ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ಸಂದೇಶ!

Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪಾರ್ಕಿನಲ್ಲಿ ‘ಸಾರಿ... ಸಾರಿ...’ ಎನ್ನುತ್ತಲೇ ಹತ್ತಿರ ಬಂದ ಮಧುರಾಜ ಅಸಹಾಯಕತೆ ತೋಡಿಕೊಂಡ, ‘ಕಳೆದ ಭಾನುವಾರ ಮಗನ ಮದುವೆ ಆಯ್ತು. ನಿಮಗೆ ಗೊತ್ತಲ್ಲ... ಕೋವಿಡ್ ನಿರ್ಬಂಧ... ತೀರಾ ಹತ್ತಿರದ ಬಂಧುಗಳಷ್ಟೇ ಸೇರಿ ಮದುವೆ ಮಾಡಿದೆವು, ಬೇಸರ ಮಾಡಿಕೊಳ್ಳಬೇಡಿ’.

‘ಅಯ್ಯೋ... ನೀವು ಮದುವೆಗೆ ಕರೆದಿದ್ದರೆ ಬೇಸರವಾಗುತ್ತಿತ್ತು...! ‘ನ್ಯೂ ನಾರ್ಮಲ್’ ಕಾಲವಲ್ಲವೇ?’ ತಿಂಗಳೇಶ ಸಮಾಧಾನಿಸಿದ.

ಅಷ್ಟರಲ್ಲಿ ವಾಕ್ ದ ಟಾಕ್ ಅರ್ಥಾತ್ ಟಾಕ್ ದ ವಾಕ್‌ಗೆ ಶೇಖರ್ ಗುಪ್ತಾ ಶೈಲಿಯಲ್ಲಿ ಜೊತೆಯಾದ ಅತೀಶ್ ಮಾಸೂರಮಠ. ಲಕ್ಕೀನಾರಾಯಣ ಮಾತ್ರ ಎಂದಿನಂತೆ ಮುಖ್ಯಮಂತ್ರಿ ಗತ್ತಿನಲ್ಲಿ ಮೌನವಾಗಿ ವಾಕಿಂಗ್ ತಂಡವನ್ನು ಲೀಡ್ ಮಾಡುತ್ತಿದ್ದ.

‘ಅತೀಶ್, ನಿಮ್ಮ ಮಗನ ಮದುವೆ ವಿಷಯ ಎಲ್ಲಿಗೆ ಬಂತು?’ ಕೆದಕಿದ ತಿಪ್ಪೇಶಿ.

‘ತಿಪಟೂರು ಹುಡುಗಿ ಓಕೆ ಆಗಿತ್ತು. ಹುಡುಗಿ ಫೇಸ್‌ಬುಕ್ಕಿನಲ್ಲಿ ಕೆಲಸ ಮಾಡುತ್ತಾಳೆ ಅಂತ ಆಸೆ ಹುಟ್ಟಿಸಿದ್ದ ಬ್ರೋಕರ್. ವಾಟ್ಸ್‌ಆ್ಯಪ್‌ನಲ್ಲೂ ಪಾರ್ಟ್ ಟೈಮ್ ಕೆಲಸ ಅಂತ ಸುಳಿವು ಕೊಟ್ಟಿದ್ದ. ಸತ್ಯ ಗೊತ್ತಾದಾಗ ಬ್ರೋಕರ್, ‘ನಾನು ಹೇಳಿದ್ದು ಹುಡುಗಿಯ ದೈನಂದಿನ ‘ಕೆಲಸ’ದ ಬಗ್ಗೆ, ನೀವು ‘ನೌಕರಿ’ ಅಂತ ಅರ್ಥ ಮಾಡಿಕೊಂಡರೆ ನಾನೇನು ಮಾಡಲಿ?’ ಅಂತ ನುಣುಚಿಕೊಂಡ’.

‘ಮತ್ತೆ ಆ ನಂಜನಗೂಡು ಹುಡುಗಿ?’ ಪ್ರಕಾಶನಿಗೆ ಕೆಟ್ಟ ಕುತೂಹಲ.

‘ಹುಡುಗಿ ಕಡೆಯವರು ಮನೆ ದೇವರ ಒಪ್ಪಿಗೆ ಕೇಳಿದ್ದರಂತೆ. ಒಂದು ವಾರ ಕಾಯ್ದರೂ ದೇವರ ಬಲಭಾಗದಿಂದ ಹೂವು ಉದುರಲಿಲ್ಲ... ಪೂಜಾರಿ ಮಸಲತ್ತು’.

‘ಒಂದು ವಾರ ಬಹಳವೇನಲ್ಲ. ನಮ್ಮ ಮುಖ್ಯಮಂತ್ರಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹೂವು ಉದುರಿಸುವುದನ್ನು ಕಾಯುತ್ತ ಕುಳಿತು ತಿಂಗಳುಗಳೇ ಉರುಳಿದವು...!’ ತಿಪ್ಪೇಶಿ ಮಾತಿನ ಹಾದಿ ತಪ್ಪಿಸಿದ.

‘ನಮಗೆ ದಾವಣಗೆರೆಯ ಇನ್ನೊಂದು ಹುಡುಗಿ ಮೆಚ್ಚುಗೆಯಾಗಿದೆ, ನೀವು ಬೇಗ ನಿರ್ಧ ರಿಸಿ ಅಂತ ಧಮಕಿ ಹಾಕಬೇಕಿತ್ತು... ಇತ್ತೀಚೆಗೆ ರಾಜಕೀಯ ವಿರೋಧಿಗಳೇ ಪರಸ್ಪರ ಭೇಟಿಯಾಗಿ ಹೈಕಮಾಂಡಿಗೆ ನಿಗೂಢ ಸಂದೇಶ ರವಾನಿಸುವುದಿಲ್ಲವೇ...!’ ತಿಂಗಳೇಶ ಹೊಸ ಹುಳು ಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT