ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಪೊಲೀಸ್ ಫಿಟ್‍ನೆಸ್

Published 29 ಮೇ 2024, 0:06 IST
Last Updated 29 ಮೇ 2024, 0:06 IST
ಅಕ್ಷರ ಗಾತ್ರ

ಡ್ಯೂಟಿಯಿಂದ ದಣಿದು ಬಂದ ಪೊಲೀಸ್ ಶಂಕ್ರಿ ಬೆವರು ಒರೆಸಿಕೊಂಡರು.

‘ನಿಮ್ಮ ಫಿಟ್‍ನೆಸ್ ಪರೀಕ್ಷೆ ರಿಸಲ್ಟ್ ಏನಾಯ್ತುರೀ?’ ಕಾಫಿ ತಂದುಕೊಟ್ಟು ಸುಮಿ ಕೇಳಿದರು.

‘ಬೊಜ್ಜು ಜಾಸ್ತಿಯಾಗಿದೆ, ಬಿ.ಪಿ., ಶುಗರ್ ಏರಿದೆ. ಎಲ್ಲವನ್ನೂ ಕಂಟ್ರೋಲ್ ಮಾಡಿಕೊ ಅಂದ್ರು ಸಾಹೇಬ್ರು. ನಮ್ಮಲ್ಲಿ ಕೆಲವರ ಬಿ.ಪಿ., ಶುಗರ್ ನಾರ್ಮಲ್ ಇದ್ರೂ ಬಾಡಿ ಅಬ್‍ನಾರ್ಮಲ್ ಆಗಿದೆ ಅಂತ ಸಾಹೇಬ್ರು ಸಿಟ್ಟಾದರು!’ ಎಂದರು ಶಂಕ್ರಿ.

‘ಬಿ.ಪಿ., ಶುಗರ್ ನಿಮ್ಮ ಇಲಾಖೆಯ ಕೊಡುಗೆ’ ಸುಮಿಗೆ ಆತಂಕ.

‘ನಮ್ಮಲ್ಲಿ ಸ್ಟ್ಯಾಫ್ ಕಮ್ಮಿ, ವರ್ಕ್‌ಲೋಡ್‌ ಜಾಸ್ತಿ ಆಗಿದೆ’.

‘ನಿತ್ಯ ಯೋಗ, ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ’.

‘ಡೈಲೀ ಡ್ಯೂಟಿ ಮಾಡಿ ಮುಗಿಸುವಷ್ಟರಲ್ಲೇ ವ್ಯಾಯಾಮ ಮಾಡಿದಷ್ಟು ಸುಸ್ತಾಗಿಬಿಡುತ್ತೆ’.

‘ಡ್ಯೂಟಿಗೆ ಸೇರಿದ ಹೊಸದರಲ್ಲಿ ನೀವೊಬ್ಬರೇ ಹತ್ತು ಜನರನ್ನು ಬಗ್ಗುಬಡಿಯುವಷ್ಟು ಸ್ಟ್ರಾಂಗ್ ಆಗಿದ್ರಿ, ಈಗ ಆ ಶಕ್ತಿ ನಿಮ್ಮಲ್ಲಿಲ್ಲ’.

ಶಂಕ್ರಿ ನಿಟ್ಟುಸಿರುಬಿಟ್ಟರು.

‘ನಾಲ್ಕು ದಿನ ರಜೆ ಹಾಕಿ ಎಲ್ಲರಂತೆ ನೀವೂ ಹೆಂಡ್ತಿ-ಮಕ್ಕಳ ಜೊತೆ ನೆಂಟರ ಮನೆಗೆ ಹೋಗಿಬರಲಿಲ್ಲ, ಮನೆಯಲ್ಲಿ ಆನಂದವಾಗಿ ಹಬ್ಬ ಆಚರಣೆ ಮಾಡಲಾಗ್ತಿಲ್ಲ’.

‘ಹಬ್ಬ, ಜಾತ್ರೆ, ಜಯಂತಿಗೆ ನಮ್ಮಲ್ಲಿ ರಜೆ ಇಲ್ಲ’.

‘ರೀ... ನಮ್ಮ ಕ್ವಾರ್ಟರ್ಸ್‌ನಲ್ಲಿ ನಿಮ್ಮಷ್ಟೇ ಸಂಬಳ ತರುವ ಪೊಲೀಸರ ಹೆಂಡತಿಯರು ಉಡುವ ಸೀರೆ, ತೊಡುವ ಒಡವೆ ಗಮನಿಸಿದ್ದೀರಾ? ಅವರ ಮಕ್ಕಳು ಓದುವ ಸ್ಕೂಲಿನಲ್ಲಿ ನಮ್ಮ ಮಕ್ಕಳನ್ನು ಓದಿಸಲಾಗ್ತಿಲ್ಲ ಎನ್ನುವುದು ನಿಮಗೆ ಅರ್ಥವಾಗಲ್ವಾ?’ ಸುಮಿಗೆ ಕೋಪ.

‘ಡ್ಯೂಟಿಯಲ್ಲಿದ್ದಾಗ ಸಾಹೇಬರ ಕಿರಿಕ್ಕು, ಮನೆಗೆ ಬಂದರೆ ನಿನ್ನ ಕಿರಿಕಿರಿ, ಛೇ...’ ಶಂಕ್ರಿಗೆ ಸಿಟ್ಟು, ಸಂಕಟ.

ಅಷ್ಟೊತ್ತಿಗೆ ಸಾಹೇಬ್ರು ಫೋನ್ ಮಾಡಿ,
‘ತಕ್ಷಣ ಬಾ’ ಅಂದ್ರು.

‘ಹೋಗಿಬರ್ತೀನಿ’ ಅಂತ ಹೆಂಡತಿಗೂ ಹೇಳದೆ ಶಂಕ್ರಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT