ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಡೆಂಗಿ ಡಾಂಗ್...

Published 2 ಜುಲೈ 2024, 22:13 IST
Last Updated 2 ಜುಲೈ 2024, 22:13 IST
ಅಕ್ಷರ ಗಾತ್ರ

ಡೆಂಗಿಪೀಡಿತನಾಗಿ ಶಂಕ್ರಿ ಹಾಸಿಗೆ ಹಿಡಿದಿದ್ದ. ಮೈಕೈ ನೋವು, ಮೈತುಂಬಾ ಜ್ವರ ಆವರಿಸಿತ್ತು.

ಹೆಂಡತಿ ಸುಮಿಯಾದರೂ ಡೆಂಗಿ ಮುಕ್ತವಾಗಿರಲಿ ಎಂದು ಶಂಕ್ರಿ, ‘ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಡೆಂಗಿ ಹರಡುವುದಂತೆ. ಒಂದೂ ಹೆಣ್ಣು ಸೊಳ್ಳೆ ಮನೆ ಪ್ರವೇಶಿಸದಂತೆ ಎಚ್ಚರ ವಹಿಸು. ಗಂಡು ಸೊಳ್ಳೆ ಬಂದು ಒಂದು ಸಿಪ್ ರಕ್ತ ಕುಡಿದರೂ ಪರವಾಗಿಲ್ಲ, ಹೆಣ್ಣು ಸೊಳ್ಳೆಗೆ ಮಿಸಲಾತಿ ಕೊಡಬೇಡ’ ಅಂದ.

‘ಕೊಡೊಲ್ಲಾರೀ, ಮನೆಗೆ ಹೆಂಗಸರು ಬಂದರೆ ಕಾಫಿ ಕೊಟ್ಟು, ಕುಂಕುಮ ಕೊಟ್ಟು ಕಳಿಸ್ತೀನಿ, ಹೆಣ್ಣು ನಾಯಿ ಬಂದ್ರೆ ಮಿಕ್ಕಿರುವ ಅನ್ನ ಹಾಕ್ತೀನಿ, ಹೆಣ್ಣು ಬೆಕ್ಕು ಬಂದ್ರೆ ಹಾಲು ಕುಡಿಸ್ತೀನಿ, ಹೆಣ್ಣು ಕಾಗೆ ಬಂದರೂ ಓಡಿಸಲ್ಲ, ತಿನ್ನಲು ಏನನ್ನಾದರೂ ಕೊಡ್ತೀನಿ, ಹೆಣ್ಣು ಸೊಳ್ಳೆಯನ್ನು ಮಾತ್ರ ಮನೆ ಒಳಗೆ ಬಿಟ್ಟುಕೊಳ್ಳುವುದಿಲ್ಲ... ಆದರೆ ಹೆಣ್ಣು ಸೊಳ್ಳೆಯನ್ನು ಹೇಗೆ ಗುರುತಿಸೋದು? ಅವು ಸೀರೆ, ನೈಟಿ ಉಟ್ಟುಕೊಂಡು ಬರೊಲ್ಲ...’ ಸುಮಿಗೆ ಗೊಂದಲವಾಯಿತು.

‘ಹೆಣ್ಣು ಸೊಳ್ಳೆಗಳಿಗೆ ಪ್ರವೇಶವಿಲ್ಲ ಎಂದು ಬಾಗಿಲಲ್ಲಿ ಬೋರ್ಡ್ ಹಾಕು’.

‘ಆಂಧ್ರ, ತಮಿಳುನಾಡಿನ ಸೊಳ್ಳೆಗಳಿಗೆ ಕನ್ನಡ ಬೋರ್ಡ್‌ ಅರ್ಥವಾಗಲ್ಲ, ಇಂಗ್ಲಿಷಿನಲ್ಲೂ ಬರೆಯುತ್ತೇನೆ’.

‘ಹೆಣ್ಣು ಸೊಳ್ಳೆಯ ಚಿತ್ರ ಅಂಟಿಸಿ ಅದರ ಮೇಲೆ ರೆಡ್ ಇಂಕಿನಲ್ಲಿ ಇಂಟೂ ಮಾರ್ಕ್ ಹಾಕು, ಅನಕ್ಷರಸ್ಥ ಸೊಳ್ಳೆಗಳಿಗೂ ಅರ್ಥವಾಗಲಿ’.

‘ಹೊರಗಿನ ಸೊಳ್ಳೆ ತಡೆಯಬಹುದು, ಈಗಾಗಲೇ ಮನೆಯೊಳಗೆ ಸೇರಿಕೊಂಡಿರುವ ಸೊಳ್ಳೆಗಳನ್ನು ಮೊದಲು ಕೊಲ್ಲಬೇಕು’ ಎಂದು ಸುಮಿ ವೀರಗಚ್ಚೆ ಹಾಕಿ ಸೊಳ್ಳೆ ಬ್ಯಾಟ್ ಹಿಡಿದು ಮನೆ ತುಂಬಾ ಓಡಾಡಿ ಸೊಳ್ಳೆಗಳನ್ನು ಬಡಿದು ಕೊಂದು ಹೆಣದ ರಾಶಿ ಹಾಕಿದಳು.

ವೀರವನಿತೆಯ ಶೌರ್ಯವನ್ನು ಶಂಕ್ರಿ ಶ್ಲಾಘಿಸಿದ. ಸೊಳ್ಳೆ ಸಮರದಲ್ಲಿ ಸುಮಿ ಸುಸ್ತಾಗಿ, ಮೈಕೈ ನೋವು ಮಾಡಿಕೊಂಡು ಹಾಸಿಗೆ ಹಿಡಿದಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT