ಭಾನುವಾರ, ಏಪ್ರಿಲ್ 11, 2021
33 °C

ಹನಿಹನಿ ಟ್ರ್ಯಾಪ್ ಕಹಾನಿ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ತುರೇಮಣೆ ಬ್ಯಾಗು ಹೆಗಲಿಗಾಕಿ ರೆಡಿಯಾಯ್ತಿದ್ದರು. ನಾನು ‘ಇದೇನ್ಸಾರ್ ಯತ್ತಗೋ ಕಡೆಯಂಗೆ ಕಾಣ್ತಾ ಅದೆ?’ ಅಂತ ಕೇಳಿದೆ. ‘ಬಡ್ಡಿಹೈದ್ನೆ ಅಲಾಕಾಗಿ ಯಾಕೆ ಕಾಲಕಳೀತೀಯ ಬಾ ಎಲೆಕ್ಷನ್ ಕ್ಯಾನವಾಸಿಗೋಗಮು! ದಿನಕೆ ಏಡು ಸಾವಿರ, ಸಂದೇಗೆ ಬಿರಿಯಾನಿ ಊಟ, ಕ್ವಾಟ್ರು ಎಣ್ಣೆ ಕೊಟ್ಟಾರಂತೆ!’ ಅಂದ್ರು.

‘ಅಲ್ಲಾ ಯಾವ ಪಾರ್ಟಿ ಕ್ಯಾನವಾಸು ಸಾ?’ ಅಂತ ಕೇಳಿಕ್ಯಂಡೆ. ‘ಪಾರ್ಟಿ ಯಾವುದಾದರೆ ನಿನಗೇನ್ಲಾ, ಕಹಾಂ ಕಹಾಂ ಕಮಾಯ್ ವಹಾಂ ಜಮಾಯ್ ಅಂತ ಕಮಾಯಿಗೆ ಟ್ರಾಪು ಮಾಡಮು’ ಅಂದರು. ‘ಸಾರ್ ಹನಿಟ್ರಾಪಲ್ಲಿ ಭಾಳ ಜನ ಸಿಕ್ಕಿಬಿದ್ದವರಂತೆ! ಅದೆಂಗೆ ಸಾರ್?’ ಅಂತ ವಿಷಯ ಬದಲಾಯಿಸಿದೆ.

‘ಹಗಲೆಲ್ಲಾ ಜನಸೇವೆ ಮಾಡಿ ದಣಿದಿರೋ ನಾಯಕರು ಮಿಡ್‍ನೈಟ್ ಮಸಾಲೆಯಲ್ಲಿ ಹೆಂಗಳವಾದ್ಯಕ್ಕೆ ಮರುಳಾಗಿ ಗಂಡಸ್ತನ ತೋರ್ಸಿ ಮುಗ್ಗುರಿಸಿದ್ದೇ ಹನಿಟ್ರಾಪ್! ಯಾರ‍್ಯಾರ ಸೌಂದರ್ಯೋಪಾಸನೆ ಎಷ್ಟೆಷ್ಟದೋ ಸಿಸಿಬಿ ಮನ್ಮಥನೇ ಬಲ್ಲ! ಅದೇಥರಾ ಮತದಾರನ್ನ ಓಲೈಸಿ ವೋಟು ಕೆಡವಿಸಿಕ್ಯಳದೇ ರಾಜಕೀಯದ ವೋಟಿಂಗ್‍ಟ್ರಾಪ್. ಕನಸುಗಾರ ಕುಮಾರಣ್ಣಂದು ಮೈತ್ರಿಟ್ರಾಪ್, ಸಿದ್ದರಾಮಣ್ಣನದು ಕುರ್ಚಿ ಟ್ರಾಪ್, ಯಡುರಪ್ಪಾರದು ಮಿಶನ್ 15 ಟ್ರಾಪ್, ಪುಗಸಟ್ಟೆ ಕಾಲ್ ಮಾಡಿ ಅಂತ ಮೊಬೈಲು ಕೊಟ್ಟು ಆಮೇಲೆ ರೇಟು ಏರಿಸೋ ಮೊಬೈಲ್ ಟ್ರಾಪ್. ಹಿಂಗೇ ಸುಮಾರವೆ ಟ್ರಾಪುಗಳು! ಮಂಡೇದಲ್ಲಿ ನಮ್ಮಾವಂದು ಜೇನುತುಪ್ಪದ ಅಂಗಡಿ ಇತ್ತು. ನನ್ನೆಂಡ್ರು ಗಲ್ಲಾದಲ್ಲಿ ಕುಂತಿರಳು. ಲಚ್ಚರರ‍್ರಾಗಿದ್ದ ನಾನು ಜೇನುತುಪ್ಪ ತಗಂಡು ತಗಂಡು ಟ್ರಾಪಾದೆ’ ಅಂದರು.

‘ಯಪ್ಪಾ ಹೋಗ್ಲಿ ಬುಡಿ, ಈಗ ಒಂದು ವಡಪು ಏಳ್ತಿನಿ ತಪ್ಪು ಉತ್ತರ ಕೊಟ್ಟರೆ ಪಾರ್ಟಿ ಕೊಡಬೇಕಾಯ್ತದೆ?’ ಅಂದೆ ಒಪ್ಪಿಕ್ಯಂಡರು.

‘ಸಾ ಇವುಗಳ ದೆಸೆಯಿಂದ ಸರ್ಕಾರಗಳೇ ಉರುಳಿಹೋಗವೆ. ಇವುನ್ನ ಮುಟ್ಟಿಕ್ಯಂಡರೆ ಕಣ್ಣಲ್ಲಿ ನೀರು ಬತ್ತದೆ, ಈಗ ಇದರ ರೇಟು ಸಿಕ್ಕಾಪಟ್ಟೆ ಏರಿಬುಟ್ಟದೆ. ಇವುಗಳನ್ನ ಕೆಟ್ಟೋಗದಂಗೆ ಕಾಪಾಡಿಕಳದೆ ಕಷ್ಟ! ಏನೇಳಿ ನೋಡಮು?’ ಅಂದೆ.

‘ಬಡ್ಡಿಹೈದ್ನೆ ಇದು ಅನರ್ಹಶಾಸ್ಕರಲ್ಲುವಲಾ?’ ಅಂದರು. ಕ್ಯಾಕೆ ಹಾಕಿದ ನಾನು ‘ತಪ್ಪು, ಅದು ಈರುಳ್ಳಿ!’ ಅಂದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು