ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನ ಸಂಗತಿ!

Last Updated 5 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮನೆ ಹೆಸರು ‘ಆನಂದ ಸದನ’ ಎಂದಿದ್ದರೂ ‘ಸೀಸಿ’- ಅಂದ್ರೆ ಸೀನಿಯರ್ ಸಿಟಿಜನ್ ಗುಂಡಣ್ಣನವರಿಗೆ ಜೀವನ ಅಷ್ಟೇನೂ ಆನಂದದಾಯಕ ಆಗಿರಲಿಲ್ಲ. ‘ಮನೆಯಲ್ಲಿರಿ, ಸುರಕ್ಷಿತವಾಗಿರಿ’ ಎಂಬ ಕೊರೊನಾ ಸಂಹಿತೆ ಜೊತೆಗೆ ‘ಟೀವಿಯ ಮುಂದೆ’ ಎಂಬುದನ್ನು ಸೇರಿಸಿಕೊಂಡು ಅದರಲ್ಲಿ ತಲ್ಲೀನರಾಗಿದ್ದವರನ್ನು ಶ್ರೀಮತಿ ಗದರಿಸಿದರು- ‘ಒಳಗೆ ನೊಣ ಹೋದಾವು. ಹಂಗೆ ಬಾಯ್ಬಿಟ್ಕೊಂಡು ಅದೇನು ನೋಡ್ತಿದೀರಿ?’

‘ನೋಡು ಬಾ ಇಲ್ಲಿ. ಅರವತ್ತು ವರ್ಷದ ಸವದತ್ತಿ ಅಜ್ಜಿ ಹೇಗೆ ಸ್ಟೆಪ್ ಹಾಕ್ತಿದೆ!’

‘ಯಾರ‍್ರೀ ಆ ಎಲ್ಲಮ್ಮ?’

‘ಎಲ್ಲಮ್ಮ ಅಲ್ವೇ... ಅನ್ನಪೂರ್ಣಮ್ಮ. ಟಿ.ವಿ ಡ್ಯಾನ್ಸ್ ಸ್ಪರ್ಧೇಲಿ ಹುಡುಗ್ರ ಜೊತೆ ಆಯ್ಕೆಯಾಗಿದಾರೆ!’

‘ಯಾವಾಗ್ಲೂ ಟೀವಿ ಮುಂದೆ ಬೇರು ಬಿಟ್ಟು ಹೊಟ್ಟೆ ಬೆಳಸ್ಕೊಂಡಿದೀರಿ... ತಡೀರಿ ಮೊಮ್ಮಕ್ಕಳು, ಮಗ ಬರಲಿ’.

‘ಮಾರಾಯ್ತೀ, ನಾನೇನೂ ಬ್ಲೂಫಿಲಂ ನೋಡ್ತಿಲ್ಲ. ಇದನ್ನು ಸಭಾಪತಿಯವರಂತೆ ನಮ್ಮ ಸದನದ ನೀತಿ ನಿರೂಪಣಾ ಸಮಿತಿಗೆ ವಹಿಸಬೇಡ’.

‘ವಯಸ್ಸಾದ್ರೂ ನಿಮ್ಗೆ ಬುದ್ಧಿ ಮಾತ್ರ ಬರ್ಲಿಲ್ಲ’.

‘ಇದು ವಯಸ್ಸಾದವರ ಕಾಲಾನೇ, ದೊಡ್ಡಣ್ಣ ಅಮೆರಿಕದ ಹೊಸ ಅಧ್ಯಕ್ಷರಿಗೆ 78 ವರ್ಷ. ನಮ್ಮ ರಾಜಾಹುಲಿ ಅವ್ರಿಗಿಂತ ಒಂದ್ವರ್ಷ ಮಾತ್ರ ಚಿಕ್ಕೋರು. ದೊಡ್ಡಗೌಡರಿಗೆ 87. ರಾಜಕೀಯ ಇನಿಂಗ್ಸ್‌ನಲ್ಲಿ ಇನ್ನೂ ನಾಟೌಟ್...’

ಅಷ್ಟರಲ್ಲಿ ಬಂದ ಮೊಮ್ಮಗಳು ಕೇಳಿದಳು- ‘ತಾತಾ, ಬರೀ ಗಂಡಸ್ರೇ ಯಾಕೆ? ರಜನಿ ಚಾಂಡಿ ಇಲ್ವೇ?’

‘ಯಾರಮ್ಮಾ ಆಕೆ?’ ಅಜ್ಜಿ ಕೇಳಿದರು.

‘ಕೇರಳದ 68 ವರ್ಷದ ಸೆಲೆಬ್ರಿಟಿ. ಅವರ ಗ್ಲಾಮರಸ್ ಫೋಟೊ ಶೂಟ್ ವೈರಲ್ ಆಗಿತ್ತು’.

ಗುಂಡಣ್ಣ ಸೇರಿಸಿದರು- ‘84 ವರ್ಷವಾದ್ರೂ ವೈಜಯಂತಿಮಾಲಾ ಭರತನಾಟ್ಯ ಮಾಡ್ತಿಲ್ವೇ?! 72 ವರ್ಷದ ಡ್ರೀಮ್ ಗರ್ಲ್ ಹೇಮಾಮಾಲಿನಿ ಟೀವೀಲಿ ಮಿಂಚ್ತಿದಾರಲ್ಲ. ಲೈಫ್ ಎಂಜಾಯ್ ಮಾಡೋಕೆ ವಯಸ್ಸು ಅಡ್ಡಿಯಾಗಬಾರದು...’ ಎಂದರು ಗುಂಡಣ್ಣ, ಶ್ರೀಮತಿಯವರತ್ತ ತುಂಟನಗೆ ಬೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT