‘ಗಣಿಯಲ್ಲಿ ಚಿನ್ನ ಖಾಲಿಯಾಗಬಹುದು. ಆದರೆ, ಚಾಪ್ಟರ್ ಲೆಕ್ಕದಲ್ಲಿ ತಯಾರಿಸತೊಡಗಿದರೆ ಸಿನಿಮಾವೂ ನಿರಂತರ ಲಾಭ ನೀಡುವ ದುಡ್ಡಿನ ಗಣಿಯಾಗಬಹುದು’.
‘ಹೇಗೋ, ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೈಪೋಟಿ ನೀಡಿದೆ’.
‘ಹೌದು. ಇದೂವರೆಗೆ ಬಾಲಿವುಡ್ ಸಿನಿಮಾ ಗಳ ಸಾಮಂತರಂತಿದ್ದ ಸೌತ್ ಇಂಡಿಯಾ ಸಿನಿಮಾಗಳು ಸಾಮ್ರಾಜ್ಯ ವಿಸ್ತರಿಸಿಕೊಂಡು ಸಾಮರ್ಥ್ಯ ಬೆಳೆಸಿಕೊಳ್ಳುತ್ತಿವೆ’.
‘ನಮ್ಮ ಭಾಷೆ, ಸಿನಿಮಾಗಳು ಪ್ರಾದೇಶಿಕತೆಯ ಗಡಿ ದಾಟಿವೆ. ಉತ್ತರದ ನದಿಗಳು ದಕ್ಷಿಣಕ್ಕೆ ಹರಿಯುವಂತೆ ದಕ್ಷಿಣ ಭಾಷೆಗಳ ಸಿನಿಮಾಗಳು ಉತ್ತರಕ್ಕೆ ಹರಡುತ್ತಿವೆ. ನದಿಗಳಿಗೆ ಅಣೆಕಟ್ಟು, ಭಾಷೆಗೆ ಹಣೆಪಟ್ಟಿ ಕಟ್ಟಿ ಕಂಟ್ರೋಲ್ ಮಾಡ ಲಾಗುವುದಿಲ್ಲ’ ಎಂದ ಶಂಕ್ರಿ.
‘ಹೌದು. ಕನ್ನಡಿಗರು ಈಗ ಕರ್ನಾಟಕದಲ್ಲಿ ಕಾಂಪೌಂಡ್ ಹಾಕಿಕೊಂಡು ಉಳಿದಿಲ್ಲ, ಗಡಿ ದಾಟಿ ಹೋಗಿ ಹೊರ ರಾಜ್ಯ, ಹೊರ ದೇಶಗಳಲ್ಲೂ ವಿಸ್ತರಿಸಿಕೊಂಡಿದ್ದಾರೆ. ಕನ್ನಡ ಭಾಷೆ, ಕನ್ನಡ ಸಿನಿಮಾಗಳು ಭಾಷಾಂತರ, ದೇಶಾಂತರಗೊಳ್ಳುತ್ತಿವೆ’.
‘ಪ್ರಾದೇಶಿಕತೆಯ ಚೌಕಟ್ಟು ಮೀರಿ ಬೆಳೆಯುತ್ತಿರುವ ಕನ್ನಡವೂ ದೇಶದೆಲ್ಲೆಡೆ ತಲುಪುತ್ತಿದೆ ಅಂತನಾ?’
‘ಹಾಗಲ್ಲಾ, ಕನ್ನಡಕ್ಕೆ ಚೌಕಟ್ಟು ಹಾಕಿ ಹಿಂದಿ ಹೇರುವ ಪ್ರಯತ್ನವನ್ನು ಇನ್ನಾದರೂ ಕೈಬಿಡಬೇಕು...’ ಎಂದು ಸುಮಿ ಒತ್ತಾಯಿಸಿದಳು.