ಶುಕ್ರವಾರ, ಡಿಸೆಂಬರ್ 4, 2020
22 °C

ಚುರುಮುರಿ: ಶಿರಾ–ಸಾಷ್ಟಾಂಗ

ಸಿ.ಎನ್‌.ರಾಜು Updated:

ಅಕ್ಷರ ಗಾತ್ರ : | |

Prajavani

ಶಿರಾ ಪ್ರಾಂತದ ಉಸ್ತುವಾರಿ ವಹಿಸಿದ್ದ ಯುವರಾಜಾ ಹುಲಿ ರಾಜರು, ಪ್ರಾಂತವನ್ನು ಗೆಲ್ಲಿಸಿ ವಿಜಯಪತಾಕೆ ಹಾರಿಸಿದ ಬಳಿಕ ಜಯಘೋಷದೊಂದಿಗೆ ಆಗಮಿಸಿದರು.

‘ಪಿತಾಶ್ರೀಯವರಿಗೆ ಶಿರಸಾಷ್ಟಾಂಗ ಪ್ರಣಾಮಗಳು, ಶಿರಾ ಪ್ರಾಂತವನ್ನು ಒಪ್ಪಿಸಿಕೊಳ್ಳಬೇಕು’ ಎಂದು ರಾಜಾಹುಲಿ ಮಹಾರಾಜರಿಗೆ ಹೇಳಿದರು.

‘ಭಲೇ ಕುಮಾರ, ಶಿರಾದ ಬರಡು ನೆಲದಲ್ಲಿ ಕೆಸರು ಸೃಷ್ಟಿಸಿ, ಕೆಸರಿನಲ್ಲಿ ಕಮಲ ಅರಳಿಸಿದ ನಿನ್ನ ಪರಾಕ್ರಮ ಮೆಚ್ಚಿದೆ’ ಎಂದರು ರಾಜಾಹುಲಿ.

‘ಶಿರಾ ಸಮರದ ಉಸ್ತುವಾರಿ ದಂಡನಾಯಕನಾಗಿ ರಣರಂಗದಲ್ಲಿ ಸರ್ವಾಸ್ತ್ರಗಳನ್ನೂ ಪ್ರಯೋಗಿಸಿ ಶತ್ರುಗಳನ್ನು ಸದೆಬಡಿದೆ ಪಿತಾಶ್ರೀ’.

‘ಮಾಜಿ ಮಹಾರಾಜರಾದ ಸಿದ್ದರಾಮಪ್ರಭು, ಕುಮಾರದೇವರ ಪುತ್ರರೂ ಶಸ್ತ್ರಸಜ್ಜಿತರಾಗಿ ರಣಕಣಕ್ಕೆ ಇಳಿದಿದ್ದರು ಅಲ್ಲವೇ?’

‘ಹೌದು ಜನಕ, ಅವರನ್ನು ಕಣದಿಂದ ಹಿಮ್ಮೆಟ್ಟಿಸಿ ಶಿರಾದಲ್ಲಿ ಕಮಲ ಪತಾಕೆ ಹಾರಿಸಿದೆ’.

‘ಭೇಷ್ ಸುಪುತ್ರ, ಮುಂಬರುವ ಮಹಾ ಸಮರದ ನೇತೃತ್ವ ವಹಿಸಿಕೊಳ್ಳುವ ಸಂದರ್ಭ ಬರಬಹುದು ಸಿದ್ಧನಾಗಿರು. ನಿನ್ನ ಭವಿಷ್ಯ ಉಜ್ವಲವಾಗಲಿ...’ ಎಂದು ಆಶೀರ್ವದಿಸಿದರು.

ಯುವರಾಜಾ ಹುಲಿಯ ನಿರ್ಗಮನದ ನಂತರ, ‘ಮಂತ್ರಿಗಳೇ, ನಮ್ಮ ಯುವರಾಜರು ಸಮರ ಕಲೆಯಲ್ಲಿ ಪ್ರಾವೀಣ್ಯ ಪಡೆದಿದ್ದಾರಲ್ಲವೇ?’ ಸಂತಸ, ಹೆಮ್ಮೆಯಿಂದ ಬೀಗಿದರು ರಾಜಾಹುಲಿ.

‘ಎಷ್ಟಾದರೂ ತಮ್ಮ ಪುತ್ರರಲ್ಲವೇ, ರಾಜಾಹುಲಿ ಹೊಟ್ಟೆಯಲ್ಲಿ ಯುವರಾಜಾ ಹುಲಿ ತಾನೇ ಹುಟ್ಟುವುದು, ಹೆಹ್ಹೆಹ್ಹೆ...’

‘ಶಿರಾವನ್ನು ಗೆದ್ದು ನಾವು ಶಿರ ಎತ್ತುವಂತೆ ಮಾಡಿದ ನಮ್ಮ ಯುವರಾಜರಿಗೆ ಯಾವ ಬಹುಮಾನ ನೀಡೋಣ?’

‘ಪ್ರಭು, ನನ್ನದೊಂದು ಸಲಹೆ... ಹೇಗೂ ತಮಗೆ ವಯೋಮಿತಿ ಮೀರಿದೆ. ತಮ್ಮ ಕುಮಾರರಿಗೆ ರಾಜ್ಯ ವಹಿಸಿ, ತಾವು ವಿಶ್ರಾಂತಿಗೆ ತೆರಳಲು ಇದು ಸೂಕ್ತ ಸಮಯ...’

ಕೆರಳಿದ ರಾಜಾಹುಲಿ ಮಹಾರಾಜರು, ‘ಮಂತ್ರಿಗಳೇ, ಅಧಿಕಪ್ರಸಂಗತನ ಬೇಡ, ಇಲ್ಲಿಂದ ಹೊರಡಿ...’ ಎಂದು ಗರ್ಜಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು