ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊರಳುಸೇವೆ

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.

‘ರಾಜಕೀಯದ ಕುಂಡಲಿ ಲೆಕ್ಕಾಚಾರದೇಲಿ ಇವರಿಗೆ, ಇವರ ಮಕ್ಕಳಿಗೆ ಹೆಸರುಬಲ ಬಂದುಲ್ಲ ಕನೋ. ಅದುಕ್ಕೇ ಟಿಕೆಟ್ ಲ್ಯಾಪ್ಸಾದ ದುಃಖದ ಸಿಂಬಳ, ಕಣ್ಣೀರು ಒರೆಸೋರು ಇಲ್ದಂಗಾಗ್ಯದೆ’ ಅಂದ್ರು ತುರೇಮಣೆ.

‘ಕರೆಟ್ಟು ಕನಣೈ, ರಾಜಕೀಯ ಜೀವನದಲ್ಲಿ ಕಣ್ಣೀರು ಒರೆಸೋರು ಸಿಗಬೈದು, ಆದರೆ ಸಿಂಬಳ ಒರೆಸೋರು ಸಿಕ್ಕಕುಲ್ಲ’ ಚಂದ್ರು ಚಟಾಕಿ ಹಾರಿಸಿದ.

‘ಯಾರ ಬಾಯಲ್ಲೂ ‘ನನಗ್ಯಾಕೆ ಟಿಕೇಟು. ನಮ್ಮ ಕಾರ್ಯಕರ್ತರಿಗೆ ವೋಟು ಕೊಡಿ’ ಅನ್ನೋ ಮಾತು ಕಡೀಲಿಲ್ಲವಲ್ಲಾ’ ಅಂತಂದೆ.

‘ವೋಟು ಅಂದ್ರೆ ಏನಂತ ತಿಳಕಂಡಿದ್ದಯ್? ಸ್ವತಂತ್ರ ಭಾರತದ ಪ್ರಜೆಗಳು ತಮ್ಮನ್ನೇ ತಾವು ಮೂರ್ಖರನ್ನಾಗಿ ಮಾಡಿಕೊಂಡು ಶತಮೂರ್ಖರ ಕೈಗೆ ದೇಸದ ಪಾರುಪತ್ಯ ಕೊಡೋ
ಪ್ರಜಾಪ್ರಭುತ್ವದ ಹಬ್ಬ ಕಲಾ!’ ಯಂಟಪ್ಪಣ್ಣ ವಿಚಾರ ಮಂಡಿಸಿತು.

‘ಕುರಿತೇಟಾಗಿ ಹೇಳಿದೆ ಕನಣೈ. ಇದೇ ಐನ್ ಟೇಮು ಅಂತ ಗೆಯ್ಯಕ್ಕೆ ಲಾಯಕ್ಕಿಲ್ಲದ ಹೀನಸುಳಿ, ಪಾತಾಳಸುಳಿ, ದಾವಣಿಸುಳಿ, ಪರಕಲಸುಳಿ, ನಮೂನಿಸುಳಿ, ಸಿಡಗಾಲು, ಕೋರಬಗ್ರಿ, ಕೋವೆಹಲ್ಲಿನ ದನಗಳೆಲ್ಲಾ ಈಗ ಬೀದಿಗೆ ಮೆಯ್ಯಕೆ ಬತ್ತವೆ’ ತುರೇಮಣೆ ಉದ್ಗರಿಸಿದರು.

‘ಸರಿ ಸಾ, ಈಗ ಎಲ್ಲ ಉಮ್ಮೇದುವಾರರೂ ಏನು ಘನಂದಾರಿ ಕೇಮೆ ಕಿಸಿದವ್ರೆ ಅಂತ ವೋಟು ಕೇಳಕ್ಕೆ ಬತ್ತರೆ?’ ನನ್ನ ಅನುಮಾನ ಕೇಳಿದೆ.

‘ನಾಯಕರ ಮುಖವಾಡ ಇಕ್ಕ್ಯಂದು ‘ಅಣೈ, ಅಕ್ಕೋ ನಾನು ಇನ್ನೈದು ವರ್ಸ ಇಕ್ಕಡಿಕೆ ತಲೆ ಹಾಕಕುಲ್ಲ. ಇಲ್ಲೀಗಂಟ ನಾನು ಮಾಡಿದ ಗಾಳಿಗಂಟಲು ನಿಮಗಿಷ್ಟ ಆಗಿದ್ರೆ ದಯವಿಟ್ಟು 420420 ನಂಬರಿಗೆ ಎಸ್‍ಎಂಎಸ್ ಮಾಡಿ’ ಅಂತ ನುಲಿತರೆ ಕನೋ’ ಅಂದ್ರು ತುರೇಮಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT