ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೇಸಿಎಂ' ಕುರಿತು ಚರ್ಚೆ | ಕಾಂಗ್ರೆಸ್ ಮಾತು ಭೂತದ ಬಾಯಲ್ಲಿ ಭಗವದ್ಗೀತೆ

ಕಾಂಗ್ರೆಸ್‌ನ ‘ಪೇಸಿಎಂ’ ಅಭಿಯಾನ, ಅದಕ್ಕೆ ಎದುರಾಗಿ ಬಿಜೆಪಿ ನಡೆಸಿದ ಅಭಿಯಾನವು ರಾಜಕೀಯ ಸಂವಾದದ ಮಟ್ಟವು ಪಾತಾಳಕ್ಕೆ ಕುಸಿದಿರುವ ಸಂಕೇತವೇ?
Last Updated 30 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬಡವರ ಕಲ್ಯಾಣ ಮತ್ತು ಬಡತನ ನಿರ್ಮೂಲನೆಗೆ ನಾವು ಒಂದು ರೂಪಾಯಿ ಖರ್ಚು ಮಾಡಿದರೆ ನಿಜವಾದ ಫಲಾನುಭವಿಗಳಿಗೆ 10 ಪೈಸೆ ಮಾತ್ರ ಸೇರುತ್ತದೆ ಎಂದು 1980ರ ದಶಕದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹೇಳಿದ್ದರು. ಇತ್ತೀಚೆಗೆ, ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖ್ಯಸ್ಥೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸುತ್ತಿದ್ದಾಗ ಅದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದರು. ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ‘ನೆಹರೂ-ಗಾಂಧಿ ಕುಟುಂಬದ ಹೆಸರಿನಲ್ಲಿ ನಾವೆಲ್ಲರೂ ಮೂರು ತಲೆಮಾರುಗಳಿಗಾಗುವಷ್ಟು ಮಾಡಿಕೊಂಡಿದ್ದೇವೆ, ಈಗ ಅವರ ಪರ ನಿಲ್ಲದಿದ್ದರೆ ನಾವು ತಿನ್ನುವ ಅನ್ನದಲ್ಲಿ ಹುಳು ಬೀಳುತ್ತೆ’ ಎಂದು ಹೇಳಿದ್ದರು.

ರಾಜೀವ್ ಗಾಂಧಿ ಅವರ ಪ್ರಾಮಾಣಿಕ ತಪ್ಪೊಪ್ಪಿಗೆ, ಉಪ್ಪಿನ ಋಣ ತೀರಿಸಲು ರಮೇಶ್ ಕುಮಾರ್ ಅವರ ಭಾವನಾತ್ಮಕ ಕರೆ ಈ ಎರಡನ್ನೂ ತಾಳೆ ಹಾಕಿ ನೋಡಿದರೆ ರಾಜೀವ್ ಗಾಂಧಿ ಅವರು ಹೇಳಿಂದತೆ ಕಾಂಗ್ರೆಸ್ ಪಕ್ಷ 60 ವರ್ಷ 90 ಪರ್ಸೆಂಟ್‌ ಸರ್ಕಾರ ನಡೆಸಿದ್ದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಪಷ್ಟವಾಗುತ್ತದೆ.

ಕಾಂಗ್ರೆಸ್‌ನ ಭ್ರಷ್ಟ ಭಾಗ್ಯಕ್ಕೆ ಬ್ರೇಕ್: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಜನ್ ಧನ್ ಖಾತೆ, ಆಧಾರ್, ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ (JAM) ಬಡವರಿಗೆ ಸೇರಬೇಕಾದ ಪ್ರತಿಯೊಂದು ಪೈಸೆಯೂ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬಂದು ಬೀಳುವಂತೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ 60 ವರ್ಷಗಳ 90 ‍ಪರ್ಸೆಂಟ್‌ ಭ್ರಷ್ಟ ಬಾಗ್ಯಕ್ಕೆ ಬ್ರೇಕ್ ಹಾಕಿದ್ದೆ ಇದರ ಹಿಂದಿರುವ ಯುಪಿಐ ವ್ಯವಸ್ಥೆ.

ರಾಜ್ಯದ ರಾಜಕೀಯ ಇತಿಹಾಸ ನೋಡಿದರೆ, ಮೌಲ್ಯಾದರ್ಶಗಳ ಸಾಕಾರದಂತಿದ್ದ ರಾಜಕಾರಣಿಗಳು, ಅವರ ಜನ ಕಾಳಜಿಯ ಬದ್ಧತೆಯ ನೋಟಗಳೇ ದೊರೆಯುತ್ತವೆ. ಕೆಂಗಲ್‌ ಹನುಮಂತಯ್ಯನವರು ನಿರ್ಮಿಸಿದ್ದ ಭವ್ಯ ವಿಧಾನಸೌಧ ಹಾಗೂ ಅದರಲ್ಲಿನ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯ ನಾಡಿನ ರಾಜಕೀಯದ ಮೌಲ್ಯಾದರ್ಶಗಳನ್ನು ಜಗತ್ತಿಗೆ ಸಾರುತ್ತದೆ. ಇಂತಹ ಆದರ್ಶಗಳನ್ನೇ ಬುನಾದಿಯಾಗಿ ಇಟ್ಟುಕೊಂಡು ಬೆಳೆದಿರುವ ರಾಜಕೀಯ ಪಕ್ಷವು ಈಗ ‘ಪೇಸಿಎಂ’ ಎಂಬ ಕೆಳಮಟ್ಟದ ರಾಜಕೀಯ ಅಭಿಯಾನದೊಂದಿಗೆ ಅಧೋಗತಿಗೆ ಸಾಗಿದೆ.

60 ವರ್ಷ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಈಗ ಎಲ್ಲೆಡೆ ಅಧಿಕಾರ ‘ಕೈ’ ತಪ್ಪುತ್ತಿದೆ. ಈ ಹೊತ್ತಿನಲ್ಲಿ ಈ ಅನೈತಿಕ ಮಾರ್ಗವನ್ನು ಹತಾಶ ಕಾಂಗ್ರೆಸ್‌ ನಾಯಕರು ತುಳಿದಿದ್ದಾರೆ. ಜನರು ಅತಿ ಹೆಚ್ಚಾಗಿ ಬಳಸುವ ಹಣ ಪಾವತಿಯ ಆ್ಯಪ್‌ ಬಳಸಿಕೊಂಡೇ ನೀಚ ಮಟ್ಟದ ಸೃಜನ
ಶೀಲತೆ ತೋರಿಸುವ ಹಪಾಹಪಿಗೆ ಅವರು ಬಿದ್ದಿದ್ದಾರೆ.

ಇಷ್ಟೇ ಅಲ್ಲದೆ, ‘ಪೇಸಿಎಂ’ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ ಮೂಲಕ ರಾಜ್ಯ ರಾಜಕೀಯದ ಘನತೆಯನ್ನು ಇನ್ನಷ್ಟು ಕೆಳಮಟ್ಟಕ್ಕೆ ತರಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಂತಹ ಹಿರಿಯ ನಾಯಕರು ಬೀದಿಯಲ್ಲಿ ನಿಂತು ಪೋಸ್ಟರ್‌ ಅಂಟಿಸುವ ಮಟ್ಟಕ್ಕೆ ಇಳಿದಿದ್ದು, ರಾಜಕೀಯದ ಅಧಃಪತನಕ್ಕೆ ಸಾಕ್ಷಿ.

ಶೇ 40 ಕಮಿಶನ್‌– ಗಾಳಿಯಲ್ಲಿ ಗುಂಡು: ಇವೆಲ್ಲ ವಿವಾದಗಳು ಆರಂಭವಾಗಿದ್ದು, ಕಾಂಗ್ರೆಸ್‌ ಕೃಪಾಪೋಷಿತರಾಗಿದ್ದ ಕೆಲ ಗುತ್ತಿಗೆದಾರರಿಂದ. ಗುತ್ತಿಗೆದಾರರು ಆರಂಭದಲ್ಲಿ ಶೇ 40ರಷ್ಟು ಕಮಿಶನ್‌ ಅನ್ನು ಸಚಿವರು ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದಾಗಿ ಇದರ ಬಗ್ಗೆ ಗಮನ ಹರಿಸಿದರು. ಗುತ್ತಿಗೆದಾರರನ್ನು ಕರೆಯಿಸಿ ಅವರೊಂದಿಗೆ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿದರು. ಜೊತೆಗೆ ಟೆಂಡರ್ ಪರಿಶೀಲನೆಗೆ ಎರಡು ಸಮಿತಿಗಳನ್ನು ರಚಿಸಿದರು. ಸ್ವಯಂಚಾಲಿತವಾಗಿಯೇ ಬಿಲ್ ಬರುವ ವ್ಯವಸ್ಥೆ ಮಾಡಿದರು. ಜೊತೆಗೆ, ಟೆಂಡರ್‌ನಲ್ಲಿ ಅಕ್ರಮ ಕಂಡರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಇಷ್ಟೆಲ್ಲ ಕ್ರಮ ವಹಿಸಿದ ನಂತರವೂ ‘ಪೇ ಸಿಎಂ’ ಅಭಿಯಾನದ ಮೂಲಕ ಕಾಂಗ್ರೆಸ್‌ ತನ್ನ ಮಾನವನ್ನೇ ಹರಾಜು ಹಾಕಿಕೊಳ್ಳುತ್ತಿದೆ.

ಇಷ್ಟೆಲ್ಲ ಆರೋಪಗಳನ್ನು ಮಾಡಿದರೂ ಶೇ 40ರಷ್ಟು ಕಮಿಶನ್‌ ಪಡೆಯುತ್ತಿರುವ ಕುರಿತು ಯಾವುದೇ ದಾಖಲೆ ಲಭ್ಯವಿಲ್ಲ. ಈ ಕುರಿತು ಲೋಕಾಯುಕ್ತದಲ್ಲೂ ದೂರು ದಾಖಲಿಸಬಹುದು. ಆದರೆ ಈವರೆಗೆ ದೂರುಗಳು ದಾಖಲಾಗಿಲ್ಲ. ಇದನ್ನು ಯಾವುದೇ ತಾರ್ಕಿಕ ಅಂತ್ಯಕ್ಕೆ ಒಯ್ಯದೆ, ರಾಜಕೀಯವಾಗಿ ಬಳಸಿಕೊಂಡು ಜನರ ಮುಂದೆ ಬಿಜೆಪಿ ಸರ್ಕಾರಕ್ಕೆ ಮಸಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಘನತೆಗೆ ಕುಂದು ತರುವ ಷಡ್ಯಂತ್ರ ಮಾಡಲಾಗಿದೆ.

ಒಂದು ವೇಳೆ, ಕಾಂಗ್ರೆಸ್‌ಗೆ ಇದು ನಿಜವಾದ ಜನರ ಸಮಸ್ಯೆ ಎಂದೇ ಅನಿಸುತ್ತಿದ್ದರೆ, ಈ ಬಗ್ಗೆ ದೂರು ನೀಡುವ ಅಥವಾ ನೀಡಲಾಗುತ್ತಿದೆ ಎನ್ನಲಾಗುವ ಕಮಿಶನ್‌ ತಡೆಯುವಂತಹ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಇದು ಭ್ರಷ್ಟ ಸರ್ಕಾರ ಎಂದು ಜನತೆಯ ಮುಂದೆ ಬಿಂಬಿಸಲು ಕಾಂಗ್ರೆಸ್‌ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಒಂದು ವೇಳೆ ಕಮಿಶನ್‌ ದಂಧೆ ನಿಜವಾಗಿಯೂ ಇದ್ದಲ್ಲಿ, ಅದನ್ನು ತಡೆಗಟ್ಟುವ ಮನಸ್ಸು ಕಾಂಗ್ರೆಸ್‌ ಇಲ್ಲ ಎಂಬುದು ಇಲ್ಲೇ ಸಾಬೀತಾಗಿದೆ. ಹಾಗಾದರೆ ಈ ಅಭಿಯಾನದ ನೈಜ ಉದ್ದೇಶ ಏನು ಎಂದು ನೋಡಲು ಹೊರಟರೆ, ಕಾಣುವುದು ಒಂದು ಸಮುದಾಯವನ್ನು ಟಾರ್ಗೆಟ್‌ ಮಾಡುತ್ತಿರುವ ಪ್ರಯತ್ನ ಮಾತ್ರ.

ಸಮುದಾಯಗಳ ವಿರುದ್ಧ ಕುತಂತ್ರ: ಲಿಂಗಾಯತ, ಒಕ್ಕಲಿಗ ಅಥವಾ ದಲಿತ ಸಮುದಾಯವನ್ನು ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಇರಲು ಬಿಡಬಾರದು ಎಂಬುದೇ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳು. ರಾಜಕೀಯದ ಇತಿಹಾಸವನ್ನು ನೀಡಿದರೆ ಇದು ಸ್ಪಷ್ಟವಾಗುತ್ತದೆ. ನಾಡಿನ ಹೆಮ್ಮೆಯ ಮಣ್ಣಿನ ಮಗ, ಎಚ್‌.ಡಿ.ದೇವೇಗೌಡರು ಪ್ರಧಾನಿಯಾದಾಗ ಅವರ ಸಮುದಾಯದ ಹಿನ್ನೆಲೆಯನ್ನು ಗಮನಿಸಿ ಸಹಿಸಲಾರದೆ ಆ ಸ್ಥಾನದಿಂದ ಅವರನ್ನು ಕೆಳಕ್ಕಿಳಿಸಲಾಯಿತು. ಇದಕ್ಕೆ ರಾಜಕೀಯದ ಬಿರುಗಾಳಿ ಕಾರಣ ಎಂದು ತೇಪೆ ಹಚ್ಚಲಾಯಿತು. ಆದರೆ ಈವರೆಗೂ ಕಾಂಗ್ರೆಸ್‌ ಈ ಬಗ್ಗೆ ಉತ್ತರ ನೀಡಿಲ್ಲ. ಇಷ್ಟೇ ಅಲ್ಲದೆ, ಪಿ.ವಿ.ನರಸಿಂಹರಾವ್‌, ರಾಜಶೇಖರಮೂರ್ತಿ, ಎಸ್‌.ನಿಜಲಿಂಗಪ್ಪ, ಎಸ್‌.ಎಂ.ಕೃಷ್ಣ ಮೊದಲಾದ ನಾಯಕರಿಗೆ ಕಾಂಗ್ರೆಸ್‌ ಯಾವ ರೀತಿಯ ಅನ್ಯಾಯ ಮಾಡಿದೆ ಎಂಬುದು ಕೂಡ ರಾಜಕೀಯದ ದಾಖಲೆಯಲ್ಲಿದೆ.

ಅರಸು ಅವರು ಇನ್ನೂ ಮುಖ್ಯಮಂತ್ರಿಯಾಗಿದ್ದಾಗಲೇ, ಹಿರಿಯರಾದ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಇಂದಿರಾ ಗಾಂಧಿ, ‘ನೀವೇ ಸಿಎಂ’ ಎಂದಿದ್ದರು. ಇದೇ ಮಾದರಿಯಲ್ಲಿ ವೀರೇಂದ್ರ ಪಾಟೀಲ ಅವರನ್ನೂ ಮುಖ್ಯಮಂತ್ರಿ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಲಾಗಿತ್ತು. ಲಿಂಗಾಯತ, ಒಕ್ಕಲಿಗ, ದಲಿತ ಎಂಬ ಯಾವುದೇ ಮುಲಾಜಿಲ್ಲದೆ, ಸಮುದಾಯಗಳನ್ನು ಗುರಿ ಪಡಿಸಿ ಒಂದು ಕುಟುಂಬದಲ್ಲಿ ಮಾತ್ರ ಅಧಿಕಾರ ಕೇಂದ್ರೀಕೃತವಾಗಿರಿಸುವ ಪ್ರಯತ್ನಗಳನ್ನು ಕಾಂಗ್ರೆಸ್‌ ನಿರಂತರವಾಗಿ ಮಾಡುತ್ತದೆ.

ಹೋರಾಟಗಾರರು ಬೇಲ್‌ನಲ್ಲಿದ್ದಾರೆ!: ವಿಪರ್ಯಾಸ ಏನೆಂದರೆ, ಕಮಿಶನ್‌ ವಿರುದ್ಧ ಹೋರಾಡುತ್ತಿರುವ ಅನೇಕ ಕಾಂಗ್ರೆಸ್‌ ನಾಯಕರು ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇನ್ನೂ ಕೆಲ ಯುವ ನಾಯಕರು, ಕ್ರಿಮಿನಲ್‌ ಪ್ರಕರಣಗಳಲ್ಲಿ

ಡಾ.ಕೆ.ಸುಧಾಕರ್‌
ಡಾ.ಕೆ.ಸುಧಾಕರ್‌

ಆರೋಪಿಗಳಾಗಿ ಈಗ ಸಜ್ಜನರಂತೆ ಹೋರಾಟಗಾರರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ, ಲೋಕಾಯುಕ್ತ ಸಂಸ್ಥೆಯಿಂದ ಪೊಲೀಸ್‌ ಬಲವನ್ನು ರಾತ್ರೋರಾತ್ರಿ ಕಿತ್ತುಕೊಂಡು, ಎಸಿಬಿ ರಚಸಿ ಭ್ರಷ್ಟಾಚಾರಕ್ಕೆ ನೀರೆರೆದ ಇತಿಹಾಸವನ್ನು ಜನರು ಮರೆತಿಲ್ಲ. ಇಂತಹ ನಾಯಕರು ಈಗ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿಸಿ ಹೋರಾಟ ಮಾಡುತ್ತಿರುವುದು ರಾಜಕೀಯದ ಅಣಕವಲ್ಲದೆ ಮತ್ತೇನು!

ಇಷ್ಟಾದರೂ ‘ಪೇಸಿಎಂ’ ಅಭಿಯಾನಕ್ಕೆ ಸಾಮಾನ್ಯ ಜನರಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರನ್ನು ಕ್ರಿಯಾಶೀಲವಾಗಿಸಲು ಹಾಗೂ ಒಡೆದು ಚೂರಾಗುತ್ತಿರುವ ಪಕ್ಷವನ್ನು ಕಟ್ಟಲು ಐಷಾರಾಮಿ ವಾಹನದಲ್ಲಿ ಐಕ್ಯತೆಯ ಯಾತ್ರೆ ಮಾಡುತ್ತಿರುವ ರಾಹುಲ್‌ ಗಾಂಧಿ ಅವರನ್ನು ಮೆಚ್ಚಿಸಲು ಕೂಡ ಈ ಅಭಿಯಾನ ವಿಫಲವಾಗಿದೆ.

ಲೇಖಕ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ, ಕರ್ನಾಟಕ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT