ಶನಿವಾರ, ಮೇ 28, 2022
26 °C
ಕಲ್ಲಿದ್ದಲು ಕೊರತೆ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಎಡವಿದೆಯೇ?

ಚರ್ಚೆ | ಕಲ್ಲಿದ್ದಲು ಕೊರತೆ: ಕಲ್ಲಿದ್ದಲು ಉತ್ಪಾದನೆ ಪೂರೈಕೆಯಲ್ಲಿ ದಾಖಲೆ

ಪ್ರಲ್ಹಾದ ಜೋಶಿ Updated:

ಅಕ್ಷರ ಗಾತ್ರ : | |

ಕಲ್ಲಿದ್ದಲು ದೇಶದ ಆರ್ಥಿಕ ಬೆಳವಣಿಗೆಯ ಜೀವಾಳವೆಂಬುದು ಸರ್ವವೇದ್ಯ. ಸ್ವಾತಂತ್ರ್ಯಾ ನಂತರವಂತೂ ದೇಶದ ವಿದ್ಯುಚ್ಛಕ್ತಿ ಉತ್ಪಾದನೆಯ ಬೆನ್ನೆಲುಬು ಕೂಡಾ ಹೌದು. ಅಲ್ಲದೇ ಇತರೆ ಔದ್ಯಮಿಕ ಬೆಳವಣಿಗೆಯ ಪೂರಕ ಅಂಶವೂ ಆಗಿದ್ದು ದೇಶದ ಕಲ್ಲಿದ್ದಲು ಉತ್ಪಾದನೆ ಪ್ರದೇಶದ ಲಕ್ಷಾಂತರ ಜನರಿಗೆ ಉದ್ಯೋಗದ ಮೂಲವಾಗಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ 70ರಷ್ಟು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಆಗುವುದರಿಂದ ಕಲ್ಲಿದ್ದಲಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಅಂದಾಜಿಸಬಹುದಾಗಿದೆ.

ದೇಶದ ಆರ್ಥಿಕ ಪ್ರಗತಿ ಇಂದು ಎಂದಿಗಿಂತಲೂ ಹೆಚ್ಚು ವೇಗ ಪಡೆದುಕೊಂಡಿದೆ. ಕೋವಿಡ್-19ರ ನಂತರದಲ್ಲಿ, ಜಗತ್ತೇ ಬೆರಗಾಗುತ್ತಿರುವ ರೀತಿಯಲ್ಲಿ ನಮ್ಮ ಆರ್ಥಿಕ ಪ್ರಗತಿಯು ನಾಗಾಲೋಟದಲ್ಲಿರುವುದು ಆರ್ಥಿಕ ತಜ್ಞರ ವಿಶ್ಲೇಷಣೆಗೂ ನಿಲುಕದ ರೀತಿಯಲ್ಲಿದೆ. ಹೀಗಾಗಿ ವಿದ್ಯುತ್ ಶಕ್ತಿಗೆ ಅಭೂತಪೂರ್ವ ಬೇಡಿಕೆ ಉಂಟಾಗಿದೆ. ಪರಿಣಾಮವಾಗಿ ಕಲ್ಲಿದ್ದಲಿಗೆ ಎಲ್ಲಿಲ್ಲದ ಹಾಗೂ ಎಂದಿಲ್ಲದ ಬೇಡಿಕೆ ಬಂದಿರುವುದು ಸಹಜವಾಗಿದೆ. ಹೀಗೆ ಬೇಡಿಕೆ ಹೆಚ್ಚಿರುವುದರಿಂದಲೇ ಸರ್ಕಾರವು ಪ್ರತಿ ದಿನದ ಆಧಾರದಲ್ಲಿಯೇ ಕಲ್ಲಿದ್ದಲಿನ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಕಾಲದಲ್ಲಿ ಕಲ್ಲಿದ್ದಲು ತಲುಪಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಕಲ್ಲಿದ್ದಲಿನ ಕೊರತೆಯಿಂದ ಯಾವುದೇ ಉಷ್ಣ ವಿದ್ಯುತ್ ಸ್ಥಾವರ ಸ್ಥಗಿತವಾಗದಂತೆ ನೋಡಿಕೊಳ್ಳುತ್ತಿದೆ. 2021–22ರಲ್ಲಿ 77.7 ಕೋಟಿ ಟನ್ ದಾಖಲೆ ಉತ್ಪಾದನೆ ಹಾಗೂ 81.8 ಕೋಟಿ ಟನ್ ಪೂರೈಕೆಯನ್ನೂ ಮಾಡಿದ್ದೇವೆ. ಯುಪಿಎ ಸರ್ಕಾರದ ಆಳ್ವಿಕೆಯ 2013–14ರಲ್ಲಿನ 56.6 ಕೋಟಿ ಟನ್ ಉತ್ಪಾದನೆಗೆ ಹೋಲಿಸಿದಲ್ಲಿ ಇದೊಂದು ದಾಖಲೆ. ಅದೇ ರೀತಿ ಇದೇ ಅವಧಿಯಲ್ಲಿ ಕ್ಯಾಪ್ಟಿವ್ ಗಣಿಗಾರಿಕೆಯಿಂದ ಕಲ್ಲಿದ್ದಲಿನ ಉತ್ಪಾದನೆ 6.6 ಕೋಟಿ ಟನ್‌ನಿಂದ 8.6 ಕೋಟಿ ಟನ್‌ಗೆ ಏರಿಕೆ ಆಗಿದೆ. ಉತ್ಪಾದನೆಯಲ್ಲಿ ಆಗಿರುವ ಶೇ 30ರಷ್ಟು ಏರಿಕೆಯೂ ದಾಖಲೆಯೇ ಆಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವರ ಸಮರ್ಥ ನಾಯಕತ್ವದಲ್ಲಿ ದೂರದೃಷ್ಟಿಯ ಕಲ್ಲಿದ್ದಲು ನೀತಿ ರೂಪಿಸಲಾಗಿದೆ. ಹಾಗಾಗಿ, ಕೋಲ್‌ ಇಂಡಿಯಾ ಮತ್ತು ಸರ್ಕಾರಿ ಸ್ವಾಮ್ಯದ ವಿವಿಧ ಕಂಪನಿಗಳಲ್ಲಿ 7.3 ಕೋಟಿ ಟನ್‌ ಕಲ್ಲಿದ್ದಲು ಈಗ ಲಭ್ಯವಿದೆ. ಇದು ದೇಶದ ವಿದ್ಯುತ್‌ ಸ್ಥಾವರಗಳ 30 ದಿನಗಳ ಬೇಡಿಕೆ ಪೂರೈಸಲು ಸಾಕಾಗುತ್ತದೆ.

ದೇಶೀಯ ಕಲ್ಲಿದ್ದಲಿನ ಉಪಯೋಗ 69.1 ಕೋಟಿ ಟನ್‌ನಿಂದ 2020-21ನೇ ವರ್ಷದಲ್ಲಿ 81.8 ಕೋಟಿ ಟನ್‌ಗೆ ಏರಿಕೆಯಾಗಿದೆ. ಏರಿಕೆ ಪ್ರಮಾಣವು ಶೇ 18.4ರಷ್ಟು. ಅಲ್ಲದೆ, ದೇಶೀಯ ಕಲ್ಲಿದ್ದಲು ಬಳಸಿ ಉತ್ಪಾದಿಸುವ ವಿದ್ಯುತ್‌ನ ಪ್ರಮಾಣವು ಫೆಬ್ರುವರಿ ಹೊತ್ತಿಗೆ ಶೇ 16ರಷ್ಟು ಏರಿಕೆಯಾಗಿದೆ. ಇದರಿಂದಾಗಿ, ಕಲ್ಲಿದ್ದಲು ಆಮದು ಪ್ರಮಾಣ ಇಳಿಕೆಯಾಗಿದೆ. ಆಮದು ಪ್ರಮಾಣ ತಗ್ಗಿರುವುದರಿಂದ ವಿದೇಶಿ ವಿನಿಮಯದ ಮೇಲಿನ ಒತ್ತಡ ಕಡಿಮೆ ಆಗಿರುವುದು ಸಕಾರಾತ್ಮಕ ಬೆಳವಣಿಗೆ. 2020 ಹಾಗೂ 2021ರಲ್ಲಿ ಕ್ರಮವಾಗಿ 19.64 ಕೋಟಿ ಟನ್‌ ಹಾಗೂ 18.66 ಕೋಟಿ ಟನ್ ಕಲ್ಲಿದ್ದಲು ಆಮದು ಕಡಿಮೆಯಾಗಿದೆ.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಆಮದು ಮಾಡುತ್ತಿದ್ದ ಕಲ್ಲಿದ್ದಲಿನ ಪ್ರಮಾಣ ಶೇ 43ರಷ್ಟು ಇಳಿಕೆಯಾಗಿದೆ. ಇದು ವಿದೇಶಿ ವಿನಿಮಯ ಕ್ಷೇತ್ರಕ್ಕೆ ನೀಡಿದ ಕೊಡುಗೆ. 2022ರ ಮೇ 3ರಂದು ದೇಶದಲ್ಲಿ ಉತ್ಪಾದನೆಯಾದ 471 ಕೋಟಿ ಯೂನಿಟ್‌ ವಿದ್ಯುತ್‌ನಲ್ಲಿ ಕಲ್ಲಿದ್ದಲು ಬಳಸಿ ತಯಾರಿಸಿದ ವಿದ್ಯುತ್‌ನ ಪಾಲು ಶೇ 74ರಷ್ಟು ಇದೆ. ಕಲ್ಲಿದ್ದಲಿನ ಅವಲಂಬನೆ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ದೇಶದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕೋಲ್‌ ಇಂಡಿಯಾ ಲಿ. ಏಪ್ರಿಲ್‌ನಲ್ಲಿ ಒಟ್ಟು ಬಳಕೆಯ ಶೇ 14ರಷ್ಟನ್ನು ಪೂರೈಸಿದೆ. ಇಂಧನ ಕ್ಷೇತ್ರವನ್ನು ಸುಭದ್ರಗೊಳಿಸಲು ಮುಂದಿನ 40–50 ವರ್ಷಗಳವರೆಗೆ ಕಲ್ಲಿದ್ದಲಿನ ಮೇಲಿನ ಅವಲಂಬನೆ ಅನಿವಾರ್ಯ.

ಈ ಬೇಸಿಗೆಯ ಧಗೆಯು 122 ವರ್ಷಗಳಲ್ಲಿಯೇ ಅತಿ ಹೆಚ್ಚು. ಹಾಗಾಗಿ, ವಿದ್ಯುತ್‌ನ ಬೇಡಿಕೆ ಹೆಚ್ಚುತ್ತಲೇ ಇದೆ. ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ವಿದ್ಯುತ್‌ ಬೇಡಿಕೆ ಶೇ 10ರಷ್ಟು ಏರಿಕೆ ಕಂಡಿದೆ. ಕಲ್ಲಿದ್ದಲು ಬಳಸಿ ತಯಾರಿಸುವ ವಿದ್ಯುತ್‌ನ ಬೇಡಿಕೆ ಶೇ 8ರಷ್ಟು ಹೆಚ್ಚಳವಾಗಿದೆ. ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ; ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಷ್ಣಾಂಶ ಹೆಚ್ಚುತ್ತಿದೆ. ಈ ಎರಡೂ ಕಾರಣಗಳಿಂದಾಗಿ ಇಂಧನದ ಬೇಡಿಕೆ ಹೆಚ್ಚುತ್ತಲೇ ಹೋಗುತ್ತದೆ. ಹೀಗಾಗಿ, ಪರಿಸರ ಸಂರಕ್ಷಣೆಯನ್ನು ಗಮನದಲ್ಲಿ ಇರಿಸಿಕೊಂಡು ಕಲ್ಲಿದ್ದಲು ಅನಿಲೀಕರಣದಂತಹ (ಗ್ಯಾಸಿಫಿಕೇಷನ್‌) ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. 2030ರ ಹೊತ್ತಿಗೆ 100 ಟನ್‌ ಕಲ್ಲಿದ್ದಲು ಅನಿಲೀಕರಣದ ಗುರಿ ಸಾಧಿಸಲು ಕಲ್ಲಿದ್ದಲನ್ನು ಹೆಚ್ಚು ಉತ್ಪಾದಿಸಿ, ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಕಲ್ಲಿದ್ದಲು ಗಣಿಗಳ ಹರಾಜಿನಿಂದಾಗಿ ಕಲ್ಲಿದ್ದಲು ಉತ್ಪಾದನೆ ಒಟ್ಟಾರೆ ಹೆಚ್ಚಳವಾಗಿದೆ. ಆಮದಿನ ಮೇಲಿನ ಅವಲಂಬನೆ ಕಡಿಮೆಯಾದ ಕಾರಣ, ವಿದೇಶಿ ವಿನಿಮಯದಲ್ಲಿ ₹30 ಸಾವಿರ ಕೋಟಿಯವರೆಗೆ ಉಳಿತಾಯವಾಗಿದೆ.

2040ರ ಹೊತ್ತಿಗೆ ಕಲ್ಲಿದ್ದಲಿನ ಬೇಡಿಕೆ ದ್ವಿಗುಣಗೊಳ್ಳಲಿದೆ. ಇದಕ್ಕೆ ಕಾರಣಗಳು ಹಲವು. ಅನಿಲ ಆಧಾರಿತ ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳುತ್ತಿವೆ ಮತ್ತು ಆಮದು ಕಲ್ಲಿದ್ದಲು ಬಳಸುವ ಉಷ್ಣ ವಿದ್ಯುತ್ ಸ್ಥಾವರಗಳು ನಿಷ್ಕ್ರಿಯವಾಗುತ್ತಿವೆ. ಕೋವಿಡೋತ್ತರ ಅವಧಿಯಲ್ಲಿ ಆರ್ಥಿಕತೆ ಪುನಶ್ಚೇತನಗೊಂಡಿದೆ. ಹೀಗಾಗಿ ವಿದ್ಯುತ್‌ನ ಬೇಡಿಕೆ ಹೆಚ್ಚಳವಾಗಿದೆ. ಕಲ್ಲಿದ್ದಲು ಗಣಿಗಾರಿಕೆ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಕ್ಯಾಪ್ಟಿವ್‌ ಗಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಲ್ಲಿದ್ದಲಿನ ವಾಣಿಜ್ಯ ಬಳಕೆಗೆ ಮುಕ್ತ ಅವಕಾಶ ನೀಡಲಾಗಿದೆ. ಹೀಗೆ, ಕಲ್ಲಿದ್ದಲಿನ ಹೆಚ್ಚಿನ ಬೇಡಿಕೆಯನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡಿದೆ.

ಕಲ್ಲಿದ್ದಲಿನ ಒಂದು ಗಣಿಯನ್ನು ಹಂಚಿಕೆ ಮಾಡಿದ ಬಳಿಕ ಅದು ಕಾರ್ಯಾರಂಭಿಸಲು ಕನಿಷ್ಠ ಎಂಟು ವರ್ಷ ಬೇಕಾಗುತ್ತದೆ. ಪರಿಸರ ಸಚಿವಾಲಯದ ಅನುಮತಿ ಇತ್ಯಾದಿ ಪಡೆದುಕೊಳ್ಳಬೇಕಾಗುತ್ತದೆ. ಕಲ್ಲಿದ್ದಲು ಉತ್ಪಾದನೆ ಹಾಗೂ ಅದರ ಬಳಕೆಗೆ ಬಹಳ ಮಹತ್ವ ಇದೆ. ಆದರೆ, ಸ್ವಾತಂತ್ರ್ಯದ ನಂತರ 50 ವರ್ಷ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್‌ ಪಕ್ಷವು ಈ ಮಹತ್ವವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಕಲ್ಲಿದ್ದಲು ರಾಷ್ಟ್ರೀಯ ಸಂಪತ್ತು. ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಈ ಸಂಪತ್ತನ್ನು ಉತ್ಪಾದಿಸಿ ಬಳಸಬೇಕು ಎಂಬ ಚಿಂತನೆಯನ್ನು ಕಾಂಗ್ರೆಸ್‌ ನಡೆಸಲಿಲ್ಲ. ಇಷ್ಟೊಂದು ಮಹತ್ವದ ಸಂಪತ್ತನ್ನು ಕೆಲವೇ ಜನರ ಸಂಪತ್ತು ಎಂದು ಆಗಿನ ಸರ್ಕಾರಗಳು ಪರಿಗಣಿಸಿದ್ದವು. ಈ ಎಲ್ಲವನ್ನೂ ಈಗಿನ ಸರ್ಕಾರವು ಸರಿಪಡಿಸಿ, ಮುಂದಕ್ಕೆ ಅಡಿ ಇರಿಸಿದೆ.


ಪ್ರಲ್ಹಾದ ಜೋಶಿ

ಯು‍ಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಲ್ಲಿದ್ದಲು ಕ್ಷೇತ್ರವು ತಮ್ಮ ಕೃಪಾಪೋಷಿತ ಜಾಗೀರು ಎಂದೇ ಪರಿಗಣಿಸಲಾಗಿತ್ತು. ಈ ಕ್ಷೇತ್ರವನ್ನು ಭ್ರಷ್ಟರ ಕೈಗೆ ಕೊಟ್ಟು ಕಲ್ಲಿದ್ದಲು ಹಗರಣಕ್ಕೆ ಕಾರಣವಾಯಿತು. ಆಗ ಸರ್ಕಾರಕ್ಕೆ ಆದ ನಷ್ಟ ₹1.86 ಲಕ್ಷ ಕೋಟಿ. ಆದರೆ, ಈಗ ಕಲ್ಲಿದ್ದಲು ಬಿಕ್ಕಟ್ಟು ಉಂಟಾಗಿದೆ ಎಂದು ಕಾಂಗ್ರೆಸ್ ಪಕ್ಷವು ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಅದರ ಜತೆಗೆ ಇರುವ ಪಕ್ಷಗಳಿಗೆ ಕಲ್ಲಿದ್ದಲು ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಮೋದಿ ಅವರ ಮಾರ್ಗದರ್ಶನದಲ್ಲಿ, ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ‍ಪೂರೈಕೆಯಲ್ಲಿ ಕಲ್ಲಿದ್ದಲು ಇಲಾಖೆಯು ದಾಖಲೆ ಬರೆಯಲಿದೆ.

ಲೇಖಕ: ಕೇಂದ್ರ ಸಂಸದೀಯ ವ್ಯವಹಾರ, ಗಣಿ ಹಾಗೂ ಕಲ್ಲಿದ್ದಲು ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.