ಶುಕ್ರವಾರ, ಮೇ 27, 2022
23 °C

ಚುರುಮುರಿ: ಆರೋಗ್ಯ ಸದನ

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

Prajavani

‘ಪೂಜಾ ರೂಂ ವಿಶಾಲವಾಗಿರಬೇಕು. ಕಿಟಕಿ ಮುಚ್ಚಿದರೂ ಬಾತ್ ರೂಮ್‌ನಲ್ಲಿ ಬೆಳಕಿರಬೇಕು, ಕಿಚನ್ ಹೊಗೆಮುಕ್ತವಾಗಿರಬೇಕು, ಹಾಗೆ ಮನೆಯ ಪ್ಲಾನ್ ಸಿದ್ಧ ಮಾಡಿ...’ ಹೊಸ ಮನೆ ಕಟ್ಟಿಸುವ ಸಡಗರದಲ್ಲಿ ಎಂಜಿನಿಯರ್‌ಗೆ ಅನು ಸಲಹೆ ಮಾಡಿದಳು.

‘ಮನೆಯ ಆಯಾ, ಪಾಯ ಸರಿಯಿರಬೇಕು, ವಾಸ್ತುಲೋಪ ಇರಬಾರದು’ ಗಿರಿ ಹೇಳಿದ.

‘ಕಾಂಪೌಂಡ್ ಎತ್ತರವಾಗಿರಲಿ. ಕಳ್ಳರು, ಕೊರೊನಾ ಮನೆಗೆ ನುಗ್ಗಲು ಆಗಬಾರದು’ ಎಂದಳು ಅನು.

‘ಕೊರೊನಾಗೆ ಕಾಂಪೌಂಡ್ ಕಟ್ಟಲಾಗುತ್ತಾ ಮೇಡಂ?’ ಎಂದರು ಎಂಜಿನಿಯರ್.

‘ಕೊರೊನಾ ಕಾಟದಲ್ಲಿ ಆರೋಗ್ಯಕರ ಮನೆ ಕಟ್ಟಿಕೊಳ್ಳದಿದ್ದರೆ ನಾವು ಬಾಳೋದು ಕಷ್ಟ ಆಗುತ್ತೆ’ ಗಿರಿ ಆತಂಕಪಟ್ಟ.

‘ಆಗಲಿ ಸಾರ್, ಕೊರೊನಾ ಕೇರ್ ಮನೆ ನಿರ್ಮಾಣಕ್ಕೆ ಪ್ಲಾನ್ ಸಿದ್ಧಮಾಡ್ತೀನಿ’ ಎಂಜಿನಿಯರ್ ಹೇಳಿದರು.

‘ಹೋಂ ಕ್ವಾರಂಟೈನ್‍ಗೆ ಸ್ಥಳಾವಕಾಶ ಮಾಡಿ’ ಅಂದ ಗಿರಿ.

‘ಮಾಡ್ತೀನಿ, ನಿಮ್ಮ ಮಗನ ಆನ್‍ಲೈನ್ ಕ್ಲಾಸಿಗೆ ಸೌಂಡ್‍ಪ್ರೂಫ್ ರೂಂ ಸಿದ್ಧಮಾಡ್ತೀನಿ, ನಿಮ್ಮ ವರ್ಕ್ ಫ್ರಂ ಹೋಂಗೂ ಯೂಸ್ ಆಗುತ್ತೆ. ಜೊತೆಗೆ, ಐಸಿಯು ಬೆಡ್, ಆಕ್ಸಿಜನ್ ಬೆಡ್ ರೆಡಿ ಮಾಡ್ತೀನಿ. ಮುಂದೆ ಆರೋಗ್ಯ ಸೇವೆ ದುಬಾರಿಯಾಗುತ್ತೆ, ಆಸ್ಪತ್ರೆಗಳಲ್ಲಿ ಬೆಡ್ ಸಿಗೋದು ಕಷ್ಟವಾಗಬಹುದು’.

‘ಹೌದ್ಹೌದು, ಕೊರೊನಾದಂತಹ ಇನ್ನಷ್ಟು ಕಾಯಿಲೆಗಳು ವಕ್ಕರಿಸಿಕೊಂಡರೆ ಮುಂದೆ ಉಸಿರಾಡಲು ಆಕ್ಸಿಜನ್ ಕೊಂಡುಕೊಳ್ಳುವ ಕಾಲ ಬರಬಹುದು’.

‘ಹಾಗಾಗಬಾರದು ಅಂತ ಮನೆ ಕಾಂಪೌಂಡಿನಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡ್ತೀನಿ, ನಿಮ್ಮ ಕುಟುಂಬಕ್ಕಾಗುವಷ್ಟು ಆಮ್ಲಜನಕ ಉತ್ಪತ್ತಿಯಾಗುತ್ತದೆ’.

‘ಮಗನನ್ನು ಮೆಡಿಕಲ್ ಓದಿಸಿ, ಮನೆಯಲ್ಲೊಂದು ಮೆಡಿಕಲ್ ಸ್ಟೋರ್ ಇಟ್ಟುಕೊಂಡರೆ ನಮ್ಮ ಮನೆ ಆರೋಗ್ಯ ಕೇಂದ್ರವಾಗಿ ನಾವು ಆರೋಗ್ಯ ಸ್ವಾವಲಂಬಿಯಾಗಬಹುದು ಅಲ್ವಾ?’ ಎಂದ ಗಿರಿ.

‘ಹೌದು ಸಾರ್, ನಾನು ಅಂತಹ ಆರೋಗ್ಯ ಸದನ ಕಟ್ಟಿಕೊಡುತ್ತೇನೆ, ನೀವು ಆನಂದವಾಗಿ ಆರೋಗ್ಯಕರವಾಗಿ ಬಾಳಬಹುದು...’ ಎಂದು ಹೇಳಿ ಎಂಜಿನಿಯರ್ ಹೊರಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.