ಚುರುಮುರಿ: ತಟಸ್ಥ ನೀತಿ!

ಹರಟೆಕಟ್ಟೆಯಲ್ಲಿ ಗುಡ್ಡೆ, ದುಬ್ಬೀರನ ಕೋಳಿ ಜಗಳ ತಾರಕಕ್ಕೇರಿತ್ತು. ‘ಲೇ ಬ್ಯಾಡ ನೋಡು, ನನ್ ಕೆಣಕಿದ್ರೆ ನಿನ್ನ ಉಕ್ರೇನ್ ತರ ದೂಳೀಪಟ ಮಾಡಿ ಬಿಸಾಕ್ತೀನಿ’ ಎಂದ ಗುಡ್ಡೆ.
ದುಬ್ಬೀರ ಏನ್ ಕಮ್ಮಿ? ‘ಲೇಯ್ ಯುದ್ಧ ಶುರುವಾಗಿ ತಿಂಗಳ ಮೇಲಾತು. ಉಕ್ರೇನ್ದು ಏನೂ ಕಿತ್ಕಳಕಾಗ್ಲಿಲ್ಲ. ನಾನು ಒಂದ್ಸಲ ಎದ್ದೆ ಅಂದ್ರೆ ನಿನ್ ಕಥೆ ಮುಗೀತು ಅಷ್ಟೆ ಈಗ...’ ಎಂದ.
ಕೊಟ್ರೇಶಿಗೆ ನಗು. ‘ಲೇ ದುಬ್ಬೀರ, ನಿಂಗೆಲ್ಲಿ ಏಳೋಕಾಗ್ತತಲೆ, ಮಂಡಿ ನೋವು ಅಂತಿದ್ದೆ?’ ಎಂದ.
‘ಮತ್ ನೋಡಲೆ... ಪೆಟ್ರೋಲು, ಹಾಲು, ಕರೆಂಟು ಎಲ್ಲ ದುಬಾರಿಯಾಗಿದಾವೆ, ಜನ ಬದುಕೋದು ಹೆಂಗೆ ಅಂದ್ರೆ ಇವ್ನು ಹಿಜಾಬ್ ನೋಡು, ಹಲಾಲ್ ನೋಡು, ಮೈಕಿನ ಸೌಂಡ್ ನೋಡು ಅಂತಾನೆ. ಅದ್ಕೂ ಇದ್ಕೂ ಏನ್ ಸಂಬಂಧ?’ ದುಬ್ಬೀರ ವಾದಿಸಿದ.
‘ಅಂದ್ರೆ? ಮೊದ್ಲು ದೇಶ ಉಳೀಬೇಕಲೆ, ಪೆಟ್ರೋಲು ಐನೂರ್ ರೂಪಾಯಾಗ್ಲಿ ನಮ್ ಧರ್ಮ ಉಳೀಬೇಕು. ನಿಮ್ಮಂಥೋರಿಂದ್ಲೇ ಬ್ರಿಟೀಷರಿಗೆ ನಾವು ಗುಲಾಮರಾಗಿದ್ದು... ಕಚಡಾ ಫೆಲೋ’ ಗುಡ್ಡೆ ಮತ್ತಷ್ಟು ರಾಂಗಾದ.
‘ಕಚಡ ನೀನು, ತೊಟ್ಟಿ, ಗುಡ್ಡೆ ಮಾಂಸ ಮಾರೋ ಚಿಲ್ರೆ...’ ದುಬ್ಬೀರ ಬಬ್ರುವಾಹನನ ಅವತಾರ ತಾಳಿದ.
ಇಬ್ಬರ ಜಗಳ ತಾರಕಕ್ಕೇರಿದ್ರೂ ತೆಪರೇಸಿ ಮಾತ್ರ ಪಿಟಿಕ್ಕನ್ನದೆ ಕುಳಿತಿದ್ದನ್ನು ಕಂಡ ಕೊಟ್ರೇಶಿ ‘ಯಾಕೋ ತೆಪರ ಏನೂ ಮಾತಾಡ್ತಿಲ್ಲ?’ ಎಂದ.
‘ನಂದು ತಟಸ್ಥ ನೀತಿ ಕಣಲೆ’ ಎಂದ ತೆಪರೇಸಿ.
‘ತಟಸ್ಥ ನೀತಿನಾ? ಯಾಕೆ?’
‘ನಾವು ತಟಸ್ಥರಾಗಿದ್ದಕ್ಕೇ ನಮಗೆ ರಷ್ಯಾದಿಂದ ಕಮ್ಮಿ ರೇಟಲ್ಲಿ ಎಣ್ಣಿ... ಐ ಮೀನ್ ಕಚ್ಚಾ ತೈಲ ಸಿಕ್ತು...’
‘ಅದಕ್ಕೆ?’
‘ಇವರ ಜಗಳದಲ್ಲೂ ನಾನು ತಟಸ್ಥನಾಗಿದ್ರೆ ಇಬ್ಬರತ್ರನೂ ಒಂದೊಂದ್ ದಿನ ಎಣ್ಣಿ... ಐ ಮೀನ್ ಬಾರ್ ಬಿಲ್ ಪೀಕಿಸ್ಬಹುದು ಅಂತ...’
‘ಎಲಾ ಪಾಪಿ’ ಎಂದ ಕೊಟ್ರೇಶಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.