ಬುಧವಾರ, ಏಪ್ರಿಲ್ 8, 2020
19 °C
ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತಬೇಕೆಂದು ಮಾತನಾಡುವವರು ಮೊದಲಿಗೆ ಶಿಕ್ಷಕರ ತರಬೇತಿಯ ಮಟ್ಟದ ಬಗ್ಗೆ ಚಿಂತಿಸಬೇಕು

ಶಿಕ್ಷಕರ ತರಬೇತಿ: ಎತ್ತ ಸಾಗುತ್ತಿದೆ?

ಡಾ. ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

‘ದೂರಶಿಕ್ಷಣ ಕೇಂದ್ರಗಳಾದ ಬಿ.ಇಡಿ ಕಾಲೇಜುಗಳು’ ಎಂಬ ಲೇಖನ ಪ್ರಕಟವಾಗಿದೆ (ಪ್ರ.ವಾ., ಜೂನ್‌ 16). ಇದನ್ನು ಬರೆದ ಚಂದ್ರಹಾಸ ಹಿರೇಮಳಲಿ ಹೇಳಿದ ಹಾಗೆ, ಇಂಥ ಬಹಳಷ್ಟು ಕಾಲೇಜುಗಳು ‘ದೂರಶಿಕ್ಷಣ’ ಕೇಂದ್ರಗಳಾಗಿಲ್ಲ, ಶಿಕ್ಷಣವನ್ನೇ ದೂರವಿಡುವ ಕೇಂದ್ರಗಳಾಗಿವೆ. ಒಂದು ದಿನವೂ ತರಗತಿಗೆ ಬರದೇ ಬಿ.ಇಡಿ ಪದವಿ ಪಡೆದು ಶಾಲೆಗಳಿಗೆ ಶಿಕ್ಷಕರಾಗಿ ಹೋಗುವ ಈ ಪ್ರಕ್ರಿಯೆ ಎಂಥ ಅನಾಹುತಕಾರಿಯಾದದ್ದು ಎಂಬುದು ಆಡಳಿತ ವರ್ಗದವರಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಸರ್ಕಾರಕ್ಕೆ ತಿಳಿದಿರದಿದ್ದರೆ ಅದು ಮೂರ್ಖತನ, ತಿಳಿದೂ ಮಾಡುತ್ತಿದ್ದರೆ ಅದೊಂದು ಕ್ರಿಮಿನಲ್ ಅಪರಾಧ.

ಸರ್ವರಿಗೂ ಶಿಕ್ಷಣ ದೊರಕಲಿ ಎಂದು ಭಾರತ ಸರ್ಕಾರ 80 ಹಾಗೂ 90ರ ದಶಕಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳನ್ನು ವಿಸ್ತರಿಸುತ್ತಾ ಬಂದಿತು. ಆಗ, ಅಗತ್ಯವಾಗಿದ್ದ ಶಿಕ್ಷಕರನ್ನು ಸಜ್ಜುಗೊಳಿಸಲು ಸಂಸತ್ತಿನ ವಿಶೇಷ ಕಾಯ್ದೆಯ ಮೂಲಕ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯನ್ನು (ಎನ್‌.ಸಿ.ಟಿ.ಇ) 1993ರಲ್ಲಿ ಸ್ಥಾಪಿಸಿತು. ಇಡೀ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಾದ ಡಿ.ಇಡಿ, ಬಿ.ಇಡಿ, ಎಂ.ಇಡಿ ಹಾಗೂ ಸಂಶೋಧನೆಗಳನ್ನು ಸಂಪೂರ್ಣವಾಗಿ ಆರಂಭಿಸುವ, ನಿರ್ವಹಿಸುವ ಹಾಗೂ ಅವುಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆ ಸಂಸ್ಥೆಗೆ ನೀಡಲಾಯಿತು. ಶಿಕ್ಷಕರ ತರಬೇತಿಯನ್ನು ವ್ಯವಸ್ಥಿತಗೊಳಿಸಿ, ಬಲಪಡಿಸಿ ಅತ್ಯುತ್ತಮ ಶಿಕ್ಷಕರನ್ನು ವ್ಯವಸ್ಥೆಗೆ ನೀಡುವುದು ಅದರ ಜವಾಬ್ದಾರಿ.

1960ರಿಂದ 2000ದ ವರೆಗೆ ಶಿಕ್ಷಕರ ತರಬೇತಿ ಕೇಂದ್ರಗಳ ಸಂಖ್ಯೆ ನಿಧಾನವಾಗಿ 1,200ರಿಂದ 1,600ರವರೆಗೆ ಏರಿತು. ಎನ್‌.ಸಿ.ಟಿ.ಇ  ಸ್ಥಾಪನೆಯಾದ ಮೇಲೆ ಅವುಗಳ ಸಂಖ್ಯೆ ಇದ್ದಕ್ಕಿದ್ದ ಹಾಗೆ 2011ರಲ್ಲಿ 16 ಸಾವಿರಕ್ಕೆ ಏರಿತು (ಅವುಗಳಲ್ಲಿ ಶೇ 92ರಷ್ಟು ಖಾಸಗಿ ಸಂಸ್ಥೆಗಳು). ಇವು ಕೇವಲ ಸಂಖ್ಯೆಯಲ್ಲಿ ಬೆಳೆದವೇ ವಿನಾ ಗುಣಮಟ್ಟದಲ್ಲಲ್ಲ. ಎನ್‌.ಸಿ.ಟಿ.ಇ.ಯಂಥ ಸಂಪೂರ್ಣ ಅದಕ್ಷವಾದ, ಅತ್ಯಂತ ದುರ್ಬಲ ವ್ಯವಸ್ಥೆ ಪ್ರಪಂಚದ ಯಾವುದೇ ಶಿಕ್ಷಣ ಕ್ಷೇತ್ರದಲ್ಲಿಲ್ಲ. ಕಾಲೇಜುಗಳಿಗೆ ಅನುಮತಿ ನೀಡುವಾಗ ಭ್ರಷ್ಟಾಚಾರ, ಇರುವ ಕಾಲೇಜುಗಳ ಗುಣಮಟ್ಟ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಯಾರೇ ಆದರೂ ತಲೆತಗ್ಗಿಸುವಂತಿದೆ. ಭ್ರಷ್ಟಾಚಾರಕ್ಕೆ ಪುರಾವೆ ದೊರಕುವುದು ಕಷ್ಟ. ಆದರೆ ಕನಿಷ್ಠ ಶೇ 75ರಿಂದ ಶೇ 80ರಷ್ಟು ಶಿಕ್ಷಕರ ತರಬೇತಿ ಕೇಂದ್ರಗಳು ಸಂಪೂರ್ಣವಾಗಿ ಹದಗೆಟ್ಟಿವೆ ಮತ್ತು ಭ್ರಷ್ಟವಾಗಿವೆ. ಉಳಿದ ಶೇ 20-25ರಷ್ಟು ಕೇಂದ್ರಗಳ ಗುಣಮಟ್ಟದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಅಲ್ಲೊಂದು ಇಲ್ಲೊಂದು ಶಿಕ್ಷಕರ ಉತ್ತಮ ತರಬೇತಿ ಕೇಂದ್ರಗಳಿವೆ. ಆದರೆ ದುರ್ದೈವದಿಂದ ಅವು ಕೆಲವೇ ಅಪವಾದಗಳಾಗಿ ಉಳಿದಿವೆ.

2008ರಲ್ಲಿ ಎನ್‌.ಸಿ.ಟಿ.ಇ ಮಹಾರಾಷ್ಟ್ರದಲ್ಲಿ 291 ಡಿ.ಇಡಿ ಕಾಲೇಜುಗಳಿಗೆ ಅನುಮತಿ ನೀಡಿತು. ಮಹಾರಾಷ್ಟ್ರ ಸರ್ಕಾರಕ್ಕೇ ಇದು ಬೇಕಾಗಿರಲಿಲ್ಲ. ವಿಷಯ ನ್ಯಾಯಾಲಯಕ್ಕೆ ಹೋಯಿತು. ದೇಶದ ಶಿಕ್ಷಕರ ತರಬೇತಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಲು ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರ ಅಧ್ಯಕ್ಷತೆಯಲ್ಲಿ ಸುಪ್ರೀಂ ಕೋರ್ಟ್‌ 2011ರಲ್ಲಿ ಒಂದು ಪ್ರಬಲವಾದ ಸಮಿತಿಯನ್ನು ನೇಮಿಸಿತು. ಈ ಸಮಿತಿಯ ಸಲಹೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತು. ಕೊಳೆತು ನಾರುತ್ತಿರುವ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿ ಶಿಕ್ಷಕರ ತರಬೇತಿಗೆ ಬೇಕಾದ ಬಿಗಿಯನ್ನು, ನಿಷ್ಠೆಯನ್ನು ತರಲು ಅಗತ್ಯವಾದ ಸಲಹೆಗಳನ್ನು ಸಮಿತಿ ನೀಡಿತು. ಅದರ ಫಲಶ್ರುತಿಯಾಗಿ ಈಗ ನಾಲ್ಕು ವರ್ಷಗಳ ಶಿಕ್ಷಕರ ವೃತ್ತಿ ತರಬೇತಿ ಜಾರಿಗೆ ಬರುತ್ತಿದೆ.

ನಾವು ಸಾಮಾನ್ಯವಾಗಿ ಪ್ರತಿಯೊಂದಕ್ಕೂ ಸರ್ಕಾರವನ್ನು ನಿಂದಿಸುತ್ತೇವೆ. ಆದರೆ ಶೇ 92ರಷ್ಟು ಶಿಕ್ಷಕರ ತರಬೇತಿ ಕೇಂದ್ರಗಳು ಖಾಸಗಿಯವರ ಕೈಯಲ್ಲಿವೆ. ಅವು ಪೂರ್ತಿ ಭ್ರಷ್ಟವಾಗಿವೆ. ಈಗ ಈ ದುರಾಸೆಗೆ, ಅನ್ಯಾಯಕ್ಕೆ ಯಾರನ್ನು ದೂಷಿಸುವುದು? ಈ ಭ್ರಷ್ಟ ವ್ಯವಸ್ಥೆಯಲ್ಲಿ ಎಲ್ಲರೂ ಶಾಮೀಲಾದಂತೆ ತೋರುತ್ತದೆ. ಕಾಲೇಜು ಶಿಕ್ಷಕರು, ಆಡಳಿತ ಮಂಡಳಿ, ವಿಶ್ವವಿದ್ಯಾಲಯಗಳು, ಸರ್ಕಾರ ಹಾಗೂ ಎನ್‌.ಸಿ.ಟಿ.ಇ.ಯ ಎಲ್ಲರೂ ಈ ಶಿಕ್ಷಣ ಹನನದಲ್ಲಿ ಸಹಭಾಗಿಗಳಾಗಿ ಮೌನವಾಗಿದ್ದಾರೆ.

ಎರಡು ವರ್ಷ ನಿಜವಾದ ಶ್ರಮದಿಂದ, ನಿಷ್ಠೆಯಿಂದ ಕಲಿತರೂ ಒಳ್ಳೆಯ ಶಿಕ್ಷಕರಾಗಲು ಸಾಕಷ್ಟು ಸಮಯ ಬೇಕು. ಹಾಗಿರುವಾಗ ಕಾಲೇಜಿಗೇ ಹೋಗದೆ, ದುಡ್ಡು ಕೊಟ್ಟು ಡಿಗ್ರಿ ಖರೀದಿ ಮಾಡಿ ಒಳ್ಳೆಯ ಶಿಕ್ಷಕರಾಗುವುದು ಹೇಗೆ? ಇಂತಹವರ ಬಗೆಗಿಂತ ಹೆಚ್ಚಾಗಿ, ಅವರನ್ನು ನಂಬಿ ತರಗತಿಗೆ ಹೋಗುವ ತಲೆಮಾರುಗಳ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಿದರೆ ಭಯವಾಗುತ್ತದೆ.

ಶಿಕ್ಷಣದ ಗುಣಮಟ್ಟವು ಮುಖ್ಯವಾಗಿ ಶಿಕ್ಷಕರ ಗುಣಮಟ್ಟದ ಮೇಲೇ ನಿಂತಿದೆ. ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತಬೇಕೆಂದು ಮಾತನಾಡುವವರು ಮೊದಲಿಗೆ ಶಿಕ್ಷಕರ ತರಬೇತಿಯ ಮಟ್ಟದ ಬಗ್ಗೆ ಚಿಂತಿಸಬೇಕು. ಒಳ್ಳೆಯ ಬೀಜ ಒಳ್ಳೆಯ ಮರವನ್ನು, ಹಣ್ಣುಗಳನ್ನು ನೀಡುತ್ತದೆ. ಹುಳ ಹಿಡಿದ ಬೀಜದಿಂದ ಏನು ಸಾಧ್ಯ? ಒಳ್ಳೆಯ ಶಿಕ್ಷಕ ಒಳ್ಳೆಯ ಬೀಜವಿದ್ದಂತೆ. ಮುಂದಿನ ತಲೆಮಾರುಗಳು ಸುರಕ್ಷಿತವಾಗಿರಲು ಆದರ್ಶ, ನುರಿತ ಶಿಕ್ಷಕರೇ ತಳಹದಿ. ನನಗೊಬ್ಬರು ಕೇಳಿದರು, ‘ಹೌದು ಸ್ವಾಮಿ, ವ್ಯವಸ್ಥೆ ಕೆಟ್ಟು ಹೋಗಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ನಾನು ಕೇಳಿದೆ, ‘ಬೆಕ್ಕು ಎಲ್ಲಿದೆ?’

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು