ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಬುಲ್‌ ಬುಲ್ ಬೇಕು!

Last Updated 6 ಸೆಪ್ಟೆಂಬರ್ 2022, 17:25 IST
ಅಕ್ಷರ ಗಾತ್ರ

‘ಏನ್ರೀ ಬೀಚ್‌ಗೆ, ಅಲ್ಲ... ಆಫೀಸ್‌ಗೆ ಹೋಗಲ್ವ’ ರೇಗಿಸಿದಳು ಹೆಂಡತಿ.

ತವರೂರಿನಲ್ಲೇ ಹೋಗಿ ನೆಲೆಸೋಣ ಅನ್ನೋ ಅವಳ ಸಲಹೆಗೆ, ‘ಬೆಂಗಳೂರಿನಂಥ ಐಟಿ ಸಿಟಿ ಬಿಟ್ಟು ನಿಮ್ಮ ತವರೂರಿಗೆ ಬಂದು ನಾನೇನು ನೊಣ ಹೊಡೆಯಬೇಕಾ?’ ಎಂದು ಹಿಂದೊಮ್ಮೆ ನಾನಾಡಿದ ಮಾತಿಗೆ ಈಗ ಸೇಡು ತೀರಿಸಿಕೊಳ್ಳುವಂತೆ ಮಾತಾಡುತ್ತಿದ್ದಳು.

‘ರಾತ್ರಿ ಮಳೆ ಬಂದರೆ, ಗುಂಡಿ ಎಷ್ಟು ಆಳ ಇದೆ ಅಂತ ಗೊತ್ತಾಗದೆ ಬಿದ್ದಿಗಿದ್ದೀರಾ, ತಗೊಳ್ಳಿ ಈ ಹೆಲ್ಮೆಟ್‌ ಹಾಕ್ಕೊಳ್ಳಿ...’

‘ಹಾಗೇನಿಲ್ಲ, ನಾನು ಐದು ವರ್ಷದಿಂದ ಅದೇ ರಸ್ತೇಲಿ ಓಡಾಡ್ತಿರೋದು. ಆಗಿನಿಂದಲೂ ಗುಂಡಿಗಳು ಹಾಗೇ ಇವೆ. ಯಾವ್ಯಾವ ಗುಂಡಿ ಎಷ್ಟು ಆಳ ಇದೆ ಅಂತ ಗೊತ್ತು’.

‘ನಿಮ್ಮ ಐಟಿ ಸಿಟಿಯಲ್ಲಿ ಓಡಾಡೋಕೆ ಬೋಟ್‌ ಬೇಕಾಗುತ್ತೆ ಅನಿಸುತ್ತೆ. ನಮ್ಮಪ್ಪಂಗೆ ಹೇಳಿ ಒಂದು ಕೊಡಿಸ್ಲಾ’ ಮತ್ತೆ ಕಾಲೆಳೆದಳು.

‘ಕಿಚಾಯಿಸಿದ್ದು ಸಾಕು. ಊಟದ ಬಾಕ್ಸ್‌ ಕೊಡು’ ಎಂದೆ ಸಿಟ್ಟಿನಲ್ಲಿ. ಮೂರು ಬಾಕ್ಸ್‌ ಕೈಗಿಟ್ಟಳು.

‘ಮೂರು ಬಾಕ್ಸ್‌ ಏಕೆ?’

‘ಒಂದು ಮಧ್ಯಾಹ್ನಕ್ಕೆ, ಮತ್ತೊಂದು ರಾತ್ರಿಗೆ. ಇನ್ನೊಂದು ನಾಳೆ ಬೆಳಿಗ್ಗೆಗೆ. ನೀವು ಸಿಲ್ಕ್‌ಬೋರ್ಡ್‌ ರೋಡ್‌ ಟ್ರಾಫಿಕ್ ದಾಟಿಕೊಂಡು ಬರೋದು ನಾಳೆ ಮಧ್ಯಾಹ್ನವೇ ಆಗಬಹುದು’ ನಕ್ಕಳು.

‘ಅನ್ನ ಕೊಟ್ಟ ಬೆಂಗಳೂರಿಗೆ ಬೈಬೇಡ ನೋಡು’.

‘ಊರಿಗೆ ಬೈತಿಲ್ಲ ರೀ... ನಿಮ್ಮ ಎಮ್ಮೆಲ್ಲೆ, ಎಂಪಿಗಳಿಗೆ ಬೈತಿರೋದು’.

‘ಎಮ್ಮೆಲ್ಲೆ ನಮ್ಮ ಕ್ಯಾಸ್ಟ್, ಎಂಪಿ ನಮ್ಮ ರಿಲಿ ಜನ್ ಅಂತ ಗೊತ್ತಿಲ್ವ ನಿಂಗೆ’ ಸಿಟ್ಟಲ್ಲೇ ಹೇಳಿದೆ.

‘ಹೋಗ್ಲಿ ಬಿಡಿ. ನಿಮ್ಮ ಎಮ್ಮೆಲ್ಲೆ, ಎಂಪಿಗಳು ಮಾಡಿರೋ ಚಿನ್ನದ ರಸ್ತೆ ಬಗ್ಗೆನೂ ನಾನು ಆಡ್ಕೊಳಲ್ಲ. ಸುಮ್ನೆ ತಲೆನೋವ್ಯಾಕೆ, ಒಂದು ಐಡಿಯಾ ಕೊಡ್ಲಾ?’

‘ಹೇಳು’.

‘ನಿಮಗೊಂದು, ನಿಮ್ಮ ಮಕ್ಕಳಿಗೆ ಒಂದೊಂದು ಬುಲ್‌ ಬುಲ್‌ ತಗೊಂಡ್ ಬಿಡಿ. ಆಫೀಸ್–ಮನೆ–ಸ್ಕೂಲ್‌ಗೆ ಹಾರಾಡ್ಕೊಂಡು ಇರಬಹುದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT