ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಉತ್ತರವಿಲ್ಲದ ಪ್ರಶ್ನೆಗಳು!

Last Updated 6 ಜನವರಿ 2022, 19:31 IST
ಅಕ್ಷರ ಗಾತ್ರ

ಕರ್ಫ್ಯೂಗೆ ಹೆದರಿ ರಾತ್ರಿ ಹತ್ತು ಗಂಟೆ ಒಳಗೆ ಮನೆ ಸೇರಿಕೊಳ್ಳಲು ಬೈಕ್ ಹತ್ತಿದ ವರದಿಗಾರ ತೆಪರೇಸಿಗೆ ಸ್ವಲ್ಪ ದೂರ ಹೋದ ನಂತರ ಹಿಂದುಗಡೆ ಬೈಕ್ ಯಾಕೋ ಭಾರವಾದಂತೆನಿಸಿತು. ಯಾರೋ ಹೆಗಲ ಮೇಲೆ ಕೈ ಇಟ್ಟಂತಾಗಿ ಹೆದರಿಕೆಯಾಯಿತು.

ಅಷ್ಟರಲ್ಲಿ ‘ಹೆದರಬೇಡ, ನಾನು ಹುಣಸೆಮರದ ಬೇತಾಳ. ನನ್ನ ಕೆಲ ಪ್ರಶ್ನೆಗಳಿಗೆ ಉತ್ತರ ಬೇಕು. ಕೊಡುತ್ತೀಯ?’ ಎಂದಿತು ಒಂದು ಧ್ವನಿ.

‘ಸರಿ, ಏನದು ಕೇಳು’ ಎಂದ ತೆಪರೇಸಿ, ಉಗುಳು ನುಂಗುತ್ತ.

‘ನೀವು ಟೀವಿಯೋರ ಪ್ರಕಾರ ಕೊರೊನಾ ತಳಿಗಳು ಇನ್ನೂ ಎಷ್ಟಿವೆ? ಅವು ರಾತ್ರಿ ಮಾತ್ರ ಓಡಾಡ್ತವಾ? ಅಥ್ವಾ ವೀಕೆಂಡ್‌ನಲ್ಲಿ ಮಾತ್ರ ಹೊರಗೆ ಬರ‍್ತಾವ?’

‘ಗೊತ್ತಿಲ್ಲ’ ಎಂದ ತೆಪರೇಸಿ.

‘ಇಷ್ಟು ದಿನ ಲಸಿಕೆ ಕೊಟ್ಟದ್ದು ಏನು ಭೇದಿ ನಿಲ್ಲೋಕಾ ಅಥ್ವಾ ಚರ್ಮ ಕಡಿತಕ್ಕಾ?’

‘ಅಲ್ಲ ಅನ್ಸುತ್ತೆ, ಗೊತ್ತಿಲ್ಲ’.

‘ಹೋಗ್ಲಿ ಬಿಡು, ರಾಜಕೀಯಕ್ಕೆ ಬರ‍್ತೀನಿ. ಮಂಡಿನೋವಿಗೂ ಮುಖ್ಯಮಂತ್ರಿ ಕುರ್ಚಿಗೂ ಏನಾದ್ರು ಸಂಬಂಧ ಇದೆಯಾ?’

‘ಇರಬಹುದು, ಆದ್ರೆ ಗೊತ್ತಿಲ್ಲ’.

‘ಕಾಂಗ್ರೆಸ್ ಪಾದಯಾತ್ರೆಗೂ ಬಿಜೆಪಿ ಕರ್ಫ್ಯೂಗೂ ಏನಾದ್ರು ಸಂಬಂಧ ಇದೆಯಾ?’

‘ಗೊತ್ತಿಲ್ಲ, ಇರಬಹುದು ಇಲ್ಲದಿರಬಹುದು’.

‘ಈಗ ಪಾದಯಾತ್ರೆ ಅಂದ್ರೆ ನೂರಾರು ಜನ ಸೇರಬೇಕು. ಇಬ್ರು ನಡೆದ್ರೂ ಅದು ಪಾದಯಾತ್ರೆನಾ?’

‘ಗೊತ್ತಿಲ್ಲ, ಅದು ಅವರಿಷ್ಟ’.

‘ನೀನು ಎಲ್ಲದಕ್ಕೂ ಹಿಂಗೆ ಗೊತ್ತಿಲ್ಲ, ಗೊತ್ತಿಲ್ಲ ಅಂದ್ರೆ ನಾನು ನಿನ್ನ ವಿರುದ್ಧವೇ ಪಾದಯಾತ್ರೆ ಮಾಡ್ಬೇಕಾಗುತ್ತೆ ಅಷ್ಟೆ’ ಬೇತಾಳ ಎಚ್ಚರಿಸಿತು.

‘ಮಾಡು, ಆದ್ರೆ ನಿಂಗೆ ಪಾದಗಳೇ ಇಲ್ಲವಲ್ಲ?’ ತೆಪರೇಸಿ ನಕ್ಕ. ಬೇತಾಳ ಮರುಮಾತಾಡದೆ ಹಾರಿ ಹೋಗಿ ಹುಣಸೆಮರಕ್ಕೆ ನೇತು ಹಾಕಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT