ಭಾನುವಾರ, ಡಿಸೆಂಬರ್ 5, 2021
27 °C

ಚುರುಮುರಿ | ‘ಗುಂಡು’ಗೋವಿ ಗೆಳೆಯ

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

ಎರಡನೇ ಡೋಸ್ ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ‘ಗುಂಡು’ಗೋವಿ ಗೆಳೆಯನನ್ನು ಕೇಳಿದೆ– ‘ಮೂರನೇ ಅಲೆ ಭೀತಿ ಇದ್ದೇ ಇದೆ ಕಣಯ್ಯಾ. ಅದಕ್ಕೇ ನಾನು ಬೂಸ್ಟರ್ ಡೋಸ್ ಅನ್ನೂ ತಗೊಂಡ್ಬಿಟ್ಟಿದೀನಿ. ನೀನಿನ್ನೂ ಎರಡನೇದ್ದೇ ತಗೊಂಡಿಲ್ಲ ಯಾಕೋ?’

‘ನಮ್ಮ ದೇಶ ನೂರು ಕೋಟಿ ಲಸಿಕೆ ದಾಖಲೆ ಮಾಡಿದೆಯಲ್ಲ ಸಾಕು ಬಿಡಯ್ಯಾ’ ಎಂದ.

‘ಈ ಉಡಾಫೆ ಮಾತೆಲ್ಲ ಬೇಡ. ಎರಡು ಡೋಸ್ ತಗೊಂಡೋರನ್ನೂ ಈ ಮಾರಿ ಬಲಿ ತಗೊಂಡಿರೋ ನಿದರ್ಶನ ಇದೆ, ಕೂಡ್ಲೇ ತಗೊಳ್ಳೋ’.

ತಲೆ ಕೆರೆಯುತ್ತಾ ನಿಂತ ಅವನನ್ನು ನೋಡುತ್ತಿದ್ದಂತೆ ಅವನ ಸಮಸ್ಯೆ ನಂಗೆ ಅರ್ಥವಾಯಿತು. ‘ವ್ಯಾಕ್ಸಿನ್ ತಗೊಳ್ಳೋದ್ರಿಂದ ನಿನ್ನ ಗುಂಡು ಪಾರ್ಟಿಗೇನೂ ಬಾಧಕ ಇಲ್ಲಾಂತ ಅವತ್ತೇ ಹೇಳಿದ್ದೆನಲ್ಲೋ’.

‘ಅದಕ್ಕಲ್ಲ... ಆಸ್ಟ್ರಿಯಾದಲ್ಲಿ ಶೇ 35ರಷ್ಟು ಜನ ಇನ್ನೂ ತಗೊಂಡೇ ಇಲ್ವಂತೆ!’

‘ಅದ್ರಿಂದ ಆ ಸರ್ಕಾರ ಏನ್ಮಾಡಿದೆ ಗೊತ್ತೇನೋ ಬುದ್ದೂ? ಅದರ ಹಾಗೇ ನಮ್ಮ ಸರ್ಕಾರನೂ ಮಾಡಿದ್ರೆ ಏನ್ಮಾಡ್ತೀಯೋ?’

‘ಅಂಥದ್ದು ಏನ್ಮಾಡಿದೆಯಪ್ಪಾ?’

‘ಲಸಿಕೆ ಹಾಕಿಸಿಕೊಳ್ಳದವರು ಹೊರಗೆ ಬರುವಂತಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡ್ರೆ ಲಕ್ಷ ರೂಪಾಯಿಗಿಂತ ಹೆಚ್ಚು ದಂಡವಂತೆ. ಅದಕ್ಕಿಂತ ಮಿಗಿಲಾಗಿ...’

‘ಅದೇನು ಪೂರ್ತಿ ಹೇಳಯ್ಯಾ!’

‘ಅಂಥೋರಿಗೆ ಬಾರು, ಪಬ್‌ಗಳ ಪ್ರವೇಶಾನೂ ನಿಷಿದ್ಧ!’

‘ಹಾಗಾದ್ರೆ ನಡೆಯಪ್ಪಾ ಹೋಗೋಣ, ಈಗ್ಲೇ ವ್ಯಾಕ್ಸಿನ್ ಹಾಕಿಸು’.

‘ಹಂಗ್ಯಾಕೆ ಬೆಚ್ಚಿಬೀಳ್ತೀಯೋ? ಹಾಗೆ ಮಾಡಿರೋದು ಯುರೋಪಿನ ಆಸ್ಟ್ರಿಯಾ ಸರ್ಕಾರ, ನಮ್ಮದಲ್ಲ’.

‘ಯಾರಿಗ್ಗೊತ್ತಯ್ಯಾ, ದಿನಕ್ಕೊಂದು ಹೊಸ ಯೋಜನೆ ಘೋಷಿಸ್ತಾ ಫುಲ್ ಜೋಶ್‌ನಲ್ಲಿದ್ದ ಮೋದೀಜಿ ಈಗ ಕೃಷಿ ಕಾಯ್ದೆಗಳನ್ನ ಅನಿವಾರ್ಯವಾಗಿ ವಾಪಸ್ ತಗೊಂಡ ಸಿಟ್ಟಲ್ಲಿದಾರೆ. ಅವ್ರಿಗೆ ಈ ಆಸ್ಟ್ರಿಯಾ ರೂಲ್ಸ್ ಗೊತ್ತಾದ್ರೆ ನಮ್ಗೆ ಕಷ್ಟ’.

ಗೆಳೆಯನ ಮುಂದಾಲೋಚನೆಗೆ ನಾನು ಮೂಕವಿಸ್ಮಿತನಾದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.