ಶುಕ್ರವಾರ, ಮಾರ್ಚ್ 31, 2023
22 °C

ಚುರುಮುರಿ: ಯಾಕೆ ಹೋಗಿದ್ರು?

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

Prajavani

ಚಟ್ನಿಹಳ್ಳಿ ಅರಳಿಕಟ್ಟೆಯಲ್ಲಿ ಅಮಲುದಾರರ ಸಭೆ ನಡೆದಿತ್ತು.

‘ಸಿಎಂ ಮನೆಗೆ ಕುಮಾರಣ್ಣ ಯಾಕೆ ಹೋಗಿದ್ರು?’ ತಿಪ್ಪ ತೊದಲಿದ.

‘ನಂದೂ ಸೇಮ್ ಕ್ವಶ್ಚನ್, ಯಾಕೆ ಹೋಗಿದ್ರು? ಸಿಎಂ ಹಬ್ಬ ಮಾಡಿ ಕುಮಾರಣ್ಣನ ಊಟಕ್ಕೆ ಕರೆದಿದ್ರಾ?’ ಪೆಗ್ ಪರಮೇಶ್ ಪ್ರಶ್ನೆ ಇಟ್ಟ.

‘ಸುಮ್ನಿರ್‍ರಲೇ, ಊಟಕ್ಕೆ ಕರೆಯಲು ಈಗ ಪಿತೃಪಕ್ಷ ಬಿಟ್ರೆ ಇನ್ನಾವ ಹಬ್ಬನೂ ಇಲ್ಲ’ ಸೀನ ಸಿಟ್ಟುಗೊಂಡ.

‘ಊಟಗೋಷ್ಠಿಯಂತೂ ಅಲ್ಲ, ಆರೋಗ್ಯ ವಿಚಾರಿಸಲು ಹೋಗಿದ್ರೇನೋ’ ಕಿಟ್ಟಿಗೆ ಕನ್‍ಫ್ಯೂಸ್.

‘ಮೊನ್ನೆ ತಾನೆ ಕೊರೊನಾ ಗೆದ್ದು ಸಿಎಮ್ಮು ಆರೋಗ್ಯ ಕಾಪಾಡಿಕೊಂಡವ್ರೇ’.

‘ಇಲ್ವಂತೆ, ಸಿಎಂಗೆ ವಯಸ್ಸಾಗಿದೆ, ಆರ್ಥಿಕ ನಿಶ್ಶಕ್ತಿ, ದೈಹಿಕ ದುಶ್ಶಕ್ತಿಯಾಗಿ ರಾಜ್ಯಭಾರದ ಭಾರವನ್ನು ಮಕ್ಕಳಿಗೆ ವಹಿಸಿ ಹಗುರಾಗಿದ್ದಾರೆ ಅಂತ ಕುಟುಂಬಸ್ಥರು ದಿಲ್ಲಿ ದೊರೆಗೆ ಚಾಡಿ ಚುಚ್ಚಿದ್ದಾರೆ ಅಂತ ಅಪ್ಸೆಟ್ಟಾಗಿದ್ರಂತೆ. ಕುಮಾರಣ್ಣ ಹೋಗಿ, ನಿಮ್ಮೋರು ಹಾಥ್ ಕೊಟ್ರೆ ನಾವು ಸಾಥ್ ಕೊಡ್ತೀವಿ ಅಂತ ಸಾಂತ್ವನ ಮಾಡಿದ್ರಂತೆ’.

‘ಅಲ್ಲವಂತೆ, ಗಾಂಜಾ ಗಿಡವನ್ನು ಬೇರು ಸಮೇತ ಕಿತ್ಹಾಕ್ತೀವಿ ಅಂತ ಸಿಎಂ ಹೇಳಿದ್ರಲ್ಲ, ಅದಕ್ಕೆ ಕುಮಾರಣ್ಣ ಹೋಗಿ, ಗಾಂಜಾ ಗಿಡ ಚೆಂಡು ಹೂವಿನ ಗಿಡದ ಥರಾ ಅಲ್ಲ, ಅದರ ಬೇರು ಎಲ್ಲೆಲ್ಲಿರುತ್ತದೆ ಅಂತ ಸ್ಟಡಿ ಮಾಡಿ ಎಂದು ಸಸ್ಯಶಾಸ್ತ್ರದ ಪುಸ್ತಕ, ಗಾಂಜಾವಾಲಾರ ಜಾತಕ ಕೊಟ್ಟು ಬಂದ್ರಂತೆ’.

‘ಜಾತಕಾನೊ, ಸೂತಕಾನೊ, ಕುಮಾರಣ್ಣ ಯಾಕೆ ಬಂದಿದ್ರು ಅನ್ನೋದು ಕ್ಲಿಯರ್ ಆಗ್ಬೇಕು. ಈ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಿ, ಪ್ರಜೆಗಳ ಮುಂದಿಡಬೇಕು’ ಸೀನ ಒತ್ತಾಯ ಮಾಡಿದ.

‘ನಿನ್ನ ಹೋರಾಟವನ್ನು ನಾವೂ ಬೆಂಬಲಿಸ್ತೀವಿ...’ ಎಂದರು ಉಳಿದವರು. ಅಷ್ಟೊತ್ತಿಗೆ ಮಳೆ ಬಂತು. ‘ಓಡ್ರಲಾ, ನೆಂದರೆ ಕುಡಿದಿರೋ ನಶೆಯೆಲ್ಲ ಇಳಿದೋಯ್ತದೆ’ ಅನ್ನುತ್ತಾ ತಲೆ ಮೇಲೆ ಟವೆಲ್ ಹಾಕಿಕೊಂಡು ದಿಕ್ಕಾಪಾಲಾಗಿ ಓಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.