ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮಠ ಯಾತ್ರೆ

Last Updated 22 ಜೂನ್ 2021, 19:17 IST
ಅಕ್ಷರ ಗಾತ್ರ

‘ನಾಳೆ ಕಡ್ಲೇಪುರ ಮಠಾಧೀಶರ ದರ್ಶನಕ್ಕೆ ಹೋಗಬೇಕು. ಸ್ವಾಮೀಜಿಗಳ ಅಪಾಯಿಂಟ್‍ಮೆಂಟ್ ತಗೊಂಡಾ?’ ಜನನಾಯಕರು ಪಿ.ಎ.ಗೆ ಕೇಳಿದರು.

‘ತಗೊಂಡಿದ್ದೀನಿ ಸಾರ್... ಬೆಳಿಗ್ಗೆ 9ಕ್ಕೆ ಸ್ವಾಮೀಜಿಗಳು ಟೈಂ ಕೊಟ್ಟಿದ್ದಾರೆ’ ಅಂದ ಪಿ.ಎ.

‘ನಾವು ಇದುವರೆಗೆ ಎಷ್ಟು ಮಠಗಳ ಪರಮಪೂಜ್ಯರ ಆಶೀರ್ವಾದ ಪಡೆದಿದ್ದೇವೆ?’

‘36 ಸ್ವಾಮೀಜಿಗಳ ದರ್ಶನಾಶೀರ್ವಾದ ಮುಗಿದಿದೆ, ಇನ್ನೂ ಹತ್ತಾರು ಬಾಕಿ ಇವೆ’.

‘ಮಠ ಯಾತ್ರೆಯಿಂದ ನನ್ನ ರಾಜಕೀಯ ಭವಿಷ್ಯದಲ್ಲಿ ಆರೋಗ್ಯಕರ ಬದಲಾವಣೆ ಆಗಿದೆಯೇ?’ ನಾಯಕರಿಗೆ ಕುತೂಹಲ.

‘ಆಗಿದೆ ಸಾರ್, ಒಂದು ಮಠದಲ್ಲಿ ರಾಗಿಮುದ್ದೆ ಬಸ್ಸಾರು, ಇನ್ನೊಂದರಲ್ಲಿ ಖಡಕ್ ರೊಟ್ಟಿ ಕಾಯಿಪಲ್ಲೆ, ಮತ್ತೊಂದರಲ್ಲಿ ಮಜ್ಜಿಗೆಹುಳಿ... ಎಲ್ಲಾ ಕಡೆ ಪೌಷ್ಟಿದಾಯಕ ಪ್ರಸಾದ ಸೇವಿಸಿದ್ದೀರಿ, ಆರೋಗ್ಯಕರ ಸುಧಾರಣೆ ಆಗಬೇಕಲ್ವಾ ಸಾರ್?...’

‘ಜನಸಾಮಾನ್ಯರಿಗೆ ಸಂಕಟ ಬಂದಾಗ ವೆಂಕಟರಮಣ, ಜನನಾಯಕರಿಗೆ ಸಂಕಷ್ಟ ಬಂದಾಗ ಮಠಗಳತ್ತ ಪಯಣ ಅಲ್ವಾ? ಹಹ್ಹಹ್ಹಾ...’ ನಾಯಕರು ಸಂತಸಗೊಂಡರು.

‘ಹೌದು ಸಾರ್... ಗುಡಿ ದೇವರಿಗೆ ಮುಡಿ ಕೊಟ್ಟು, ಪೂಜೆ, ನೈವೇದ್ಯ ಮಾಡಿದರೂ ವರ ಕೊಡುವ ಗ್ಯಾರಂಟಿ ಇಲ್ಲ. ಕಾವಿ ದೇವರು ಹಾಗಲ್ಲ, ದರ್ಶನ ಮಾಡಿ ಪಾದಕ್ಕೆರಗಿದರೆ ತಥಾಸ್ತು ಅಂತ ಆಶೀರ್ವಾದ ಮಾಡಿಬಿಡುತ್ತಾರೆ. ಆದರೆ, ನಾಲ್ವರು ಸ್ವಾಮೀಜಿಗಳ ಆಶೀರ್ವಾದದ ಬಗ್ಗೆ ಅನುಮಾನವಿದೆ’ ಅಂದ ಪಿ.ಎ.

‘ಹೌದಾ?! ಪೂಜೆಯಲ್ಲಿ ಲೋಪ ಆಯ್ತೇ?’

‘ಏನೋ ಗೊತ್ತಿಲ್ಲ, ನೀವು ಪಾದಕ್ಕೆ ಬಿದ್ದಾಗ ಸ್ವಾಮೀಜಿಗಳು ಕೋಪಗೊಂಡು ಮುಖ ಕಿವುಚಿ ಕೊಂಡಿದ್ದರು... ಆ ಮಠಗಳತ್ತ ಮತ್ತೊಂದು ಸುತ್ತಿನ ಯಾತ್ರೆ ತೆರಳಿ ಸ್ವಾಮೀಜಿಗಳನ್ನು ಒಲಿಸಿಕೊಳ್ಳಿ...’

‘ಹೌದ್ಹೌದು. ಕಾವಿ ದೇವರುಗಳ ಕೋಪ-ಶಾಪದಿಂದ ಚುನಾವಣೆ ಫಲಿತಾಂಶಗಳೇ ಬದಲಾಗಿವೆ. ಕುರ್ಚಿಗಳೇ ಅದಲು
ಬದಲಾಗಿವೆ! ಅವರ ಆಶೀರ್ವಾದವಿಲ್ಲದೆ ನಮಗೆ ಏಳಿಗೆಯಿಲ್ಲ...’ ಜನನಾಯಕರು ಭಯಭಕ್ತಿಯಿಂದ ಕೆನ್ನೆ ತಟ್ಟಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT