ಶನಿವಾರ, ಮೇ 30, 2020
27 °C

ಒಂಟಿಕಾಲು ಸಂಕಲ್ಪ!

ಗುರು ಪಿ. ಎಸ್‌ Updated:

ಅಕ್ಷರ ಗಾತ್ರ : | |

‘ಎಲ್ಲರೂ ತುದಿಗಾಲಲ್ಲಿ ನಿಂತು ನೋಡೋ ಸಿನಿಮಾ ತೆಗಿತೀನಿ ನೋಡ್ತಿರಿ ಸಾರ್’ ಎಂದ ಪ್ರೊಡ್ಯೂಸರ್ ಮುದ್ದಣ್ಣ.

‘ಯಾವುದರ ಬಗ್ಗೆ’ ಕೇಳ್ದ ವಿಜಿ.

‘ಕೃಷಿ ಮತ್ತು ಕಾರ್ಮಿಕರ ಬಗ್ಗೆ ಸಾರ್’.

‘ಫ್ರೀಯಾಗಿ ಟಿಕೆಟ್‌ ಹಂಚಿದ್ರೂ ಇಂಥ ಸಿನಿಮಾ ಯಾರೂ ನೋಡಲ್ಲ’.

‘ಹಾಗಾದರೆ, ಯಾವ ಕಥೆ ಮಾಡ್ಲಿ?’

‘ಕೊರೊನಾ ಕಥೇನೆ ಮಾಡು. ಸೂಪರ್‌ಸ್ಟಾರ್‌ ಒಬ್ರು ಹೀರೊ ಆಗಲಿ’.

‘ಇಂಟರೆಸ್ಟಿಂಗ್ ಸಾರ್, ಮುಂದೆ...’

‘ಕೊರೊನಾ ಒದ್ದೋಡಿಸಲು ಎಲ್ಲರೂ ಕೈಗಳನ್ನು ಮೇಲೆ ಮಾಡಿ, ಒಂಟಿ ಕಾಲಲ್ಲಿ ನಿಲ್ಲಬೇಕು ಎಂದು ಹೀರೊ ಕಡೆಯಿಂದ ಹೇಳಿಸು. ಇಡೀ ಸಿನಿಮಾದಲ್ಲಿ ಹೀರೊ ಇದೊಂದೇ ಡೈಲಾಗ್ ಹೇಳಬೇಕು’.

‘ಕಥೆ ಹೆಂಗೆ ಕಂಟಿನ್ಯೂ ಆಗುತ್ತೆ ಸಾರ್’.

‘ಆ ಸೂಪರ್‌ಸ್ಟಾರ್ ಒಂದು ಡೈಲಾಗ್ ಹೇಳಿದ್ರೆ ಸಾಕು, ವಿವರಣೆಯೆಲ್ಲ ಅಭಿಮಾನಿಗಳೇ ಕೊಡ್ತಾರೆ. ಒಂಟಿ ಕಾಲಿನಲ್ಲಿ ನಿಲ್ಲುವುದರಿಂದ ರೋಗ ನಿರೋಧಕಶಕ್ತಿ ಹೆಚ್ಚಾಗುತ್ತದೆ. ಒಂದು ಕಾಲು ಮೊಣಕಾಲಿನ ಮೇಲೆ ಇಡುವುದರಿಂದ ಎರಡು ಅಡಿಯಷ್ಟು ಅಂತರ ಇರುತ್ತದೆ. ಅಲ್ಲದೆ, ಕೈಗಳನ್ನು ಮೇಲೆ ಮಾಡುವುದರಿಂದ ಬೆವರ ವಾಸನೆಗೆ...’

‘ಛೀ...’

‘ಸಾಮಾಜಿಕ ಅಂತರ ತಂತಾನೇ ಮೆಯ್ನ್‌ಟೇನ್‌ ಆಗುತ್ತೆ ಅಂದೆ ಮುದ್ದಣ್ಣ’ .

***

‘ಸಾರ್‌, ನಿಮ್‌ ಐಡ್ಯಾದಿಂದ ಸಿನಿಮಾ ಸೂಪರ್‌ ಆಗಿ ಓಡ್ತಿದೆ’ ಖುಷಿಯಿಂದ ಓಡಿಬಂದ ಮುದ್ದಣ್ಣ.

‘ನನ್ನ ಐಡಿಯಾದ ಪ್ರಭಾವ ಅಲ್ಲ, ಅದು ಸೂಪರ್‌ಸ್ಟಾರ್ ಮಹಿಮೆ. ಏನು ಹೇಳಿದ್ರು ಅನ್ನೋದಕ್ಕಿಂತ, ಯಾರು ಹೇಳಿದ್ರು ಅನ್ನೋದು ಮುಖ್ಯ. ಅವರ ಫೇಮ್‌ನ ಬಳಸಿಕೊಂಡ್ವಿ ಅಷ್ಟೆ’.

‘ಪ್ರೇಕ್ಷಕರೂ ಒಂಟಿಕಾಲಲ್ಲೇ ನಿಂತು ಸಿನಿಮಾ ನೋಡ್ತಿದಾರೆ ಸಾರ್’.

‘ಅಂತೂ ಎಲ್ಲರೂ ತುದಿಗಾಲಲ್ಲಿ ನಿಂತು ನೋಡೋ ಸಿನಿಮಾ ಮಾಡಿಬಿಟ್ಯಲ್ಲ ಮುದ್ದಣ್ಣ’ ಬೆನ್ನುತಟ್ಟಿದ ವಿಜಿ.
ಕೊನೆಗೆ ಹಾಡು ಕೇಳಲಾರಂಭಿಸಿತು. ‘ಕೊರೊನಾ ಗೊ... ಕೊರೊನಾ ಗೊ... ಕೊರೊನಾ ಗೊ ಗೊ ಗೊ ಕೊರೊನಾ ಗೊ...’

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.