ಭಾನುವಾರ, ಸೆಪ್ಟೆಂಬರ್ 27, 2020
21 °C

ಡಾಕ್ಟರ್ ತೆಪರೇಸಿ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಇಪ್ಪತ್ತು ವರ್ಷಗಳ ನಂತರ ತನ್ನ ಹೈಸ್ಕೂಲ್ ಮಾಸ್ತರು ಅಕಸ್ಮಾತ್ ರಸ್ತೆಯಲ್ಲಿ ಕಂಡಾಗ ತೆಪರೇಸಿಗೆ ಖುಷಿಯಾಯಿತು. ‘ಸಾರ್ ನಮಸ್ಕಾರ, ನಾನು ಯಾರೂಂತ ಗುರುತು ಸಿಕ್ತಾ? ನಾನ್ಸಾರ್, ತೆಪರೇಸಿ... ನಿಮ್ ಕ್ಲಾಸ್‍ನಲ್ಲಿ ಯಾವಾಗ್ಲೂ ತರ‍್ಲೆ ಮಾಡ್ತಿದ್ನಲ್ಲ...’

ಮಾಸ್ತರು ಕಣ್ಣು ಕಿರಿದು ಮಾಡಿ ನೋಡಿದರು ‘ಓ... ನೀನೇನಯ್ಯಾ ತೆಪರೇಸಿ? ಏನ್ಮಾಡ್ತಿದೀಯ ಈಗ?’

‘ಗುಜರಿ ಅಂಗಡಿ ಇಟ್ಕೊಂಡಿದೀನಿ ಸಾ, ಜೊತೆಗೆ ರಾಜಕೀಯ, ಸಮಾಜ ಸೇವೆ ಅದೂ ಇದೂ ಮಾಡ್ತಾ ಈಗ ಡಾಕ್ಟರ್ ತೆಪರೇಸಿ ಆಗಿದೀನಿ...’

‘ಹೌದಾ? ಡಾಕ್ಟರಾ? ಅದ್ಹೆಂಗೆ?’

‘ನನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ ಸಾ, ನೇಪಾಳ ಯೂನಿವರ್ಸಿಟಿಯೋರು ಕೊಟ್ಟಿದಾರೆ’.

‘ಓ ಹೌದಾ? ಏನು ಕಡಿದು ಗುಡ್ಡೆ ಹಾಕಿದೆ ಅಂತ ಕೊಟ್ರಯ್ಯ ನಿಂಗೆ? ಸ್ಕೂಲ್‍ನಲ್ಲಿ ನಮಗೆಲ್ಲ ಜಾಪಾಳ ಮಾತ್ರೆ ಕೊಟ್ಟಿದ್ದಲ್ಲ, ಅದ್ಕೆ ನೇಪಾಳದೋರು ನಿಂಗೆ ಡಾಕ್ಟರೇಟ್ ಕೊಟ್ರಾ?’

‘ಏನೋ ಬಿಡಿ ಸಾ, ಅದು ಸಿಕ್ಕ ಮೇಲೆ ದೇವ್ರಾಣೆ ನನ್ನ ಗೌರವ ಹೆಚ್ಚಾಗೇತಿ ಸಾ...’

‘ಅಂದ್ರೆ ಮೊದ್ಲು ಇರಲಿಲ್ಲ ಅಂತಾಯ್ತು. ಹೋಗ್ಲಿ ಎಸ್ಸೆಸ್ಸೆಲ್ಸಿ ಪಾಸ್ ಮಾಡಿದ್ಯೋ ಇಲ್ವೋ?’

‘ಇಲ್ಲ ಸಾ, ಗಣಿತ ಒಂದು ಹಂಗೆ ಉಳ್ಕೊಂಬಿಡ್ತು...’

‘ನಿನ್ತಲೆ, ಮತ್ತೆ ಡಾಕ್ಟರ್ ತೆಪರೇಸಿ ಅಂತ ಕರ್ಕಳೋಕೆ ನಾಚಿಕೆ ಆಗಲ್ವೇನೋ ಮಾನಗೆಟ್ಟೋನೆ...’

‘ಬೈಬೇಡಿ ಸಾ, ನಾನೀಗ ಗುಜರಿ ಉದ್ಯಮದಲ್ಲಿ ಭಾರೀ ಎಕ್ಸ್‌ಪರ್ಟು. ಅದ್ಕೇ ಕೊಟ್ಟಿದಾರೆ...’

‘ಅಂದ್ರೆ ಗುಜರಿ ಡಾಕ್ಟ್ರು ಅನ್ನು’

‘ಹಂಗೇ ಅನ್ಕಳಿ ಸಾ... ಆಮೇಲೆ ಒಂದು ವಿಷಯ... ನೀವು ದುಡ್ಡೇನೂ ಕೊಡಬೇಡಿ’.

‘ದುಡ್ಡಾ? ನಾನ್ಯಾಕೆ ಕೊಡ್ಲಿ?’

‘ಅಲ್ಲ ದುಡ್ಡು ನಾನೇ ಕೊಡ್ತೀನಿ, ನಿಮ್ಮ ಋಣ ತೀರಿಸ್ಬೇಕು ಅಂತ ಆಸೆ’.

‘ಋಣಾನಾ? ಹೆಂಗ್ ತೀರಿಸ್ತೀಯ?’

‘ನಿಮಗೂ ಒಂದು ಗೌರವ ಡಾಕ್ಟರೇಟ್ ಕೊಡ್ಸೋಣ ಅಂತ. ಬೇಡ ಅನ್ಬೇಡಿ...’

ಮಾಸ್ತರು ಸಿಟ್ಟಿಗೆದ್ದು ‘ಲೇ ಮೂರ್ಖಾ...’ ಎಂದು ಒಂದು ಆವಾಜ್ ಹಾಕ್ತಿದ್ದಂಗೆ ಡಾ. ತೆಪರೇಸಿ ನಾಪತ್ತೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.