ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಹಳೆ ಅಕ್ರಮಗಳ ಹೊಸ ತನಿಖೆ ಏಕೆ ಬೇಡ?

Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣವನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಂತೆ ಶಕ್ತಿಶಾಲಿಯಾಗಿ ಬಳಸಿಕೊಂಡ ಮತ್ತೊಬ್ಬ ರಾಜಕಾರಣಿ ಕರ್ನಾಟಕದಲ್ಲಿ ಇಲ್ಲ. ಪ್ರತಿ ಬೆಳಿಗ್ಗೆಯೂ ರಾಜಕೀಯ ಆರೋಪಗಳನ್ನು ಒಳಗೊಂಡ ಸರಣಿ ಟ್ವೀಟ್‌ಗಳನ್ನು ಅವರು ಮಾಡುತ್ತಾರೆ. ಬಳಿಕ ಮಾಧ್ಯಮಗೋಷ್ಠಿ ನಡೆಸಿ ಅಥವಾ ಸುದ್ದಿವಾಹಿನಿಗಳಿಗೆ ಹೇಳಿಕೆಗಳನ್ನು ನೀಡಿ ಆ ವಿಚಾರವು ಇಡೀ ದಿನ ಚರ್ಚೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ ಮತ್ತು ಆ ಮೂಲಕ ತಾವೂ ಸುದ್ದಿಯಲ್ಲಿ ಇರುವಂತೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಇದ್ದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ಒಂದು ವರ್ಷದಿಂದ ಇರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಸತತವಾಗಿ ಕಿಡಿಕಾರುತ್ತಲೇ ಇದ್ದಾರೆ. ಇದನ್ನು ನೋಡಿ ಅದಕ್ಷ ಮತ್ತು ಅಸಮರ್ಥ ಸಚಿವರನ್ನು ಒಳಗೊಂಡ ಕರ್ನಾಟಕದ ಅತ್ಯಂತ ಭ್ರಷ್ಟ ಸರ್ಕಾರ ಇದು ಎಂದು ಯಾರಾದರೂ ಭಾವಿಸಿದರೆ ಅದಕ್ಕೆ ಸಿದ್ದರಾಮಯ್ಯ ಅವರನ್ನು ದೂರಲಾಗದು. ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘವು ಮಾಡಿದ ಆರೋಪವನ್ನು ಸಿದ್ದರಾಮಯ್ಯ ಅವರು ಎಷ್ಟು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದರೆ, ಎಂಟೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮದ ಬಗ್ಗೆ ಬಿಜೆಪಿ ನಾಯಕರಲ್ಲಿ ಚಿಂತೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸಭೆ ಸೇರಿದ್ದ ಬಿಜೆಪಿ ನಾಯಕರು ತಡವಾಗಿಯಾದರೂ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ 2013–2018ರ ನಡುವೆ ಅಧಿಕಾರದಲ್ಲಿದ್ದ ‘ಕಳಂಕಿತ’ ಸರ್ಕಾರದ ವಿರುದ್ಧ ‘ಪ್ರತಿದಾಳಿ’ ನಡೆಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಮತ್ತು ಅತ್ಯಂತ ಕೋಮುವಾದಿ ಮುಖ್ಯಮಂತ್ರಿ ಎಂದು ಬಿಂಬಿಸುವುದು ಬಿಜೆಪಿ ನಾಯಕರ ಉದ್ದೇಶ. ಈ ಕಾರಣಗಳಿಂದಾಗಿಯೇ 2018ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಜನರು ಶಿಕ್ಷೆ ವಿಧಿಸಿದರು ಎಂಬುದನ್ನು ತೋರಿಸುವುದು ಬಿಜೆಪಿಯ ಗುರಿ.

ಇದನ್ನು ಏಕೆ ಮಾಡಬಾರದು?

ಅನ್ನಭಾಗ್ಯ, ಶಾದಿ ಭಾಗ್ಯದಂತಹ ಕಾರ್ಯಕ್ರಮಗಳು, ರೈತರು, ಹೈನುಗಾರರು, ಮೀನುಗಾರರಿಗೆ ಹೆಚ್ಚಿನ ಸಹಾಯಧನ, ಸಾಲ ಮನ್ನಾ ಮುಂತಾದ ‘ಬಡವರಪರ ನೀತಿ’ಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿಕೊಂಡರೂ ಸಿದ್ದರಾಮಯ್ಯ ನೇತೃತ್ವದಲ್ಲಿ 2018ರಲ್ಲಿ ಕಾಂಗ್ರೆಸ್ ಸೋತಿತು. ವಿಧಾನಸಭೆಯಲ್ಲಿ ಪಕ್ಷದ ಬಲವು 122ರಿಂದ 78ಕ್ಕೆ ಕುಸಿಯಿತು. ಅಷ್ಟೆಲ್ಲ ‘ಜನಪ್ರಿಯತೆ’ ಹೊಂದಿದ್ದರೂ ಸಿದ್ದರಾಮಯ್ಯ ಅವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಸೋತರು, ಬಾದಾಮಿಯಲ್ಲಿ 2,000ಕ್ಕೂ ಕಡಿಮೆ ಅಂತರದಲ್ಲಿ ತಿಣುಕಾಡಿ ಗೆದ್ದರು. ತೀರಾ ಇತ್ತೀಚೆಗೆ, ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಸಿದ್ದರಾಮಯ್ಯ ಅವರ ಗುರಿ ಆಗಿದ್ದಾರೆ. ನಾಗೇಶ್‌ ಅವರು ಸಚಿವರಾದ ಬಳಿಕ ಶಿಕ್ಷಣ ಇಲಾಖೆಯಲ್ಲಿ ‘ಅಗಾಧ ಪ್ರಮಾಣದಲ್ಲಿ ಭ್ರಷ್ಟಾಚಾರ’ ನಡೆದಿದ್ದು, ‘ಟನ್‌ಗಟ್ಟಲೆ ಪುರಾವೆ’ ಇದೆ ಎಂದು ಸಿದ್ದರಾಮಯ್ಯ ಆರೋ‍ಪಿಸಿದ್ದಾರೆ. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ನಾಗೇಶ್‌ ಅವರ ಬದ್ಧತೆ ಮತ್ತು ಸರಳತೆಯ ಅರಿವಿರುವವರು ಸಿದ್ದರಾಮಯ್ಯ ಅವರ ಆರೋಪವನ್ನು ಕಂಡು ನಗಬಹುದು ಮತ್ತು ಅವರ ಉದ್ದೇಶದ ಬಗ್ಗೆಯೇ ಗಂಭೀರ ಪ್ರಶ್ನೆ ಎತ್ತಬಹುದು. ಸಚಿವರಾಗಿರುವಾಗ ಕೂಡ ನಾಗೇಶ್‌ ಅವರು ಬಸ್‌ ಅಥವಾ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.

ತಿರುಗೇಟಿನ ಕ್ರಮವಾಗಿ, 2014–15ರಲ್ಲಿ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರ ಆರೋಪಗಳ ಬಗ್ಗೆ ಸಿಐಡಿ ತನಿಖೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರವು ಆದೇಶಿಸಿದೆ. ಈ ನೇಮಕಾತಿಯಲ್ಲಿ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲದವರನ್ನೂ ನೇಮಿಸಿಕೊಳ್ಳಲಾಗಿದೆ ಎಂಬ ಆರೋಪ ಇದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗಂಭೀರವಾದ ಹಲವು ಹಗರಣಗಳು ನಡೆದಿವೆ. ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್‌ ಹಗರಣ ಅದರಲ್ಲಿ ಒಂದು. ಬೆಲೆಬಾಳುವ541 ಎಕರೆ ಜಮೀನನ್ನು ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಡಿನೋಟಿಫೈ ಮಾಡಲಾಗಿದೆ. ಆದರೆ, ‘ರೀಡೂ’ ಆದೇಶಕ್ಕೆ ಮಾತ್ರ ತಾವು ಸಹಿ ಹಾಕಿರುವುದಾಗಿ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ಈ ಹಗರಣದ ಬಗ್ಗೆ ನಡೆದ ತನಿಖೆಯನ್ನು ಅವರು ಸ್ಥಗಿತಗೊಳಿಸಿದರು. ಅವರಿಗಿಂತ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು
ಎಚ್‌.ಡಿ. ಕುಮಾರಸ್ವಾಮಿ ಅವರಂತೆ ತಾವು ಸಿಕ್ಕಿ ಬೀಳದಂತೆ ನೋಡಿಕೊಂಡರು.

ಸ್ವಜನ ಪಕ್ಷಪಾತದ ಆರೋಪವನ್ನೂ ಸಿದ್ದರಾಮಯ್ಯ ಎದುರಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸಿ.ಟಿ ಮತ್ತು ಎಂ.ಆರ್‌.ಐ ಪ್ರಯೋಗಾಲಯ ಸ್ಥಾಪಿಸುವ ಗುತ್ತಿಗೆಯನ್ನು ಟೆಂಡರ್‌ ಕರೆಯದೆಯೇ ಅವರ ಮಗ ಡಾ. ಯತೀಂದ್ರ ಅವರ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಡಿಜಿಟಲ್‌ ಸೊಲ್ಯೂಷನ್ಸ್‌ ಎಂಬ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಇದು ತಮ್ಮ ಗಮನಕ್ಕೆ ಬಾರದೆ ಆಗಿರುವ ಕೆಲಸ ಎಂದು ಸಿದ್ದರಾಮಯ್ಯ ಹೇಳಿಕೊಂಡರು.

ಸಿದ್ದರಾಮಯ್ಯ ಅವರಿಗೆ ದುಬಾರಿ ವಾಚುಗಳು, ಶೂಗಳು ಮತ್ತು ತಂಪು ಕನ್ನಡಗಳ ಬಗ್ಗೆ ಭಾರಿ ಮೋಹ ಇದೆ. ವಜ್ರಖಚಿತವಾದ ₹70 ಲಕ್ಷ ಬೆಲೆಬಾಳುವ ಹುಬ್ಲೊ ವಾಚನ್ನು ಸಿದ್ದರಾಮಯ್ಯ ಕಟ್ಟಿಕೊಂಡಿದ್ದುದು ವಿವಾದವೂ ಆಗಿತ್ತು. ಆರಂಭಕ್ಕೆ ಇದು ಯಾರು ಕೊಟ್ಟದ್ದು ಎಂಬುದೇ ಗೊತ್ತಿಲ್ಲ ಎಂದರು, ಬಳಿಕ ದುಬೈನ ‘ವೈದ್ಯ ಗೆಳೆಯ’ ಕೊಟ್ಟದ್ದು ಎಂದರು. ಆಮೇಲೆ, ವಾಚು ಕುರಿತು ಆರೋಪ ಮಾಡಿದ್ದ ಕುಮಾರಸ್ವಾಮಿ ಅವರಿಗೇ ₹5 ಲಕ್ಷಕ್ಕೆ ಕೊಟ್ಟುಬಿಡುತ್ತೇನೆ ಎಂದರು. ಅಂತಿಮವಾಗಿ, ವಿಧಾನಸೌಧದಲ್ಲಿ ಇರಿಸುವುದಕ್ಕಾಗಿ ಕೊಡಲು ನಿರ್ಧರಿಸಿದರು.

ಆಂಜನೇಯ ಅವರು ಸಚಿವರಾಗಿದ್ದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ ಮತ್ತು ದಿಂಬು ಖರೀದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರದ ಆರೋಪ‍ ಕೇಳಿ ಬಂದಿತ್ತು. ಡಿ.ಕೆ. ಶಿವಕುಮಾರ್‌ ಸಚಿವರಾಗಿದ್ದ ಇಂಧನ ಇಲಾಖೆಯ ಸೌರ ಶಕ್ತಿ ಗುತ್ತಿಗೆ ಹಂಚಿಕೆಯಲ್ಲಿಯೂ ನಿಯಮ ಉಲ್ಲಂಘನೆಯ ಆಪಾದನೆ ಇತ್ತು. ಈ ಎಲ್ಲ ಪ್ರಕರಣಗಳ ಕುರಿತು ತನಿಖೆ ಅತ್ಯಂತ ಅಗತ್ಯ.

‘ಸ್ವಚ್ಛ ಮತ್ತು ಭ್ರಷ್ಟಾಚಾರಮುಕ್ತ’ ಸರ್ಕಾರದ ಭರವಸೆ ಕೊಟ್ಟು ಅಧಿಕಾರಕ್ಕೆ ಏರಿದ ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ನೇರವಾಗಿ ತಮ್ಮ ಅಧೀನದಲ್ಲಿ ಇರುವಂತಹ ಭ್ರಷ್ಟಾಚಾರ ತಡೆ ಘಟಕವನ್ನು (ಎಸಿಬಿ) ಸ್ಥಾಪಿಸಿ ‘ಭ್ರಷ್ಟಾಚಾರದ ರಕ್ಷಕ’ ಆದರು. ಎಸಿಬಿಯನ್ನು ಹೈಕೋರ್ಟ್‌ ಇತ್ತೀಚೆಗೆ ರದ್ದುಗೊಳಿಸಿದೆ, ಅಲ್ಲಿ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ.

ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸುವ ಭರವಸೆಯು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇತ್ತು. ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮರೆತದ್ದು ಹೌದು. ಆದರೆ, ಹೈಕೋರ್ಟ್‌ ಆದೇಶದ ಬಳಿಕ, ಸರ್ಕಾರವುಎ.ಸಿ.ಬಿಯನ್ನು ರದ್ದುಪಡಿಸಿ, ಲೋಕಾಯುಕ್ತವನ್ನು ಬಲಪಡಿಸುವ ಭರವಸೆ ಕೊಟ್ಟಿದೆ.

ಲೋಕಾಯುಕ್ತವು 67 ಪ್ರಮುಖ ರಾಜಕಾರಣಿಗಳು, 28 ಐಎಎಸ್‌ ಅಧಿಕಾರಿಗಳು ಮತ್ತು ಎಂಟು ಐಪಿಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಆದರೆ, ಎಸಿಬಿ ಕಳೆದ ಎಂಟು ವರ್ಷಗಳಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಅಥವಾ ಒಬ್ಬನೇ ಒಬ್ಬ ಹಿರಿಯ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ನಡೆಸುತ್ತಿದ್ದಾರೆ ಎಂದು ಹೇಳಲಾಗುವ ‘ಭ್ರಷ್ಟಾಚಾರದ ವಿರುದ್ಧದ ಸಮರ’ವು ಪರಿಹಾಸ ಮಾತ್ರ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ.

ಸಾರ್ವಜನಿಕ ಜೀವನದಲ್ಲಿ ಋಜುತ್ವವನ್ನು ಪುನಃ ಸ್ಥಾಪಿಸಲು ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಹಗರಣಗಳತ್ತ ಬೊಟ್ಟು ತೋರಿ ಪ್ರಕರಣಗಳ ತನಿಖೆ ನಡೆಸಿದರಷ್ಟೇ ಸಾಲದು. ಇತ್ತೀಚೆಗೆ ನಡೆದ ಪಿಎಸ್ಐ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿನ ಅಕ್ರಮ ಆರೋಪ, ಬಿಬಿಎಂಪಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆಯೂ ಪ್ರಾಮಾಣಿಕ ತನಿಖೆಯನ್ನು ಬೊಮ್ಮಾಯಿ ಅವರು ನಡೆಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಈಗಿನದ್ದು ಬೊಮ್ಮಾಯಿ ಅವರಿಗೆ ಅಗ್ನಿಪರೀಕ್ಷೆಯ ಕಾಲ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಲೇಖಕ: ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT