ಬುಧವಾರ, ಜೂನ್ 16, 2021
22 °C
ಕೋವಿಡ್‌–19ರ ಎರಡನೇ ಅಲೆಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿದೆಯೇ?

ಕೋವಿಡ್ | ಸಹಕಾರ ನೀಡದಿದ್ದರೆ ಹೋಗಲಿ, ಅಪನಂಬಿಕೆ ಹುಟ್ಟುಹಾಕಿದ್ದೇಕೆ?: ಜೋಶಿ

ಪ್ರಲ್ಹಾದ ಜೋಶಿ Updated:

ಅಕ್ಷರ ಗಾತ್ರ : | |

ಕೋವಿಡ್‌–19 ವಿರುದ್ಧ ವಿಶ್ವವೇ ಯುದ್ಧ ಸಾರಿದೆ. ಭಾರತವೂ ಅದರಲ್ಲಿ ಮುಂಚೂಣಿಯಲ್ಲಿದೆ. ಪ್ರತಿಪಕ್ಷಗಳು ಟೀಕಿಸುವುದು ತಪ್ಪಲ್ಲ. ಆದರೆ, ಸಮಯ, ಸಂದರ್ಭ ಬಹಳ ಮುಖ್ಯ. ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಬೇಕಾದಾಗಲೂ ಅಪನಂಬಿಕೆ ಹುಟ್ಟುಹಾಕುವ ಕೆಲಸವನ್ನೇ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ಸಂದರ್ಭ ಇದಲ್ಲ. ಇಂತಹ ಸಂದರ್ಭವನ್ನು ನಾವು ಮತ್ತು ನೀವು (ಪ್ರತಿಪಕ್ಷದವರು) ಸೇರಿಯೇ ಎದುರಿಸಬೇಕು.

ಕೇಂದ್ರ ಸರ್ಕಾರವು ಕೋವಿಡ್–19 ಮೊದಲನೇ ಅಲೆ ಎದುರಿಸಲು ಆರಂಭಿಸಿದ ಸಿದ್ಧತೆಯನ್ನು ನಿಲ್ಲಿಸಿಯೇ ಇಲ್ಲ. ಎರಡನೇ ಅಲೆ ಎದುರಿಸಲು ಆಗಿನಿಂದಲೇ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಆದರೆ, ಕೆಲವು ರಾಜ್ಯಗಳ ನಿರ್ಲಕ್ಷ್ಯದಿಂದಾಗಿ ಸಂಕಷ್ಟ ಎದುರಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರಾಷ್ಟ್ರಗಳು ಮೊದಲನೇ ಅಲೆ ಎದುರಿಸುವಲ್ಲಿ ವಿಫಲವಾದಾಗ ಭಾರತವು ಯಶಸ್ವಿಯಾಗಿ ಎದುರಿಸಿತ್ತು.

ಎರಡನೇ ಅಲೆ ಕುರಿತು ತಜ್ಞರು ನೀಡಿದ್ದ ವರದಿ ನಿರ್ಲಕ್ಷಿಸಲಾಯಿತು ಎಂದು ಟೀಕಿಸಲಾಗುತ್ತಿದೆ. ವರದಿ ಪ್ರಕಾರ ಕೇಂದ್ರವು ಫೆಬ್ರುವರಿಯಲ್ಲಿಯೇ ವಿವಿಧ ರಾಜ್ಯಗಳಿಗೆ ಕೋವಿಡ್‌ ಹರಡುವಿಕೆ ತಡೆಯುವಿಕೆಯ ಅಧ್ಯಯನಕ್ಕೆ 75 ತಂಡಗಳನ್ನು ಕಳುಹಿಸಿತ್ತು. ಪ್ರಕರಣಗಳು ಜಾಸ್ತಿಯಾಗಲಾರಂಭಿಸಿದಾಗಲೇ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಕೋವಿಡ್ ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಭೆ ಮಾಡಿದ್ದರು. ಆಗಲೇ ದೇಶದ 70 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿತ್ತು. ದೇಶದ ಎಲ್ಲ ಕಡೆಯೂ ಸೋಂಕು ಹರಡುವಿಕೆ ಹೆಚ್ಚಬಹುದು, ಅತಿಯಾದ ಆತ್ಮವಿಶ್ವಾಸ ಬೇಡ ಎಂದು ಎಚ್ಚರಿಸಲಾಗಿತ್ತು. ವರದಿಯಲ್ಲಿಯೂ ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಹರಡುತ್ತದೆ ಎಂದಿರಲಿಲ್ಲ. ಪ್ರಕರಣಗಳು ಹೆಚ್ಚಾಗಿದ್ದರಿಂದ ವೈದ್ಯಕೀಯ ಸೌಲಭ್ಯದ ಕೊರತೆ ಎದುರಾಗಿದೆ.

ದೇಶದಲ್ಲಿ 5,700 ಟನ್‌ ಇದ್ದ ಆಮ್ಲಜನಕ ಉತ್ಪಾದನೆ ಈಗ 10 ಸಾವಿರ ಟನ್‌ಗೆ ಹೆಚ್ಚಾಗಿದೆ. ಹೊಸದಾಗಿ 1,280 ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಿವೆ. 2014ರವರೆಗೂ 381 ಇದ್ದ ಮೆಡಿಕಲ್‌ ಕಾಲೇಜುಗಳ ಸಂಖ್ಯೆಯನ್ನು 562ಕ್ಕೆ (ಶೇ 48) ಹೆಚ್ಚಿಸಲಾಗಿದೆ. ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 54 ಸಾವಿರದಿಂದ 84,649ಕ್ಕೆ (ಶೇ 56), ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ 30,991 ರಿಂದ 54,275ಕ್ಕೆ (ಶೇ 80) ಹೆಚ್ಚಾಗಿವೆ. 157 ಕಾಲೇಜುಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಜೋಡಿಸಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಜನಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಲ್ಲ. ಆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವೇಗ ನೀಡಿದೆ. ಇದಕ್ಕೆ ಮೇಲಿನ ಅಂಕಿ–ಅಂಶಗಳೇ ಉದಾಹರಣೆಯಾಗಿವೆ.

ದೇಶದಲ್ಲಿ ಮೊದಲು ಒಂದೇ ಒಂದು ತಪಾಸಣಾ ಪ್ರಯೋಗಾಲಯವಿತ್ತು. ಈಗ ಅವುಗಳ ಸಂಖ್ಯೆ 2,600ಕ್ಕೆ ಹೆಚ್ಚಿಸಲಾಗಿದೆ. ಪಿಎಂ ಕೇರ್ಸ್‌ ಫಂಡ್‌ನಿಂದ 1 ಲಕ್ಷ ಕಾನ್ಸನ್‌ಟ್ರೇಟರ್‌ಗಳನ್ನು ಖರೀದಿಸಿ ರಾಜ್ಯಗಳಿಗೆ ನೀಡಲಾಗಿದೆ. ದೇಶದಲ್ಲಿ ಒಂದೇ ಒಂದು ಏಮ್ಸ್ ಆಸ್ಪತ್ರೆಯಿತ್ತು. ಈಗ ಅವುಗಳ ಸಂಖ್ಯೆಯನ್ನು 24ಕ್ಕೆ ಏರಿದೆ. ಪ್ರಧಾನಿ ಮೋದಿ ಅವರು 14 ಏಮ್ಸ್ ಆಸ್ಪತ್ರೆಗಳನ್ನು ಆರಂಭಿಸಿದ್ದಾರೆ. ಕೇಂದ್ರವು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರೂ, ಹಲವು ರಾಜ್ಯಗಳಲ್ಲಿ ಅವು ಕಾರ್ಯಾರಂಭ ಮಾಡಿಲ್ಲ. ಬಜೆಟ್‌ನಲ್ಲಿ ₹3.60 ಲಕ್ಷ ಕೋಟಿ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿದೆ. ಆಮ್ಲಜನಕವನ್ನು ವಿಮಾನ, ಹಡಗುಗಳ ಮೂಲಕ ತರಿಸಿಕೊಳ್ಳಲಾಗಿದೆ. ರೈಲುಗಳ ಮೂಲಕ ಸಾಗಿಸಲಾಗಿದೆ.

ಇಷ್ಟೆಲ್ಲ ಪ್ರಯತ್ನಗಳ ನಂತರವೂ ಕೋವಿಡ್‌ನಿಂದ ಸಾವು ಸಂಭವಿಸುತ್ತಿವೆ. ಸಾವಿನ ಬಗೆಗೆ ಅನುಕಂಪವಿದೆ. ಸರ್ವೋಚ್ಚ ಪ್ರಯತ್ನಗಳಿವು ಎಂದು ಹೇಳುವುದಿಲ್ಲ. ನಿರೀಕ್ಷೆಗೂ ಮೀರಿ ಪ್ರಕರಣಗಳು ಹೆಚ್ಚಾಗಿದ್ದರಿಂದ ಹಲವಾರು ಸಮಸ್ಯೆಗಳು ಎದುರಾಗಿವೆ. ಆಮ್ಲಜನಕ ಬಳಕೆಯಲ್ಲಿ ದಿಢೀರ್‌ ಹೆಚ್ಚಾಗಿದೆ. ರಿಲಯನ್ಸ್ ಸೇರಿದಂತೆ ಹಲವಾರು ಕಂಪನಿಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು 24 ಗಂಟೆಯಲ್ಲಿ ಮಂಜೂರು ಮಾಡಲಾಗಿದೆ. ಲಸಿಕೆಗಳ ಉತ್ಪಾದನೆ ಹೆಚ್ಚಿಸಲು ಕಂಪನಿಗಳಿಗೆ ಸರ್ಕಾರವೇ ಅನುದಾನ ನೀಡಿದೆ. ಯುದ್ಧೋಪಾದಿಯಲ್ಲಿ ಕೆಲಸಗಳು ನಡೆದಿವೆ. ಇದರಿಂದಾಗಿಯೇ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಅಮೆರಿಕದಲ್ಲಿ 5.25 ಲಕ್ಷ ಜನರು ಮೃತಪಟ್ಟಿದ್ದರೆ, ಭಾರತದಲ್ಲಿ 2.62 ಲಕ್ಷ ಜನರು ಮೃತಪಟ್ಟಿದ್ದಾರೆ.

ಹಲವು ರಾಜ್ಯಗಳಿಗೆ ವೆಂಟಿಲೇಟರ್ ನೀಡಲಾಗಿತ್ತು. ಆಮ್ಲಜನಕ ಘಟಕಗಳನ್ನು ಮಂಜೂರು ಮಾಡಲಾಗಿತ್ತು. ವೆಂಟಿಲೇಟರ್‌ಗಳು ಹಾಗೆಯೇ ಬಿದ್ದಿವೆ. ಘಟಕಗಳ ನಿರ್ಮಾಣ ಆರಂಭವಾಗಿಲ್ಲ. ಜನರ ಆರೋಗ್ಯ ರಕ್ಷಣೆ ರಾಜ್ಯಗಳಿಗೆ ಸೇರಿದ ವಿಷಯವಾದರೂ, ಕೇಂದ್ರ ಸುಮ್ಮನೆ ಕುಳಿತಿಲ್ಲ. ಆಮ್ಲಜನಕ ಉತ್ಪಾದನೆ, ರೆಮ್‌ಡಿಸಿವಿರ್‌ ಲಭ್ಯತೆ, ಲಸಿಕೆಗಳ ಉತ್ಪಾದನೆ, ಸಂಶೋಧನೆಗೆ ಒತ್ತು ನೀಡುವ ಕೆಲಸವನ್ನು ಮಾಡಿದೆ. ಕೆಲವು ರಾಜ್ಯಗಳು ಕೇಂದ್ರ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಅದು ‘ಮೋದಿ ಲಸಿಕೆ’, ‘ಬಿಜೆಪಿ ಲಸಿಕೆ’ ಎಂದು ಟೀಕಿಸಿದರು. ಲಸಿಕೆಯ ಕಾರ್ಯಕ್ಷಮತೆ ಪ್ರಶ್ನಿಸಿದರು. ರಾಜಸ್ಥಾನ ಸರ್ಕಾರವು, ಕೋವ್ಯಾಕ್ಸಿನ್‌ ಲಸಿಕೆ ನೀಡುವುದಿಲ್ಲ ಎಂದು ಘೋಷಿಸಿತು. ಜನರಲ್ಲಿ ಲಸಿಕೆ ಬಗೆಗೆ ಅಪನಂಬಿಕೆ ಹುಟ್ಟುಹಾಕಲಾಯಿತು. ಈಗ ಜನರಿಗೆ ಲಸಿಕೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜನರಿಗೆ ಲಸಿಕೆಯೇ ಸಿಗುತ್ತಿಲ್ಲ ಎಂದು ಟೀಕಿಸಲಾಗುತ್ತಿದೆ. ಲಸಿಕೆಯ ಬಗೆಗೆ ಜನರ ಮನದಲ್ಲಿ ಗೊಂದಲ ಹುಟ್ಟುಹಾಕಿದ್ದು ಯಾರು?

ದೇಶದಲ್ಲಿ ಈಗಾಗಲೇ 18 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ವಿಶ್ವದ ಸಾಂಕ್ರಾಮಿಕ ರೋಗಗಳ ಪೈಕಿ ಶೇ 80ರಷ್ಟಕ್ಕೆ ಭಾರತವೇ ಲಸಿಕೆ ಕಂಡು ಹಿಡಿದಿದೆ. ಎಲ್ಲ ಹಂತಗಳ ಪರೀಕ್ಷೆ ನಂತರವೇ ಅನುಮತಿಸಿದ್ದರೂ, ಪ್ರತಿಪಕ್ಷಗಳ ಟೀಕೆಯ ಪರಿಣಾಮ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಹಾಗಾಗಿ, ಕಂಪನಿಗಳೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಆಸಕ್ತಿ ತೋರಿಸಲಿಲ್ಲ. ಲಸಿಕೆಯನ್ನು ಕೇಂದ್ರವೇ ಏಕೆ ನೀಡಬೇಕು? ಮಾರಾಟ ಮುಕ್ತಗೊಳಿಸಬೇಕು ಎಂದು  ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೇ ಆಗ್ರಹಿಸಿದ್ದರು. ಕೇಂದ್ರ ಶೇ 50ರಷ್ಟು ಖರೀದಿಸುತ್ತಿದ್ದು, ಉಳಿದದ್ದನ್ನು ಮುಕ್ತಗೊಳಿಸಿದೆ. ಈಗ ಅದನ್ನೂ ಟೀಕಿಸಲಾಗುತ್ತಿದೆ. 

ಕೋವಿಡ್‌–19 ವಿರುದ್ಧ ವಿಶ್ವವೇ ಯುದ್ಧ ಸಾರಿದೆ. ಭಾರತವೂ ಅದರಲ್ಲಿ ಮುಂಚೂಣಿಯಲ್ಲಿದೆ. ಪ್ರತಿಪಕ್ಷಗಳು ಟೀಕಿಸುವುದು ತಪ್ಪಲ್ಲ. ಆದರೆ, ಸಮಯ, ಸಂದರ್ಭ ಬಹಳ ಮುಖ್ಯ. ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಬೇಕಾದಾಗಲೂ ಅಪನಂಬಿಕೆ ಹುಟ್ಟುಹಾಕುವ ಕೆಲಸವನ್ನೇ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ಸಂದರ್ಭ ಇದಲ್ಲ. ಇಂತಹ ಸಂದರ್ಭವನ್ನು ನಾವು ಮತ್ತು ನೀವು (ಪ್ರತಿಪಕ್ಷದವರು) ಸೇರಿಯೇ ಎದುರಿಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸಕಾರಾತ್ಮಕ ಸಲಹೆಗಳನ್ನು ನೀಡಲಿ. ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ. ಒಬ್ಬೊಬ್ಬರ ಜೀವ ಉಳಿಸುವುದು ಮುಖ್ಯವಾಗಿದೆ. ಸರ್ಕಾರದ ತಪ್ಪುಗಳಿದ್ದರೆ ನಂತರದಲ್ಲಿ ಲೋಕಸಭೆಯಲ್ಲಿ ಚರ್ಚೆ ಮಾಡಲಿ.

ಲೇಖಕರು: ಪ್ರಲ್ಹಾದ ಜೋಶಿ, ಸಂಸದೀಯ ವ್ಯವಹಾರ, ಕಲ್ಲಿದ್ದಲ್ಲು ಮತ್ತು ಗಣಿ ಸಚಿವ

ನಿರೂಪಣೆ: ಬಸವರಾಜ ಹವಾಲ್ದಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು