಿಗೆ ಕಟ್ಟೆ ಕಟ್ಟಲಾಗುವುದಿಲ್ಲ. ಮಳೆಗಾಲದಲ್ಲಿ ಕೆರೆ- ಕಟ್ಟೆಗಳೇ ತುಂಬಿ ಕೋಡಿ ಹರಿಯುತ್ತಿವೆ...’ ಅಂದರು ಆರೋಗ್ಯ ಮೇಡಂ.

‘ಮಳೆಯಲ್ಲಿ ನೆನೆದರೆ ನೆಗಡಿ ಬರುತ್ತೆ, ನೆನೆಯದಿದ್ದರೂ ಬರುತ್ತಾ ಆಂಟಿ?’

‘ಮಳೆಗಾಲ ಆಗಿರೋದ್ರಿಂದ ಮಳೆಯಲ್ಲಿ ನೆನೆದರೂ, ಮಳೆಯನ್ನು ನೆನೆದರೂ ನೆಗಡಿ ಆಗುತ್ತೆ ಅಲ್ವಾ ಮೇಡಂ?’ ಸುಮಿ ಕೇಳಿದಳು.

‘ನೇತ್ರ ದಾನ, ಕಿಡ್ನಿ ದಾನದಂತೆ ಮೂಗು ದಾನಕ್ಕೆ ಅವಕಾಶ ಇದ್ದಿದ್ದರೆ ನನ್ನ ಮೂಗನ್ನು ಯಾರಿಗಾದರೂ ದಾನ ಮಾಡಿಬಿಡುತ್ತಿದ್ದೆ’
ಶಂಕ್ರಿ ಮೂಗು ಉಜ್ಜಿಕೊಂಡ.

‘ನಿಮ್ಮದು ಕಾಮಿಡಿ ಫ್ಯಾಮಿಲಿ. ಶೀತ, ನೆಗಡಿ ನಡುವೆಯೂ ಆರೋಗ್ಯವಾಗಿದ್ದೀರಿ. ನಿಮ್ಮ ಆರೋಗ್ಯದ ಮದ್ದು ಯಾವುದು?’ ಕೇಳಿದರು ಆರೋಗ್ಯ ಮೇಡಂ.

‘ನಗೆ ಮದ್ದು ಮೇಡಂ...’ ಅಂತ ನಕ್ಕಳು ಸುಮಿ.

‘ನನಗೂ ಗೊತ್ತಾಗ್ತಿದೆ, ನೀವು
ಆರೋಗ್ಯವಾಗಿರುವಾಗ ನನಗೇನು ಕೆಲಸ...’ ಎಂದು ಹೇಳಿ ಆರೋಗ್ಯ ಮೇಡಂ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT