ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡೆಂಬ ಭಯೋತ್ಪಾದನೆ...!

ಗಂಡೆಂಬ ಭಯಕ್ಕೆ ಪರ್ಯಾಯವಾಗಿ, ಮಹಿಳೆಯರು ಇದೇ ಗಂಡಸರಲ್ಲಿ ಮೀ ಟೂ ಮೂಲಕ ಹೆಣ್ಣೆಂಬ ಭಯೋತ್ಪಾದನೆ ಹುಟ್ಟಿಸುತ್ತಿದ್ದಾರೆ
Last Updated 31 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘#ಮೀ ಟೂ’ ಅಭಿಯಾನ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ. ‘ಗಂಡಿನ ಭಯೋತ್ಪಾದನೆ’ಯ ಉಪ ಉತ್ಪನ್ನವಾಗಿ ಹುಟ್ಟಿದ #ಮೀ ಟೂ ಅಭಿಯಾನವು ಗಂಡುಗಳಲ್ಲಿ ಹೆಣ್ಣೆಂಬ ಭಯೋತ್ಪಾದನೆಯನ್ನು ಹೇಗೆ ಹುಟ್ಟಿಸಿದೆ ಮತ್ತು ಗಂಡೆಂಬ ಭಯೋತ್ಪಾದನೆಯ ಮೂಲಕವೇ #ಮೀ ಟೂ ಹೇಗೆ ನಿಯಂತ್ರಣಕ್ಕೆ ಒಳಗಾಗುತ್ತಿದೆ ಎನ್ನುವುದರ ಬಗ್ಗೆ ಗಮನ ಸೆಳೆಯುವುದು ಈ ಬರಹದ ಉದ್ದೇಶ.

ಕುಟುಂಬದ ಚೌಕಟ್ಟಿನಲ್ಲಿ ಸ್ತ್ರೀ ಒಬ್ಬಳು, ಇತರ ಹೆಣ್ಣಿನೆಡೆಗೆ ಕುಟುಂಬದ ಗಂಡಸಿಗೆ ತುಡಿತ ಮೂಡದಂತೆ ಕಾವಲು ಕಾಯುತ್ತಾಳೆ. ಪುರುಷನು ಕುಟುಂಬದ ಸ್ತ್ರೀಯರಿಗೆ ಪರಪುರುಷರ ಕಡೆಗೆ ಆಸಕ್ತಿ ಚಿಗುರದಂತೆ ಭದ್ರವಾದ ಬೇಲಿ ಹಾಕಿರುತ್ತಾನೆ. ಆದರೆ ಗಂಡು ಅಥವಾ ಹೆಣ್ಣು ಕುಟುಂಬದಾಚೆ, ಹೊರಜಗತ್ತಿನ ಸಂಪರ್ಕ ಪಡೆದಾಗ ಇತರರ ಬಗ್ಗೆ ಆಸಕ್ತಿ ಚಿಗುರಿಕೊಳ್ಳಲು ಶುರುವಾಗುತ್ತದೆ. ಗಂಡು ಹೊರಜಗತ್ತಿನ ಜತೆ ಹೆಚ್ಚಾಗಿ ಗುರುತಿಸಿಕೊಳ್ಳುವುದರಿಂದ ಆತ ಇತರ ಹೆಣ್ಣುಗಳ ಆಸಕ್ತಿಯನ್ನು ಬಹುಬೇಗ ಈಡೇರಿಸಿಕೊಳ್ಳಲು ಮುಂದಾಗುತ್ತಾನೆ. ಗಂಡಿಗೆ ಹೋಲಿಸಿದರೆ, ಹೆಣ್ಣುಗಳಿಗೆ ಹೊರಜಗತ್ತಿನ ಸಂಪರ್ಕ ಸಿಗುವುದು ಕಡಿಮೆ.

ಸಂಪರ್ಕ ಸಿಕ್ಕರೂ ಅವಳು ಇತರ ಗಂಡುಗಳ ಜತೆಗಿನ ಒಡನಾಟಕ್ಕೆ ಅಷ್ಟು ಬೇಗ ಸಿದ್ಧಳಾಗುವುದಿಲ್ಲ. ಪುರುಷರೇ ಇವರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ, ಒತ್ತಾಯ ಮಾಡುತ್ತಾರೆ, ಕೊನೆಗೆ ಬಲವಂತದ ಆಕ್ರಮಣಕ್ಕೆ ಮುಂದಾಗುತ್ತಾರೆ. ಇಲ್ಲಿ ಈ ಗಂಡು ‘ಗಂಡಾಳ್ವಿಕೆ’ ಜಗತ್ತಿನ ಪ್ರತಿನಿಧಿಯಾಗಿ, ತನ್ನ ಅಧಿಕಾರದ ವಲಯಗಳನ್ನು ಬಳಸಿಕೊಂಡು ‘ಗಂಡೆಂಬ ಭಯೋತ್ಪಾದನೆ’ಯ ಮೂಲಕ ಹೆಣ್ಣನ್ನು ಅಸಹಾಯಕ ಸ್ಥಿತಿಗೆ ತಂದು, ಅವಳ ಇಚ್ಛೆಗೆ ವಿರುದ್ಧವಾಗಿ ತನ್ನ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾನೆ.

ಇಂತಹ ದೌರ್ಜನ್ಯ ಅನುಭವಿಸಿದ ಸ್ತ್ರೀಯರು ತಮ್ಮ ಅಸಹಾಯಕ ಸ್ಥಿತಿಯಲ್ಲಿ ಗಂಡು ಮಾಡಿದ ಆಕ್ರಮಣವನ್ನು ‘ತನ್ನನ್ನು ಕಾಯುವ ಗಂಡುಗಳ’ ಎದುರು ಮತ್ತು ಲೋಕದೆದುರು ಮುಚ್ಚಿಡುತ್ತಾಳೆ. ಹೀಗೆ ಮುಚ್ಚಿಟ್ಟ ನೋವುಗಳನ್ನು ಈಗ ಧೈರ್ಯವಾಗಿ ಸಮಾಜದ ಮುಂದೆ ಹೇಳುವ ಪ್ರಯತ್ನ ಮಾಡುತ್ತಿದ್ದಾಳೆ. ಇದರ ಪರಿಣಾಮ ಹೆಣ್ಣುಗಳ ಮೇಲೆ ಆಕ್ರಮಣ ಮಾಡಿದ ಗಂಡುಗಳು ಬೆಚ್ಚಿಬಿದ್ದು, ಇತರ ಹೆಣ್ಣುಗಳು ಬಾಯಿ ಬಿಡದಂತೆ ಗಂಡಾಳ್ವಿಕೆಯ ಭಯವನ್ನು ಮತ್ತಷ್ಟು ಉತ್ಪಾದಿಸತೊಡಗಿದ್ದಾರೆ.

‘ಗಂಡು ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುತ್ತಾನೆ’ ಎನ್ನುವ ಭಯ ಅಥವಾ ಫೋಬಿಯಾ ಹೆಣ್ಣಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎನ್ನುವುದನ್ನು ಸಹ ಗಂಭೀರವಾಗಿ ನೋಡಬೇಕಾಗಿದೆ. ಶಿಕ್ಷಣಕ್ಕಾಗಿ ಹೆಣ್ಣುಮಕ್ಕಳನ್ನು ಹಳ್ಳಿಗಳಿಂದ ನಗರಕ್ಕೆ ಒಂಟಿಯಾಗಿ ಕಳಿಸುವ ಪ್ರಶ್ನೆ ಬಂದಾಗ ಗಂಡಿನ ಭಯ ಧುತ್ತನೆ ಎದುರಾಗುತ್ತದೆ. ಈ ಕಾರಣಕ್ಕೆ ಗ್ರಾಮೀಣ ಪ್ರದೇಶದ ಲಕ್ಷಾಂತರ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಭಯವೇ ಹೆಣ್ಣು ಎಷ್ಟೋ ಕ್ಷೇತ್ರಗಳಿಗೆ ಕಾಲಿಡುವುದನ್ನು ತಡೆದಿದೆ.

ಇದನ್ನು ಇನ್ನೊಂದು ನೆಲೆಯಲ್ಲಿ ವಿಸ್ತರಿಸುವುದಾದರೆ, ಗಂಡಿನ ಕುರಿತ ಈ ಭಯವನ್ನು ಮೀರುವ ದೊಡ್ಡ ಚಲನೆಯೂ ಇನ್ನೊಂದೆಡೆ ಸಂಭವಿಸುತ್ತಿದೆ. ಜಾಗತಿಕವಾಗಿ ಹೆಣ್ಣು ಶಿಕ್ಷಣದಲ್ಲಿ ಗಂಡಿಗೆ ಸರಿಗಟ್ಟುವ ಏರುಗತಿಯಲ್ಲಿದ್ದಾಳೆ. ಅಂತೆಯೇ ಗಂಡಿನ ಬಗೆಗಿನ ಅಗೋಚರವಾದ ಭಯವನ್ನೂ ದಾಟಿಕೊಂಡ ಮಹಿಳೆಯರು ಇಂದು ಗಂಡು ಪಾರಮ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವೇಶಿಸಿದ್ದಾರೆ. ಹೀಗೆ ಗಂಡಿನ ಲೋಕದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಪ್ರವೇಶ ಮಾಡಿದಾಗ ಈ ಸ್ಥಾನಪಲ್ಲಟ ಸಹಜವಾಗಿ ಗಂಡುಜಾತಿಯಲ್ಲಿ ಅಸಹನೆಯನ್ನೂ, ಅಭದ್ರತೆಯನ್ನೂ ಮೂಡಿಸಿದೆ. ಹೀಗಾಗಿ ಗಂಡಿನ ಹಿಡಿತ ಮತ್ತು ಅಧಿಕಾರದಿಂದ ಹೆಣ್ಣುಗಳು ಕೈಜಾರುವ ಆತಂಕವನ್ನು ಹೊರಹಾಕುವುದರ ಸಂಕೇತವಾಗಿಯೂ ಹೆಣ್ಣುಗಳ ಮೇಲೆ ತಮ್ಮ ದೌರ್ಜನ್ಯದ ವಿವಿಧ ವರಸೆಗಳನ್ನು ಗಂಡು ತೋರಿದ್ದಾನೆ.

ಈ ಕಾರಣಗಳಿಂದಾಗಿ ಪುರುಷ ಪಾರಮ್ಯದ ಕ್ಷೇತ್ರಗಳಿಗೆ ಮೊದಮೊದಲು ಕಾಲಿರಿಸಿದ ಸ್ತ್ರೀಯರು ಸಹಜವಾಗಿ ಗಂಡಿನ ಆಕ್ರಮಣಕ್ಕೆ ಒಳಗಾಗಿದ್ದಾರೆ. ಈ ನೆಲೆಯಲ್ಲಿ ಗ್ರಹಿಸಿದಾಗ, ಆಯಾ ಕ್ಷೇತ್ರಕ್ಕೆ ಹೆಣ್ಣುಗಳು ಹೆಚ್ಚೆಚ್ಚು ಬರತೊಡಗಿ, ಗಂಡಿನ ಪಾರಮ್ಯವನ್ನು ಮರೆ ಮಾಡುತ್ತಾ ಹೆಣ್ಣಿನ ಪಾಲ್ಗೊಳ್ಳುವಿಕೆಯು ಸಹಜತೆಗೆ ಮರಳುತ್ತಿದ್ದಂತೆ ಗಂಡಿನ ಹಿಂಸೆ, ಕಿರುಕುಳ ದೌರ್ಜನ್ಯದ ಪ್ರಮಾಣ ಇಳಿಕೆಯಾಗುತ್ತಾ ಹೋಗಿರುವುದನ್ನು ಗಮನಿಸಬಹುದು.

ಇದನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸಿದರೆ, ಗಂಡು ಚಾರಿತ್ರಿಕವಾಗಿ ಹುಟ್ಟಿಸಿದ ಗಂಡೆಂಬ ಭಯಕ್ಕೆ ಪರ್ಯಾಯವಾಗಿ, ಮಹಿಳೆಯರು ಇದೇ ಗಂಡಸರಲ್ಲಿ # ಮೀ ಟೂ ಮೂಲಕ ‘ಹೆಣ್ಣೆಂಬ ಭಯ’ ಹುಟ್ಟಿಸುತ್ತಿದ್ದಾರೆ. ಇದೀಗ ಗಲಿಬಿಲಿಗೊಂಡ ಗಂಡುಲೋಕ, ಸಡಿಲವಾದ ಗಂಡಿನ ಭಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಗಂಡಿನ ನವಭಯೋತ್ಪಾದನೆಗೆ ತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT