ಗುರುವಾರ , ಏಪ್ರಿಲ್ 9, 2020
19 °C

ಕೊಡಗು ಪ್ರವಾಹ: ಮುಂದಿನ ದಿನಗಳನ್ನು ಎದುರಿಸಲು ತಯಾರಾಗೋಣ

ಕೆ.ಪಿ.ಸುರೇಶ್ Updated:

ಅಕ್ಷರ ಗಾತ್ರ : | |

ಕೊಡಗಿನ ಸಮಸ್ಯೆ ಮುಂದಿನ ದಿನಗಳಲ್ಲಿ ಇನ್ನೂ ಬಿಗಡಾಯಿಸಲಿದೆ. ಈಗ ನೆರೆ ಮತ್ತು ಭೂಕುಸಿತದ ಕಾರಣಕ್ಕೆ ನಿರ್ವಸಿತರಾದವರು, ಧರೆ ಕುಸಿಯಬಹುದೆಂಬ ಕಾರಣಕ್ಕೆ ಸ್ಥಳಾಂತರಗೊಂಡವರಿಗೆ ತಕ್ಷಣದ ಪರಿಹಾರ ಹರಿದು ಬರುತ್ತಿರುವುದು ಶ್ಲಾಘನೀಯ. ರಾಜ್ಯವೇ ಅವರ ಕಷ್ಟಕ್ಕೆ ಸ್ಪಂದಿಸಿದೆ. ಆದರೆ ಶ್ರಾವಣ ಕಳೆದು ಕೊಂಚ ಮಳೆ ಕಡಿಮೆ ಆಗುವಾಗ, ಇನ್ನೊಂದು ದೀರ್ಘಕಾಲೀನ ಸಂಕಷ್ಟ ಎದುರಾಗುತ್ತದೆ.

ಈ ಬಾರಿ ಕೊಡಗಿನಲ್ಲಿ ಕಾಫಿ ಸಹಿತ ಸಕಲ ಬೆಳೆಗಳೂ ನೆಲ ಕಚ್ಚುವುದು ಖಂಡಿತ. ಕೊಳೆರೋಗ ಪ್ರಾಯಶಃ ಕೊಡಗಿನ ಕಾಫಿ ತೋಟಗಳನ್ನು ಆವರಿಸಿರಬಹುದು. ಇದರ ಲಕ್ಷಣ ಕಂಡಾಗ ಔಷಧಿ ಸಿಂಪಡಿಸಿದರೆ ಬಚಾವು. ಆದರೆ ಈಗಿನ ಸನ್ನಿವೇಶದಲ್ಲಿ ಕೂಲಿ ಆಳು ಬಿಡಿ; ಮನೆ ಯಜಮಾನನೇ ದಿಕ್ಕೆಟ್ಟಿರುವಾಗ ತೋಟದ ಅವಸ್ಥೆ?

ಗದ್ದೆಯನ್ನಾದರೂ ಒಂದು ಸೀಜನ್ ಬೀಳು ಬಿಡಬಹುದು, ಆದರೆ ಅಡಿಕೆ, ಕಾಫಿಯಂಥಾದ್ದನ್ನು ಗಿಡ ಉಳಿಸಿಕೊಳ್ಳಲಾದರೂ ಸೀಜನಲ್ ಕೆಲಸ ಮಾಡಲೇಬೇಕು. ಕೊಡಗಿನ ದುರಂತ ಇರುವುದು ಇಲ್ಲಿಯೇ. ಸಣ್ಣ ಕಾಫಿ ಬೆಳೆಗಾರರೇ ಹೆಚ್ಚಿರುವಲ್ಲಿಯಂತೂ ಪರಿಸ್ಥಿತಿ ದಯನೀಯ. ಇಲ್ಲಿನ ಕೂಲಿ ನಂಬಿರುವ ಕೂಲಿಯಾಳುಗಳಿಗೆ ಕೂಲಿ ಹುಟ್ಟುವುದೇ ದುಸ್ತರ. ಈಗ ದೊರೆಯುತ್ತಿರುವ ವಸ್ತುರೂಪೀ ಕೊಡುಗೆಗಳು ಸದ್ಯಕ್ಕೆ ಸಾಕು. ಆದರೆ ಮತ್ತೆ ಮನೆಗೆ ಮರಳುವುದು ಹೇಗೆ? ಮನೆ ಇದೆಯೆಂದಾದರೂ ದುಡಿಯಲು ಎಲ್ಲಿಗೆ ಹೋಗುವುದು?

ಸರ್ಕಾರವನ್ನು ಈ ಬಗ್ಗೆ ಗಮನ ಸೆಳೆದರೆ ಅಕ್ಕಿ ಕೊಟ್ಟೀತು. ಆದರೆ ಇತರೇ ವಸ್ತುಗಳಿಗೆ? ಉದಾ: ಸೋಪು, ಅಯೋಡೆಕ್ಸ್, ಬಕೆಟ್, ಹೀಗೆ ಸಣ್ಣ ವಿವರಗಳಲ್ಲಿ ಮನೆಯ ಅಗತ್ಯದ ವಸ್ತುಗಳ ಪಟ್ಟಿ ಇದೆ. ಈ ಬಗ್ಗೆ ನಾವೆಲ್ಲಾ ದೀರ್ಘಕಾಲಿಕವಾದ ಅಂದರೆ ಕನಿಷ್ಠ ನಾಲ್ಕು ತಿಂಗಳಿಗೆ ಪ್ರತೀ ಕುಟುಂಬದ ವಿವರ ಪಡೆದು ಈಗ ಕಳಿಸುತ್ತಿರುವ ರೀತಿಯ ವಸ್ತುಗಳನ್ನು ತಿಂಗಳು ತಿಂಗಳು ಕಳಿಸಬೇಕಾದೀತು. ಮುಂದಿನ ತಿಂಗಳಿಂದ ಹಬ್ಬಗಳು ಶುರುವಾಗುತ್ತವೆ. ಈ ಸಂತ್ರಸ್ತರಿಗೂ ಹಬ್ಬ ಬೇಡವೇ. ದಾರಿದ್ರ್ಯದ ದುಃಖದಲ್ಲಿ ಅವರು ಪರಿತಪಿಸಬಾರದು.

ಕೊಡಗಿಗೆ ರಸ್ತೆ ಪುನರ್ನಿರ್ಮಾಣಕ್ಕೇ ಸಾವಿರಾರು ಕೋಟಿ ಬೇಕು; ನಿಜ. ಅದು ಸರಿಯಾಗುವವರೆಗೆ ಓಡಾಟವೂ ಇಲ್ಲದೇ ಮನುಷ್ಯರು ಹೇಗೆ ಇರಲು ಸಾಧ್ಯ? ಅವರಿದ್ದಲ್ಲಿಗೇ ಸಾಮಗ್ರಿಗಳು ತಲುಪಬೇಕೇ ಹೊರತು; ಕೊಳ್ಳುವ ಶಕ್ತಿ ಸಾವಿರಾರು ಕೂಲಿ ಕುಟುಂಬಗಳಿಗೆ ಇರಲಾರದು.

ಈ ಕುರಿತು ಎಲ್ಲರೂ ಮಾತಾಡಿಕೊಂಡು ಈಗ ಬರುತ್ತಿರುವ ನೆರವನ್ನು ದೀರ್ಘಕಾಲಿಕ ನೆರವಾಗಿಸುವತ್ತ ಯೋಚಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು