ಚುರುಮುರಿ: ಹಾವೇರಿ– ಕಾವೇರಿ

‘ಹಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್’ ಮೊಮ್ಮಗ ಅಕ್ಷರ, ಹೇಳ್ಕೊತಾಯಿದ್ದ. ‘ಹಾವೇರಿಯಿಂದ ಅಲ್ವೋ, ಕಾವೇರಿಯಿಂದ...’
‘ಇರಲಿ ಬಿಡ್ರೀ... ಮಗು ಅಷ್ಟಾರೂ ಹೇಳುತ್ತೆ. ಈಗಿನ ಮಕ್ಕಳಂತೆ ಟಸ್ಸು ಪುಸ್ಸು ಅಂತ ಇಂಗ್ಲಿಷಲ್ಲಿ ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್’ ಅಂತಲೋ ರೈನ್, ರೈನ್ ಗೋ ಅವೇ ಅಂತಲೋ ಅಪದ್ಧ ಅಪದ್ಧವಾಗಿ ಹೇಳಿಲ್ಲವಲ್ಲ?!’ ಮುದ್ದಿನ ಅಜ್ಜಿಯ ವಕಾಲತ್ತು.
‘ಅದೇನೊ ಸರಿ, ನಮ್ಮಂತಹ ಹಿರೀಕರು ಎಚ್ಚರ ವಹಿಸಿದ್ದರಿಂದ ಇಷ್ಟಾದರೂ ಕನ್ನಡ ಉಳ್ದು, 86ನೇ ಸಾಹಿತ್ಯ ಸಮ್ಮೇಳನದವರೆಗೂ ಬರೋಕೆ ಆಗಿದೆ. ಇಲ್ಲಾಂದ್ರೆ ನಲವತ್ತೆಂಟೋ ಐವತ್ತಕ್ಕೋ ನಿಂತುಬಿಡುತ್ತಿತ್ತೇನೋ!’
‘ಮಧ್ಯದಲ್ಲಿ ನಾಲ್ಕೈದು ಪರ್ಯಾಯ ಸಮ್ಮೇಳನಗಳೂ ಸೇರಿ ತೊಂಬತ್ತೇ ಅಂದುಕೊಳ್ಳಿ’.
‘ಹ್ಞಾಂ, ಹೌದು, ಈಗಲೂ ಒಂದು ಆಯ್ತಲ್ವಾ! ಅಲ್ಲಿಗೆ ಅಕ್ಷರ ಹೇಳಿದ್ದು ಸರಿ- ಅದು ಹಾವೇರಿ ಸಮ್ಮೇಳನ, ಇದು ಕಾವೇರಿ ಸಮ್ಮೇಳನ... ಅದು ಜನ-ಜನಿತ ಸಮ್ಮೇಳನ, ಇದು ಜನ-ಸಾಹಿತ್ಯ ಸಮ್ಮೇಳನ’.
‘ಆದರೆ ಏನ್ರೀ? ಇಷ್ಟು ವರ್ಷದಿಂದ ಗಡಿ ಸಮಸ್ಯೆ, ಉದ್ಯೋಗ, ಭಾಷಾಭಿವೃದ್ಧಿ- ಸುಗ್ರೀವಾಜ್ಞೆ, ಹಿಂದಿ ಹೇರಿಕೆ ಅಂತ ಎಷ್ಟು ವರ್ಷ ಪೇಚಾಡೋದು?’
‘ಸಮ್ಮೇಳನ ಮಾಡಿಬಿಟ್ಟರೆ ಸಮಸ್ಯೆ ಮಾಯ ಅಂತ ಏನಿಲ್ಲಮ್ಮಾ. ಹಾಗಾಗಿದ್ರೆ ಎಂದೋ ಈ ನಾಡು ಪರಮಶಾಂತಿ, ನೆಮ್ಮದಿಯಿಂದ ನಲಿದಾಡಿಬಿಡ್ತಿತ್ತು. ಕಾಲಕಾಲಕ್ಕೆ ಈ ತರಹ ಮೇಳ, ಜಾತ್ರೆ ಮಾಡೋದ್ರಿಂದ ಕನ್ನಡದ ಹೆಮ್ಮೆ, ಪುಸ್ತಕ ಮಾರಾಟ, ಕನ್ನಡಿಗರ ಸಮ್ಮಿಲನ ಹಾಗೇ ಗಡಿ ಪುಂಡಾಟಿಕೆ ಮಾಡೋರಿಗೆ ಒಂದಷ್ಟು ಎಚ್ಚರಿಕೆ- ಇಷ್ಟು ಸಾಕಲ್ಲವೇ?!’
‘ಹೋ... ಅದಕ್ಕೇ ಈ ಸಮ್ಮೇಳನಗಳಿಗೆ ಡಿಮ್ಯಾಂಡೋ?! ನಮ್ಮ ಜಿಲ್ಲೆಗೇ ಬೇಕೂಂತ ಚಿನ್ನದ ಕಾಯಿನ್ ಆಮಿಷಾನೂ ಒಡ್ಡಿದ್ರಂತಲ್ಲಾ’.
‘ನಿನ್ನ ಗಮನಕ್ಕೂ ಬಂತಾ ಅದು! ಏನ್ಮಾಡ್ತೀಯ ಹೇಳು? ಮೌಲ್ಯಗಳು ಕುಸಿತಾಯಿವೆ, ಬೆಲೆಗಳು ಏರ್ತಾಯಿವೆ’.
‘ಅದೇರೀ... ಅದು ಉಲ್ಟಾ ಆಗಬೇಕು, ಆಗ ಮಾತ್ರ ನಾಡು, ದೇಶ ಉದ್ಧಾರ ಆಗೋದು’.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.