ಬುಧವಾರ, ಏಪ್ರಿಲ್ 8, 2020
19 °C
ನಾಯಕರು ಪ್ರಚಾರಕ್ಕಾಗಿ ಹಂಬಲಿಸಿ ಹೇಳಿಕೆ ನೀಡುವುದರಲ್ಲಿ ತೃಪ್ತಿಪಟ್ಟುಕೊಳ್ಳದೆ, ಜನರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು

ಹೊಣೆ ಅರಿತು ವರ್ತಿಸೋಣ

ಸಾಮಗ ದತ್ತಾತ್ರಿ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರ ರೂಪಿಸುವ ಎಲ್ಲ ಕಾಯ್ದೆ, ಕಾನೂನುಗಳನ್ನು ಎಲ್ಲರೂ ಒಪ್ಪಬೇಕು ಎಂದೇನಿಲ್ಲ. ಆದರೆ, ಕಾಯ್ದೆ–ಕಾನೂನು ರೂಪಿಸುವಾಗ ಅದರ ಪ್ರಯೋಜನಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು. ಅದರಿಂದ ಎದುರಾಗಬಹುದಾದ ಎಡರುತೊಡರುಗಳ ಬಗ್ಗೆ ಆಲೋಚಿಸಿಯೇ ಜಾರಿಗೆ ಮುಂದಾಗಬೇಕು.

ಆದರೆ, ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರದಲ್ಲಿ ಇವು ಎರಡೂ ಆಗಿಲ್ಲ. ದೇಶದ ಜನ, ಈ ಕಾಯ್ದೆ ಮತ್ತು ಎನ್‌ಆರ್‌ಸಿಯನ್ನು ಅರ್ಥೈಸಿಕೊಳ್ಳಲಾಗದೆ, ಒಪ್ಪಿಕೊಳ್ಳಲೂ ಆಗದೆ ದ್ವಂದ್ವಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ, ದೇಶದಾದ್ಯಂತ ಪ್ರತಿಭಟನೆಗಳು ನಡೆದು ಅನಾಹುತ ಕೂಡ ಆಗಿದೆ.

ನಾಯಕರು ಅನ್ನಿಸಿಕೊಂಡವರು ಪ್ರಸಿದ್ಧಿ, ಪ್ರಚಾರಕ್ಕೆ ಹಂಬಲಿಸಿ ಹೇಳಿಕೆ ನೀಡುವುದರಲ್ಲಿ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಇದರ ಬದಲು ಜನರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು. ವಿಶೇಷವಾಗಿ ದೃಶ್ಯ ಮಾಧ್ಯಮಗಳು ಪ್ರತಿಭಟನೆಯ ದೃಶ್ಯಗಳನ್ನು ಮತ್ತೆ ಮತ್ತೆ ತೋರಿಸಿ ಪ್ರಚೋದನೆ ನೀಡುವುದನ್ನು ನಿಲ್ಲಿಸಬೇಕು. ಸಾಧ್ಯವಾದರೆ ಆರೋಗ್ಯಪೂರ್ಣ ಚರ್ಚೆಗಳಿಗೆ ಅವಕಾಶ ಮಾಡಿಕೊಡಬೇಕು. ಭಾರತದತ್ತ ಇಡೀ ವಿಶ್ವ ನೋಡುತ್ತಿದೆ. ಇಂತಹ ಗಂಭೀರ ವಿಚಾರಗಳು ಹಾದಿ–ಬೀದಿ ಜಗಳ ಆಗುವುದರಿಂದ ದೇಶದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂಬುದನ್ನು ಅಧಿಕಾರಸ್ಥರೂ ಅರಿಯಬೇಕು.

ಕಿಕ್ಕೇರಿ ಎಂ. ಚಂದ್ರಶೇಖರ್, ಬೆಂಗಳೂರು

ಅತಂತ್ರ ಪ್ರಜಾತಂತ್ರ

ದೇಶದಲ್ಲಿ ಈಗ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣವಾದ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದಾಗ್ಯೂ, ಕೆಲವರು ಈ ಕಾಯ್ದೆಯಿಂದ ಹತಾಶರಾಗಿದ್ದಾರೆ. ಈ ಬಗ್ಗೆ ಭಾರತೀಯರು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ಕೊಟ್ಟಿದ್ದರೂ ಇವರಿಗೆ ಸಮಾಧಾನವಿಲ್ಲ. ಇವರು ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಯಲು ಸಿದ್ಧರಿಲ್ಲ. ಎಂದೇ ರಸ್ತೆಗೆ ಇಳಿದಿದ್ದಾರೆ. ಈ ಕಾಯ್ದೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸಂಸತ್ತಿನ ಎರಡೂ ಸದನಗಳಲ್ಲಿ ವ್ಯಾಪಕವಾಗಿ ಚರ್ಚೆಗೊಳಪಟ್ಟು, ಅನುಮೋದನೆ ಪಡೆದು ಕಾಯ್ದೆಯಾಗಿ ರೂಪುಗೊಂಡದ್ದನ್ನು ಸರ್ಕಾರ ಯಾಕೆ ಹಿಂದಕ್ಕೆ ಪಡೆಯಬೇಕು? ಒಂದಷ್ಟು ಮಂದಿ ರಸ್ತೆಗೆ ಇಳಿದು ಕೂಗಿದಾಕ್ಷಣ ಸರ್ಕಾರ ಮಣಿಯಬೇಕೇಕೆ? ಈ ಕಾಯ್ದೆಯ ಯಾವ ಅಂಶ ಅಥವಾ ಭಾಗ ಏಕೆ ಮತ್ತು ಹೇಗೆ ಒಂದು ವರ್ಗದ ಜನರಿಗೆ ಮಾತ್ರ ವಿರುದ್ಧವಾಗಿದೆ ಎನ್ನುವುದನ್ನು ಪ್ರತಿಭಟನೆ ಆಯೋಜಿಸಿದ ನೇತಾರರು ವಿವರಿಸಿಲ್ಲ. ಇವರನ್ನು ಅನುಸರಿಸಿದ ಬಹುಮಂದಿ ಈ ವಿಷಯದಲ್ಲಿ ಅಮಾಯಕರು; ಮುಂದಾಳು ಹೇಳಿದಂತೆ ಮೂಕವಾಗಿ ಹಿಂಬಾಲಿಸುವವರು. ಇದು ಈ ನಮ್ಮ ಪ್ರಜಾತಂತ್ರದ ಅತಂತ್ರ ಸ್ಥಿತಿಗೆ ತೋರುಬೆರಳು.

ಈಗಿನ ಪ್ರತಿಭಟನೆಗೆ ಅರ್ಥವಿಲ್ಲ. ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದ್ದರೂ ಈ ಕಾಯ್ದೆ ಬಗ್ಗೆ ಶಂಕೆ ಇದ್ದರೆ ಅದನ್ನು ಅಸಿಂಧುಗೊಳಿಸಲು ಸಂವಿಧಾನಾತ್ಮಕ ಅವಕಾಶ ಇರುವಾಗ ಮತ್ತು ಈ ಅವಕಾಶವನ್ನು ಈಗಾಗಲೇ ಬಳಸಿಕೊಂಡಿರುವಾಗ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಜೀವನಕ್ಕೆ ತೊಂದರೆಯುಂಟುಮಾಡಿ, ಆಸ್ತಿಪಾಸ್ತಿಗೆ ನಷ್ಟವುಂಟುಮಾಡಿ, ಸಾವುನೋವಿಗೆ ಕಾರಣ ಆಗುವುದು ಎಂದಿಗೂ ಸಮರ್ಥನೀಯ ಅಲ್ಲ. ಈ ದೇಶದಲ್ಲಿ ರಾಜಕೀಯ ಪಕ್ಷಗಳು ವಿರೋಧ ಪಕ್ಷಗಳಾಗಿದ್ದಾಗ ಇಂಥ ಅಪಮಾರ್ಗವನ್ನೇ ಬಳಸಿಕೊಳ್ಳುತ್ತಾ ಮುಂದುವರಿದಿವೆ. ನಾಯಕರು ನೋವು ತಿನ್ನುವುದಿಲ್ಲ; ಬೆಂಬಲ ಕೊಟ್ಟವರು ಬಾಧೆಗೊಳಗಾಗುತ್ತಾರೆ. ಕಾನೂನುಬಾಹಿರವೂ ಅರ್ಥಹೀನವೂ ಆದ ಇಂಥ ಹಿಂಸಾತ್ಮಕ ಪ್ರತಿಭಟನೆಗಳು ಪ್ರಜಾತಂತ್ರದ ಅಣಕವಲ್ಲದೆ ಮತ್ತೇನು?

ಸಾಮಗ ದತ್ತಾತ್ರಿ, ಬೆಂಗಳೂರು

ಮನವರಿಕೆ ಮಾಡಲಿ

ನಮ್ಮ ದೇಶದಲ್ಲಿ ಯಾವುದೇ ಒಂದು ಪ್ರಮುಖ ನಿರ್ಧಾರ ಪ್ರಕಟವಾದಾಗ ಅದರ ಸಾಧಕ–ಬಾಧಕ ಕುರಿತು ಪೂರ್ಣ ಮಾಹಿತಿಯನ್ನು
ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗುವುದಿಲ್ಲ. ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತ ಮಾಹಿತಿಗೂ ಈ ಮಾತು ಅನ್ವಯಿಸುತ್ತದೆ. ಎಷ್ಟೋ ಬಾರಿ ಇಂತಹ ವಿಷಯಗಳ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೇ ಪೂರ್ಣ ಮಾಹಿತಿ ಇರುವುದಿಲ್ಲ. ಅವರು ಕೇವಲ ತಮ್ಮ ಪಕ್ಷದ ನಾಯಕರ ಹೇಳಿಕೆಗೆ ಪೂರಕವಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಾರೆ.

ಯಾವುದೇ ವಿಷಯದ ಬಗ್ಗೆ ತಕ್ಕಮಟ್ಟಿಗಾದರೂ ತಿಳಿದುಕೊಂಡು, ಅದರ ಪರಿಣಾಮಗಳ ಬಗ್ಗೆ ತಿಳಿದವರ ಜೊತೆ ಚರ್ಚಿಸಿ, ಅನುಮಾನಗಳನ್ನು ಪರಿಹರಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕು. ಪೌರತ್ವ ಕಾಯ್ದೆ ಬಗ್ಗೆ ನಮ್ಮ ನಾಯಕರ ಹೇಳಿಕೆಗಳು ಜನಸಾಮಾನ್ಯರಲ್ಲಿ ಗೊಂದಲ ಹೆಚ್ಚಿಸುತ್ತಿವೆ. ಮೊದಲೇ ನಿಖರ ಮಾಹಿತಿ ಇಲ್ಲ. ಅದರೊಂದಿಗೆ ದಾರಿ ತಪ್ಪಿಸುವ ಹೇಳಿಕೆಗಳೂ ಸೇರಿಕೊಂಡು ಜನರನ್ನು ಸಂದಿಗ್ಧಕ್ಕೆ ದೂಡಿವೆ. 

ಕಡೂರು ಫಣಿಶಂಕರ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು