ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೈಲಾಸ ಪ್ರವಾಸ!

Last Updated 27 ಆಗಸ್ಟ್ 2020, 17:45 IST
ಅಕ್ಷರ ಗಾತ್ರ

ಹರಟೆಕಟ್ಟೇಲಿ ಚಹಾ ಕುಡೀತ ದುಬ್ಬೀರ ಕೇಳಿದ ‘ಅಲ್ರಲೆ, ನಾವೆಲ್ಲ ಒಂದ್ಸಲ ಕೈಲಾಸಕ್ಕೆ ಯಾಕೆ ಹೋಗಿ ಬರಬಾರ್ದು?’

ದುಬ್ಬೀರನ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿ ಮೈಮೇಲೆ ಚಹಾ ಚೆಲ್ಲಿಕೊಂಡ ಗುಡ್ಡೆ, ‘ಲೇಯ್, ಏನಾಗೇತಲೆ ನಿಂಗೆ? ಇಷ್ಟ್ ಬೇಗ ಯಾಕೆ ಕೈಲಾಸದ ಚಿಂತಿ?’ ಎಂದು ರೇಗಿದ.

‘ನಿಮ್ ತೆಲಿ, ನಾನೇಳಿದ್ದು ಆ ಕೈಲಾಸ ಅಲ್ಲ. ಬಿಡದಿಯ ನಮ್ಮ ‘ಡೈಲಿ’ ಆನಂದಸ್ವಾಮಿಗಳ ಕೈಲಾಸ! ಹೊಸ ದೇಶ, ಹೊಸ ದುಡ್ಡು, ಹೊಸ ಕಾನೂನು, ಹೊಸ ಸಂವಿಧಾನ ಮಾಡಿದಾರಲ್ಲ, ಅದು’ ದುಬ್ಬೀರ ಸ್ಪಷ್ಟಪಡಿಸಿದ.

‘ಓ ಅದಾ ? ಹೌದು ಕಣ್ರಲೆ, ಸುಮ್ನೆ ಹೋಗಾಣ ನಡೀರಿ. ಅಲ್ಲಿ ಚಿನ್ನದ ನಾಣ್ಯ ಚಲಾವಣೆಗೆ ಬಿಟ್ಟಾರಂತೆ. ಸ್ವಲ್ಪ ದಿನ ಇದ್ದು ಒಂದಿಷ್ಟು ಚಿನ್ನ ದುಡ್ಕಂಡು ಬರಾಣ’ ಕೊಟ್ರೇಶಿ ಆಸೆ ವ್ಯಕ್ತಪಡಿಸಿದ.

‘ಅಲ್ಲಿ ಸೈಟ್ ರೇಟು ಹೆಂಗದಾವಂತೆ? ಬ್ಯಾಂಕಿನಾಗೆ ರೊಕ್ಕ ಇಟ್ರೆ ಎಷ್ಟ್ ಬಡ್ಡಿ ಕೊಡ್ತಾರಂತೆ? ಅಲ್ಲೂ ಕೊರೊನಾ ಕಾಟ ಐತಾ?’ ಪರ್ಮೇಶಿಯ ಸಾಲು ಪ್ರಶ್ನೆ.

‘ಇದೊಳ್ಳೆ ಕತಿ ಆತಪ. ಲೇ ತಗಡು, ಅಲ್ಲಿ ಈಗಿನ್ನೂ ಹೊಸ ದೇಶ ಕಟ್ತದಾರೆ. ಅಲ್ಲಿ ಕೊತ್ತಂಬರಿ ಸೊಪ್ಪು ಬೆಳೀತಾರಾ? ಕಟ್ಟಿಗೆ ಎಷ್ಟು ಅಂತ ಈಗ್ಲೇ ಕೇಳಿದ್ರೆ?’ ದುಬ್ಬೀರನಿಗೆ ಸಿಟ್ಟು ಬಂತು.

‘ನೋಡು, ತಗಡು ಗಿಗಡು ಅನ್ಬೇಡ. ಜುಜುಬಿ ತಗಡು ಹಾಕಿ ಕೋಟಿಗಟ್ಲೆ ಕೊರೊನಾ ದುಡ್ಡು ದುಡಿದಿರೋರು ಇದಾರೆ...’ ಪರ್ಮೇಶಿ ತಿರುಗೇಟು ಕೊಟ್ಟ.

ಅಲ್ಲೀತನಕ ಸುಮ್ಮನಿದ್ದ ಗುಡ್ಡೆ ‘ಈ ದುಬ್ಬೀರ ಕೈಲಾಸಕ್ಕೆ ಯಾಕೆ ಹೊಂಟಾನ ಅಂತ ಈಗ ಗೊತ್ತಾತು...’ ಅಂದ.

‘ಹೌದಾ? ಯಾಕೆ?

‘ಕೈಲಾಸ ಸೇರಿದ ಮೇಲೆ ಇವ್ನು ವಾಪಸ್ ಬರಂಗೆ ಕಾಣಲ್ಲ’.

‘ವಾಪಸ್ ಬರಲ್ವ? ಯಾಕೆ?’

‘ಹೆಂಡ್ತಿ ಕಾಟ ತಪ್ಪಿಸ್ಕೊಳ್ಳಾಕೆ!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT