ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ಬ್ರ್ಯಾಂಡ್‌ ಬೆಂಗಳೂರು’ ಘೋಷಣೆ: ಉತ್ಸಾಹ ಅನುಷ್ಠಾನದಲ್ಲೂ ಇರಲಿ

Published 2 ಮಾರ್ಚ್ 2024, 0:30 IST
Last Updated 2 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೊದಲ ಬಜೆಟ್‌ ಮಂಡನೆಯಾಗಿದೆ. ಕಾಂಗ್ರೆಸ್‌ ಚುಕ್ಕಾಣಿ ಹಿಡಿದ ನಂತರ ‘ಬ್ರ್ಯಾಂಡ್‌ ಬೆಂಗಳೂರು’ ಹೆಸರಿನ ಕಾರ್ಯಕ್ರಮಗಳು ಹೆಚ್ಚು ಸದ್ದು ಮಾಡುತ್ತಿವೆ. ಬಿಬಿಎಂಪಿಯ 2024–25ನೇ ಸಾಲಿನ ಬಜೆಟ್‌ ಅದರ ಮುಂದುವರಿದ ಭಾಗದಂತಿದೆ. ‘ಬ್ರ್ಯಾಂಡ್‌ ಬೆಂಗಳೂರು’ ಶೀರ್ಷಿಕೆಯಡಿ, ‘ವೈಬ್ರಂಟ್‌’ ಬೆಂಗಳೂರು, ಟೆಕ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ನೀರಿನ ಭದ್ರತೆ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಹಸಿರು ಬೆಂಗಳೂರು ಹೆಸರಿನ ಎಂಟು ವಿಭಾಗಗಳಡಿ ವಿವಿಧ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಆದರೆ, ಈ ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಪ್ರಮಾಣ ನಿರಾಶೆ ಮೂಡಿಸುತ್ತದೆ. ₹ 12,371 ಕೋಟಿ ಗಾತ್ರದ ಬಜೆಟ್‌ನಲ್ಲಿ ಬ್ರ್ಯಾಂಡ್‌ ಬೆಂಗಳೂರು ಕಾರ್ಯಕ್ರಮಗಳಿಗೆ ದಕ್ಕಿದ್ದು ಬರೀ ₹ 1,580 ಕೋಟಿ. ಸ್ಕೈ-ಡೆಕ್ ನಿರ್ಮಾಣದ ಅಂದಾಜು ವೆಚ್ಚ ₹ 350 ಕೋಟಿ. ಆದರೆ, ಅದಕ್ಕೆ ಈ ಸಾಲಿನಲ್ಲಿ ಒದಗಿಸಿರುವುದು ₹ 50 ಕೋಟಿ ಮಾತ್ರ. ಕಸ ವಿಲೇವಾರಿಯು ನಗರದ ಬಹುದೊಡ್ಡ ಸಮಸ್ಯೆ. ಬಜೆಟ್‌ನ ಗಣನೀಯ ಪ್ರಮಾಣದ ಮೊತ್ತ ಇದಕ್ಕೇ ವಿನಿಯೋಗವಾಗುತ್ತಿದೆ. ಕಸ ವಿಲೇವಾರಿ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವಂತೆ ತಜ್ಞರು ಹೇಳುತ್ತಲೇ ಇದ್ದಾರೆ. ಅದಕ್ಕೆ ವ್ಯತಿರಿಕ್ತವಾಗಿ, ಕಸ ಸಂಸ್ಕರಣೆಗೆ ನಗರದ ನಾಲ್ಕು ಕಡೆಗಳಲ್ಲಿ ಜಮೀನು ಖರೀದಿಸಲು ಬಿಬಿಎಂಪಿಯು ₹ 100 ಕೋಟಿ ತೆಗೆದಿರಿಸಿದೆ. ವಿಶಾಲ ಪ್ರದೇಶದಲ್ಲಿ ಕಸ ಸಂಸ್ಕರಣೆ ಮಾಡುವುದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರ ಬದಲು ಐದಾರು ವಾರ್ಡ್‌ಗಳಿಗೊಂದು ಪುಟ್ಟ ಕಸ ವಿಲೇವಾರಿ ಘಟಕವನ್ನು ಹೊಂದುವುದು ಜಾಣ್ಮೆಯ ನಡೆ. ಬೇಗೂರಿನ ರಮಣಶ್ರೀ ಬಡಾವಣೆಯಲ್ಲಿ 250 ಮನೆಗಳ ಹಸಿಕಸವನ್ನು ಅಲ್ಲೇ ಸಾವಯವಗೊಬ್ಬರವನ್ನಾಗಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಇಂತಹ ಪರಿಹಾರೋಪಾಯಗಳ ಅಗತ್ಯ ಹೆಚ್ಚು ಇದೆ. ನೇರ ನೇಮಕಾತಿಯಡಿ ಪೌರಕಾರ್ಮಿಕರ ನೇಮಕ ಹಾಗೂ ಅವರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡುವ ಪ್ರಸ್ತಾವಗಳು ಅವರ ಸೇವೆಯನ್ನು ಗುರುತಿಸಲು  ನೆರವಾಗಲಿವೆ. ಆದರೆ ಅರ್ಹರ ಆಯ್ಕೆಗೆ ನಿಖರ ಮಾನದಂಡಗಳನ್ನು ರೂಪಿಸಬೇಕು. ಮಹಿಳೆಯರಿಗಾಗಿ ನೂರು ಕಡೆ
‘ಶಿ ಟಾಯ್ಲೆಟ್‌’ಗಳನ್ನು ನಿರ್ಮಿಸಲು ಉದ್ದೇಶಿಸಿರುವುದುಸ್ವಾಗತಾರ್ಹ. ಆದರೆ, ಇದು ಕಾಲಮಿತಿಯಲ್ಲಿ
ಅನುಷ್ಠಾನಗೊಳ್ಳಬೇಕು.

ಕಂದಾಯ ವಿಭಾಗದಿಂದ ವಾರ್ಷಿಕ ₹ 6 ಸಾವಿರ ಕೋಟಿ ಸಂಗ್ರಹಿಸಲು ಉದ್ದೇಶಿಸಿರುವ ಬಿಬಿಎಂಪಿ, ಏಪ್ರಿಲ್‌ 1ರಿಂದ ಮಾರ್ಗಸೂಚಿ ದರದ ಆಧಾರದಲ್ಲಿ ಆಸ್ತಿ ತೆರಿಗೆ ಸಂಗ್ರಹ ನಿಯಮ ಜಾರಿಗೊಳಿಸುವುದಾಗಿ
ಹೇಳಿದೆ. ಇದಕ್ಕೆ ಪೂರ್ವಸಿದ್ಧತೆ ನಡೆದಿದೆಯೇ ಎಂಬುದು ಪ್ರಶ್ನೆ. ಡ್ರೋನ್ ಆಧಾರಿತ ನಗರ ಸರ್ವೆಯ ಮೂಲಕ ಸಂಗ್ರಹಿಸಲಾದ ಆಸ್ತಿಗಳ ಡಿಜಿಟಲ್‌ ನಕ್ಷೆಗಳನ್ನು ಹಾಗೂ ಇತರ ವಿವರಗಳನ್ನು ತೆರಿಗೆ ಸಂಗ್ರಹದ ಉದ್ದೇಶಕ್ಕೂ ಬಳಸಿಕೊಳ್ಳಲಾಗುತ್ತದೆ. ಆದರೆ, ಸದ್ಯಕ್ಕೆ ಬಿಬಿಎಂಪಿ ಬಳಿ 225 ವಾರ್ಡ್‌ಗಳ ಪೈಕಿ 163 ವಾರ್ಡ್‌ಗಳ ಡಿಜಿಟಲ್‌ ನಕ್ಷೆಗಳು ಮತ್ತು ಮಾಹಿತಿಗಳು ಮಾತ್ರ ಇವೆ. ಪ್ರೀಮಿಯಂ ಎಫ್‌ಎಆರ್‌ ಮೂಲಕ ₹ 1 ಸಾವಿರ ಕೋಟಿ ಸಂಗ್ರಹಿಸುವುದಾಗಿ ಬಿಬಿಎಂಪಿ ಹೇಳಿದೆ. ಇದಕ್ಕೆ ಮಾಹಿತಿ ತಂತ್ರಜ್ಞಾನ ಆಧಾರಿತ ವಿತರಣೆ, ಬಳಕೆ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು ಬಳಸಿದರೂ ಒಂದೇ ವರ್ಷದಲ್ಲಿ ಇಷ್ಟೊಂದು ಗುರಿ ಸಾಧನೆ ಸಾಧ್ಯವೇ ಎಂಬುದು ಪ್ರಶ್ನೆ. ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಹಾವಳಿ ತಕ್ಕಮಟ್ಟಿಗೆ ಹದ್ದುಬಸ್ತಿಗೆ ಬಂದಿತ್ತು. ಜಾಹೀರಾತಿನಿಂದ ವಾರ್ಷಿಕ ₹ 500 ಕೋಟಿ ವರಮಾನ ಗಳಿಸುವ ಗುರಿ ಹೊಂದಿರುವ ಬಿಬಿಎಂಪಿ, ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಜಾಹೀರಾತು ನೀತಿಯ ಮಾದರಿಯಲ್ಲಿ ಹೊಸ ಜಾಹೀರಾತು ನೀತಿ ರೂಪಿಸುವುದಾಗಿ ಹೇಳಿದೆ. ಇದು, ನಗರದ ಅಂದಗೆಡಿಸಲು ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ನಗರದಹೊರವಲಯಗಳಲ್ಲಿ ರಾಜಕಾಲುವೆಗಳ ಪಕ್ಕ ರಸ್ತೆ, ಸೈಕಲ್ ಪಥ ಹಾಗೂ ನಡಿಗೆ ಮಾರ್ಗ ನಿರ್ಮಿಸುವ ಪ್ರಸ್ತಾವ ಸ್ವಾಗತಾರ್ಹ. ಆದರೆ, ಈ ಉದ್ದೇಶಕ್ಕೆ ರಾಜಕಾಲುವೆಗಳ ಮೀಸಲು ಪ್ರದೇಶವನ್ನು ಟಿಡಿಆರ್‌ ನೀಡಿ ಸ್ವಾಧೀನ
ಪಡಿಸಿಕೊಳ್ಳುವುದು ಏಕೆ? ರಾಜಕಾಲುವೆಯ ಮೀಸಲು ಪ್ರದೇಶ ಪಾಲಿಕೆಯದೇ ಸ್ವತ್ತು. ಅದು
ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಟಿಡಿಆರ್‌ ಹೆಸರಿನಲ್ಲಿ ಅಕ್ರಮವೆಸಗಲು ಇದು ಕಳ್ಳದಾರಿ ಆಗಬಾರದು. ನಗರದಲ್ಲಿ 2 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವುದು ಜರೂರಾಗಿ ಆಗಬೇಕಾದ ಕೆಲಸ. ಕೆರೆಗಳ
ಪುನರುಜ್ಜೀವನದ ಜೊತೆ, ತೆರೆದ ಬಾವಿ, ಕೊಳವೆಬಾವಿ, ಕಲ್ಯಾಣಿಗಳ ಪುನರುಜ್ಜೀವನಕ್ಕೆ ಕ್ರಮವಹಿಸುವ ಉದ್ದೇಶವು ಉತ್ತಮ ನಡೆ. ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ಆಯುಕ್ತರ ಹುದ್ದೆ ಸೃಷ್ಟಿಸಲು ಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಮೂಲಸೌಕರ್ಯ ಬಲವರ್ಧನೆಗೂ ಬಿಬಿಎಂಪಿ ಕಾಳಜಿ ವಹಿಸಬೇಕು. ಪಾಲಿಕೆ ಸೇವೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ‘ಸೇವಾ ವೇದಿಕೆ’ಯನ್ನು ರೂಪಿಸುವುದಾಗಿ ಬಿಬಿಎಂಪಿ ಹೇಳಿದೆ. ಈ ಹಿಂದೆ ಜಾರಿಗೊಳಿಸಿದ್ದ ಸಹಾಯ ಆ್ಯಪ್‌ ಇದೇ ಉದ್ದೇಶವನ್ನು ಹೊಂದಿತ್ತು. ‘ಸೇವಾ ವೇದಿಕೆ’ಯು ಸಹಾಯ ಆ್ಯಪ್‌ನಂತೆ ವ್ಯರ್ಥ ಪ್ರಯತ್ನ ಆಗದಿರಲಿ. 2015ರ ಪರಿಷ್ಕೃತ ನಗರ ಮಹಾಯೋಜನೆಯಲ್ಲಿ ಉಲ್ಲೇಖಿಸಿರುವ ರಸ್ತೆಗಳ ಅಭಿವೃದ್ಧಿಗೆ
₹ 130 ಕೋಟಿ ಮೀಸಲಿಡಲಾಗಿದೆ. ಇಷ್ಟರಲ್ಲೇ ಮತ್ತೊಂದು ನಗರ ಮಹಾಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಿತ್ತು. ಅದರ ಬದಲು, ಹತ್ತು ವರ್ಷ ಹಿಂದಿನ ಯೋಜನೆಯ ರಸ್ತೆಗಳಿಗೆ ಈಗ ಅನುದಾನ ನೀಡುತ್ತಿರುವುದು ಆಡಳಿತ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT