ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಹೆಬ್ಬೆಟ್ಟು ವಿವಾದ!

Last Updated 17 ಫೆಬ್ರುವರಿ 2022, 20:42 IST
ಅಕ್ಷರ ಗಾತ್ರ

‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪರಿಷತ್ತಿನ ಮತದಾರರ ಬಗ್ಗೆ ಸರಿಯಾದ ಮಾಹಿತಿಯಿಲ್ಲ!’ ಬದ್ರಿಯ ಹೇಳಿಕೆ ತಿಂಗಳೇಶನ ಹುಬ್ಬೇರಿಸಿತು.

‘ಅತ್ಯಧಿಕ ಮತ ಪಡೆದು ಆಯ್ಕೆಯಾದ ಅಧ್ಯಕ್ಷರಿಗೇ ಮಾಹಿತಿ ಇಲ್ಲ ಅಂದ್ರೆ ಹೇಗೆ?’

‘ಅವರಿಗೆ ಅಧಿಕೃತ ಮಾಹಿತಿ ಇದ್ದಿದ್ದರೆ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ ಮೂವತ್ತು ಸಾವಿರ ಹೆಬ್ಬೆಟ್ಟುಗಳು ಇದ್ದಾರೆಂದು ತಪ್ಪು ಮಾಹಿತಿ ನೀಡಿ ಬಂಡಾಯ ಸಾಹಿತಿಗಳ ದಾರಿ ತಪ್ಪಿಸುತ್ತಿದ್ದಿಲ್ಲ’.

‘ನಿನ್ನ ಪ್ರಕಾರ ಆ ಸಂಖ್ಯೆ ಎಷ್ಟು?’

‘ಎಲ್ಲಾ ಕಸಾಪ ಸದಸ್ಯರೂ ಹೆಬ್ಬೆಟ್ಟುಗಳೇ!’

‘ಇದೇನಪಾ... ಕೆಂಪುಕೋಟೆ ಮೇಲೆ ಧರ್ಮದ ಧ್ವಜ ಹಾರಿಸಿದಂತಿದೆ ನಿನ್ನ ಹೇಳಿಕೆ! ಈ ಸಂಖ್ಯೆಯನ್ನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ತೆಗೆದುಕೊಂಡೆಯಾ?’

‘ಹಾಗೇ ಅಂದುಕೋ. ಆದರೆ ಅರ್ಜಿಗೆ ಸಹಿ ಹಾಕಿದ್ದೆನೋಹೆಬ್ಬೆಟ್ಟುಒತ್ತಿದ್ದೆನೋ ಅಂತ ಕೆದಕಬೇಡ. ಪರಿಷತ್ತಿನ ಮಾಹಿತಿ ಸಾಹಿತಿಗಳ ಮೂಲಭೂತ ಹಕ್ಕು’.

‘ಹಕ್ಕು ಹೌದು, ಆದರೆ ಅದು ಮೂಲಭೂತ ಹಕ್ಕೋ ಮೂಲಭೂತವಾದದ ಕುಮ್ಮಕ್ಕೋ ನಿರ್ಧರಿಸೋರು ಯಾರು?’

‘ನೀನು ಮೂಲ ವಿಷಯ ಮರೆಮಾಚಿ ಕೋರ್ಟು ಕಟಕಟೆಯಲ್ಲಿ ನಿಲ್ಲಿಸಬೇಡ. ಕಸಾಪ ಸದಸ್ಯರಷ್ಟೇ ಅಲ್ಲ, ಎಲ್ಲ ಚುನಾವಣೆಗಳ ಎಲ್ಲ ಮತದಾರರೂ ಹೆಬ್ಬೆಟ್ಟುಗಳೇ…’

‘ಚುನಾಯಿತ ಪ್ರಜಾಪ್ರತಿನಿಧಿಗಳ ಯೋಗ್ಯತೆ ನೋಡಿದರೆ ಹಾಗೇ ಅನ್ನಿಸುತ್ತದೆ, ನಿಜ. ಆದರೆ ನೀವು ಕವಿಗಳು ಏನೇನೋ ಅರ್ಥ ಅಂಟಿಸಿಬಿಡುತ್ತೀರಿ’.

‘ನನ್ನ ಹೇಳಿಕೆಗೆ ಆಧಾರ್ ಕಾರ್ಡೇ ಆಧಾರ. ಎಲ್ಲ ಕಾರ್ಯಗಳಿಗೂ ಅದೇ ಅಧಿಕೃತ ಗುರುತುಪತ್ರ. ಅದರಲ್ಲಿ ಯಾರ ಸಹಿಯೂ ಇಲ್ಲ.ಹೆಬ್ಬೆಟ್ಟುಮತ್ತದರ ನಾಲ್ವರು ಸೋದರ ಬೆಟ್ಟುಗಳನ್ನು ನಂಬಿ ಮತದಾರರಿಗೆ ಆಧಾರ ಕಲ್ಪಿಸಲಾಗಿದೆ’.

‘ಹಾಗಾದರೆ ಇಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುತ್ತದೆ. ಹೆಬ್ಬೆಟ್ಟುಗಳ ಮತ ಪಡೆದು ಆರಿಸಿಬಂದವರಿಗೆ ಅದೇ ಹೆಬ್ಬೆಟ್ಟುಗಳ ಬಗ್ಗೆ ಮಾತಾಡುವ ಹಕ್ಕು ಇದೆಯೇ? ಇದ್ದರೆ ಆ ಹಕ್ಕಿನ ರಕ್ಷಣೆ ಹೇಗೆ? ಇಲ್ಲದಿದ್ದರೆ ವಾಕ್ ಸ್ವಾತಂತ್ರ್ಯದ ಹರಣವಾಗುವುದಿಲ್ಲವೇ?’

‘ಆಯ್ತು,ಹೆಬ್ಬೆಟ್ಟುವಿವಾದವನ್ನು ಬಹುಸದಸ್ಯ ಸಂವಿಧಾನ ಪೀಠ ಬಗೆಹರಿಸುವವರೆಗೆ ನಾವೆಲ್ಲಾ ನಿಪ್ಪಟ್ಟು ತಿಂತಿರೋಣ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT