ಸೆಲಬ್ರಿಟಿಗಳ ನಾಯಿ ಪ್ರೀತಿ
ಒಂದು ಕಡೆ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಹುಸಿ ಅನುಕಂಪ, ಪ್ರಾಣಿ ದಯಾಸಂಘಗಳ ಬಾಯಿ ಬೊಬ್ಬೆ; ಇನ್ನೊಂದು ಕಡೆ ನಟನಟಿಯರು, ಶ್ರೀಮಂತರು, ‘ಸೆಲಬ್ರಿಟಿಗಳ’ ಬಡಿವಾರದ ಹುಸಿ ನಾಯಿಪ್ರೀತಿ. ಇವರ ತೋರಿಕೆಯ ಪ್ರಾಣಿಪ್ರೀತಿಯಿಂದಾಗಿ, ಮನುಷ್ಯರ ಮೇಲೆ ದಾಳಿ ಮಾಡುವ ಆಕ್ರಮಣಕಾರಿ ನಾಯಿಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇಂತಹ ಜನರ ತೋರಿಕೆಯ ಬಾಯುಪಚಾರಕ್ಕಿಂತ ನಮ್ಮ ಸಾಮಾನ್ಯ ಜನರ ಪ್ರಾಣಿಪ್ರೀತಿ ದೊಡ್ಡದು.
ಈ ಬೊಬ್ಬೆ ಹೊಡೆಯುವ, ಹುಸಿ ಪ್ರಾಣಿಪ್ರೀತಿಯ ಕೆಲವೇ ಜನರಿಂದ ಸಾವಿರಾರು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಎಂದೆಂದೂ ಬೀದಿಯಲ್ಲಿ ನಡೆದುಹೋಗದ, ಬಡವರ ಕಷ್ಟ ಗೊತ್ತಿರದ, ಸಾಮಾನ್ಯ ಜನರ ಬದುಕು ಹೇಗಿದೆ ಎಂದು ಇಣುಕಿಯೂ ನೋಡದ ಜನ ಬೀದಿ ನಾಯಿಗಳ ಬಗ್ಗೆ ಪ್ರೀತಿ ತೋರುವುದು ಹಾಸ್ಯಾಸ್ಪದ. ನಾಯಿ ಕಡಿತಕ್ಕೆ ಒಳಗಾದ ಮನುಷ್ಯರ ಬಗ್ಗೆ ಕಾಳಜಿ ಮಾಡದೆ, ಕಚ್ಚುವ ನಾಯಿಗಳ ಬಗ್ಗೆ ದಯೆ ತೋರುವುದನ್ನು ಮಾನವೀಯತೆ ಎನ್ನಲಾಗದು.