ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ವಿವಾದ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಬಗ್ಗೆ ಚರ್ಚೆ ಆಗಬೇಕೆಂದು ಬಿಜೆಪಿಯ  ಪ್ರಧಾನಮಂತ್ರಿ  ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದು ವಿವಿಧ ರಾಜಕೀಯ ಪಕ್ಷಗಳ ನಡುವೆ ಸಮ್ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ.

ಇದು ಸಹಜ ವಾದದ್ದೆ. 1947ರಲ್ಲಿ ಭಾರತಕ್ಕೆ ಕಾಶ್ಮೀರ ಸೇರ್ಪಡೆಯಾಗುವಾಗ 370ನೇ ವಿಧಿ ರೂಪಿಸುವುದು ಅಗತ್ಯವಾಗಿತ್ತು. ಆದರೆ ಈ 370ನೇ ವಿಧಿಯಿಂದ ಆಯ್ದ ರಾಜಕೀಯ ಕುಟುಂಬಗಳಿಗಷ್ಟೇ ಲಾಭವಾಗಿದೆ ಎಂಬುದು ಮೋದಿ ಟೀಕೆ.

ಮಹಿಳೆಯರ ವಿರುದ್ಧ ತಾರತಮ್ಯ ಧೋರಣೆಯೂ ಇದರಲ್ಲಿದೆ  ಎಂದು ಮೋದಿಯವರು ಹೇಳಿರುವ ಮಾತುಗಳಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಮೋದಿಯವರ ಸಾಂವಿಧಾನಿಕ ಇತಿಹಾಸದ ಜ್ಞಾನವನ್ನು ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಪ್ರಶ್ನಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣ ಸೇರಿದಂತೆ 370ನೇ ವಿಧಿ ರದ್ದು ಬಿಜೆಪಿ ರಾಜಕೀಯ ಕಾರ್ಯಸೂಚಿಯ ಮುಖ್ಯ ವಿಚಾರಗಳೇ ಆಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಈ ಎಲ್ಲಾ ವಿಚಾರಗಳನ್ನು ರಾಜಕೀಯ ಅನಿವಾರ್ಯತೆಯಿಂದ ಹಿನ್ನೆಲೆಗೆ ಸರಿಸಲಾಗಿ­ದ್ದರೂ ಈ ವಿಚಾರಗಳನ್ನು ಬಿಜೆಪಿ ಪೂರ್ಣ ಪರಿತ್ಯಾಗ ಮಾಡಿಲ್ಲ.  ಈಗ, 370ನೇ ವಿಧಿ ರದ್ದುಪಡಿಸಬೇಕೆಂಬ ಆಗ್ರಹದ ಬದಲಿಗೆ, 370ನೇ ವಿಧಿ ಕುರಿತಂತೆ ಚರ್ಚೆಗೆ ಕರೆ ನೀಡುತ್ತಿರುವುದು ಒಂದು ರೀತಿಯ ರಾಜಿ ಸೂತ್ರವಾಗಿದೆ.   

370ನೇ ವಿಧಿ  ಕುರಿತ ಚರ್ಚೆ ಯಾವಾಗಲೂ ವಿವಾದಗಳ ಕಿಡಿ ಹೊತ್ತಿಸು­ವಂತಹದ್ದು. ಹಾಗೆಯೇ 370ನೇ ವಿಧಿಯನ್ನು ಹಲವು ರೀತಿಗಳಲ್ಲಿ ವಿರೂಪ­ಗೊಳಿಸಿ ದುರ್ಬಲಗೊಳಿಸಿರುವುದೂ ನಿಜ.  ಇನ್ನು ಮೋದಿಯವರಂತೂ ತಮ್ಮ ಅತಿರೇಕದ ನಿಲುವುಗಳಿಂದ ವಿವಾದಗಳಿಗೆ ಹೆಸರಾಗಿರುವವರು.  ಈಗ ಇಂತಹ ವಿವಾದಗಳಾಚೆಗೆ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಕಾಣಿಸುತ್ತದೆ.

ಅಭಿವೃದ್ಧಿ ಕಾರ್ಯಸೂಚಿಯ ನಾಯಕ ತಾವು ಎಂದು ಬಿಂಬಿಸಿ­ಕೊಳ್ಳಲು ಯತ್ನಿಸುತ್ತಿರುವಂತಹ ಪ್ರಯತ್ನವನ್ನು ಇಲ್ಲಿ ಕಾಣ­ಬಹುದು. 370ನೇ ವಿಧಿ ನಿಜಕ್ಕೂ ಕಾಶ್ಮೀರ ಹಾಗೂ ಅಲ್ಲಿನ ಜನರ ಅಭಿವೃದ್ಧಿಗೆ ನೆರವಾಗಿದೆಯೇ ಇಲ್ಲವೆ ಎಂಬುದರ ಚರ್ಚೆಯಾಗಲಿ ಎಂಬುದು ಮೋದಿ ವಾದ. 

ಈ ಚರ್ಚೆಯ ಪ್ರಸ್ತಾವ ಯಾರಿಂದಲಾದರೂ ಬಂದಿರಲಿ   ಚರ್ಚೆಯಿಂದ ಹಿಂದೆ ಸರಿಯುವ ಅವಶ್ಯಕತೆಯೇನೂ ಇಲ್ಲ.   ಮೋದಿಯವರ ಉದ್ದೇಶ ಏನೇ ಇದ್ದರೂ ಅವರು ಚರ್ಚೆಯ ದಿಕ್ಕನ್ನು ನಿರ್ದೇಶಿಸುವುದು ಸಾಧ್ಯವಿಲ್ಲ.

ಜಮ್ಮು ಮತ್ತು ಕಾಶ್ಮೀರ ಸುದೀರ್ಘ ಕಾಲ ಉಗ್ರರ ಹಾವಳಿಯಿಂದ ನರಳಿರುವ ಸೂಕ್ಷ್ಮ ರಾಜ್ಯ. ಕಾಶ್ಮೀರದಲ್ಲಿ ಸಹಜ ಜೀವನ  ಮರು ಸ್ಥಾಪಿಸಿ ಜನಸಾಮಾನ್ಯರಿಗೆ ಘನತೆಯ ಬದುಕು ಸಾಧ್ಯವಾಗುವಂತೆ ಮಾಡುವುದು ರಾಜ್ಯ ಹಾಗೂ ಕೇಂದ್ರ ನಾಯಕರ ಮುಂದಿರುವ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT