ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾಂಸ್ಕೃತಿಕ ನಾಯಕನಾಗಿ ಬಸವೇಶ್ವರ; ಘೋಷಣೆಯ ಆಶಯ ಕೃತಿರೂಪಕ್ಕೂ ಬರಲಿ

Published 19 ಜನವರಿ 2024, 21:42 IST
Last Updated 19 ಜನವರಿ 2024, 21:42 IST
ಅಕ್ಷರ ಗಾತ್ರ

ಹನ್ನೆರಡನೇ ಶತಮಾನದ ಬಸವೇಶ್ವರರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿರುವುದು, ಭಾರತದ ಇತಿಹಾಸದಲ್ಲಿ ಅನ್ಯಾದೃಶವಾದ ವಚನ ಪರಂಪರೆಯ ಶ್ರೇಷ್ಠ ಪ್ರತಿನಿಧಿಗೆ ನೀಡಿರುವ ಅಪೂರ್ವ ಗೌರವ. ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ಚಿಂತಕರು ಮಾಡಿದ್ದ ಒತ್ತಾಯಗಳಿಗೆ ಸ್ಪಂದಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಜಾತಿಭೇದ ಹಾಗೂ ಲಿಂಗ
ಭೇದಗಳಿಲ್ಲದ ಸಮಾಜವನ್ನು ರೂ‍ಪಿಸುವ ಕೆಲಸ ಹನ್ನೆರಡನೇ ಶತಮಾನಕ್ಕೆ ಮಾತ್ರವಲ್ಲದೆ ಇಂದಿಗೂ ಪ್ರಸ್ತುತ.

ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳು ‘ಬಸವ ಪಥ’ದಲ್ಲೂ ಇದ್ದು, ಅವುಗಳ ಅನುಸರಣೆ ಇಂದಿನ ಬಹುತೇಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರವಾಗಿದೆ. ಕನ್ನಡದ ಮಣ್ಣಿಗೆ ಅಥವಾ ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿತ್ವ ಬಸವೇಶ್ವರರದಲ್ಲ. ಕನ್ನಡದ ಮಣ್ಣಿನಿಂದ ರೂಪುಗೊಂಡು ತನ್ನ ನಡೆ–ನುಡಿಯಿಂದ ವಿಶ್ವಕ್ಕೇ ಮಾದರಿಯಾದ ಚೇತನವನ್ನು ನಾಡಿನ ಸಾಂಸ್ಕೃತಿಕ ವ್ಯಕ್ತಿಯನ್ನಾಗಿ ಘೋಷಿಸಿರುವುದು ನಾಡಿನ ಸಾಕ್ಷಿಪ್ರಜ್ಞೆಯ ರೂಪಕವಾಗಿಸುವ ನಿಟ್ಟಿನಿಂದಲೂ ಮಹತ್ವದ ನಡೆಯಾಗಿದೆ. ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಸಮುದಾಯ ಓಲೈಕೆಯ ರೂಪದಲ್ಲಿಯೂ ಬಸವಣ್ಣನವರಿಗೆ ಸಂದಿರುವ ಗೌರವವನ್ನು ನೋಡಲಿಕ್ಕೆ ಸಾಧ್ಯವಿದೆ. ಘೋಷಣೆಯ ಹಿಂದಿನ ಉದ್ದೇಶ ಯಾವುದೇ ಇದ್ದರೂ, ಪರಿಣಾಮದ ದೃಷ್ಟಿಯಿಂದ ಅದು ಮಹತ್ವದ್ದಾಗಿದೆ. ಬಸವಣ್ಣನವರ ಹೆಸರನ್ನು ವ್ಯಕ್ತಿಸೂಚಕವಾಗಿ ಅಥವಾ ಜಾತಿಸೂಚಕವಾಗಿ ನೋಡದೆ, ಕನ್ನಡ ಸಂಸ್ಕೃತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕವಾಗಿ ನೋಡುವುದರಿಂದ ನಾಡಿಗೆ ಹೆಚ್ಚಿನ ಅನುಕೂಲವಿದೆ. ‘ಅನ್ನಭಾಗ್ಯ’ ಸೇರಿದಂತೆ ಐದು ಗ್ಯಾರಂಟಿಗಳ ಮೂಲಕ ಸರ್ವೋದಯದ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಬಸವಣ್ಣನವರ ದಾಸೋಹದ ಪರಿಕಲ್ಪನೆ ಪೂರಕವಾಗಿದೆ. ಬಸವಣ್ಣನವರ ಕರ್ತೃತ್ವ
ಶಕ್ತಿಯಿಂದ ರೂಪುಗೊಂಡ ವಚನಕಾರರ ‘ಅನುಭವ ಮಂಟಪ’ ಇಂದಿನ ಪ್ರಜಾಪ್ರಭುತ್ವದ ಅಡಿಗಲ್ಲೇ ಆಗಿದೆ. ನಾಡಿನ ಸಾಂಸ್ಕೃತಿಕ–ಸಾಹಿತ್ಯಕ ಪರಂಪರೆ ವಿಶ್ವಕ್ಕೆ ಕೊಡುಗೆ ನೀಡಿರುವ ‘ವಿಶ್ವಮಾನವ ಪರಂಪರೆ’ಯ ಬಹು ಮುಖ್ಯವಾದ ಕೊಂಡಿ ಎನ್ನುವ ಕಾರಣದಿಂದಾಗಿಯೂ ಕರ್ನಾಟಕದ ಸಾಂಸ್ಕೃತಿಕ ನಾಯಕನ ರೂಪದಲ್ಲಿ ಬಸವೇಶ್ವರರನ್ನು ಗುರುತಿಸಿರುವ ಕ್ರಮ ಸರಿಯಾದುದಾಗಿದೆ. ಬಸವಣ್ಣ
ನವರಿಗೆ ಸಂದಿರುವ ಈ ಗೌರವವನ್ನು ಕವಿರಾಜಮಾರ್ಗಕಾರ, ಪಂಪ, ಕುಮಾರವ್ಯಾಸ, ಕುವೆಂಪು, ರಾಜ್‌ಕುಮಾರ್‌ ಅವರಂತಹ ಸಾಧಕರ ಸಾಂಸ್ಕೃತಿಕ ಪರಂಪರೆಗೆ ಸಂದಿರುವ ಮನ್ನಣೆಯೆಂದು ಭಾವಿಸಬೇಕಾಗಿದೆ.

ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಜನಹಿತದ ಕುರಿತ ರಾಜ್ಯ ಸರ್ಕಾರದ ಉತ್ತರದಾಯಿತ್ವ ಮತ್ತಷ್ಟು ಹೆಚ್ಚಾಗಿದೆ. ಹಲವು ಬಗೆಯ ವಿಷಮ ಸನ್ನಿವೇಶಗಳನ್ನು ನಾಡು ಎದುರಿಸುತ್ತಿರುವ ಸಂದರ್ಭ ಇಂದಿನದು. ಧರ್ಮ ಮತ್ತು ರಾಜಕಾರಣದ ನಡುವಣ ಗೆರೆ ತೆಳುವಾಗುತ್ತಾ ಹೋದಂತೆ, ನಾಡಿನ ಬಹುತ್ವ ಪರಂಪರೆಯ ವರ್ಚಸ್ಸು ಮಸುಕಾಗುತ್ತಿದೆ. ಸಂವಿಧಾನವನ್ನು ನಿರ್ಲಕ್ಷಿಸಿ ಧರ್ಮಕ್ಕೆ ತಮ್ಮ ಬದ್ಧತೆ ಮತ್ತು ಆದ್ಯತೆಯನ್ನು ವ್ಯಕ್ತಪಡಿಸಲು ಹಿಂಜರಿಯದಿರುವ ಪ್ರಜಾಪ್ರತಿ
ನಿಧಿಗಳ ಉದಾಹರಣೆಗಳೂ ಬಹಳಷ್ಟಿವೆ. ಪರ ಧರ್ಮ ಮತ್ತು ಪರ ವಿಚಾರಗಳನ್ನು ಸೈರಣೆಯಿಂದ ನೋಡುವುದೇ ನಿಜವಾದ ಧರ್ಮ ಎನ್ನುವ ಕವಿರಾಜಮಾರ್ಗಕಾರನ ಮಾತನ್ನು ಅಣಕಿಸುವಂತೆ, ಪ್ರಚೋದನಕಾರಿ ಹಾಗೂ ಕೀಳು ಮಾತುಗಳಿಂದ ಹೀಗಳೆಯುವುದನ್ನೇ ರಾಜಕೀಯ ಶಕ್ತಿಯನ್ನಾಗಿಸಿ
ಕೊಂಡಿರುವ ಕೂಗುಮಾರಿಗಳೂ ಇದ್ದಾರೆ. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯೊಂದಿಗೆ ಲಿಂಗಭೇದವೂ ಹೆಚ್ಚಾಗುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ‘ಬಸವ ಪಥ’ದ ಅನುಸರಣೆಯ ಮೂಲಕ ‘ಸೌಹಾರ್ದ ಕರ್ನಾಟಕ’ವನ್ನು ರೂಪಿಸುವ ಮಾರ್ಗದಲ್ಲಿ ಸಾಗುವುದು ಇಂದಿನ ಅಗತ್ಯವಾಗಿದೆ. ಅರಿವನ್ನು ಗುರು, ನುಡಿಯನ್ನು ಜ್ಯೋತಿರ್ಲಿಂಗ ಹಾಗೂ ದಯೆಯನ್ನು ಧರ್ಮದ ಮೂಲವನ್ನಾಗಿ ಕಂಡ ಬಸವಣ್ಣನವರ ಪ್ರತಿಪಾದನೆಯಲ್ಲಿ, ವರ್ತಮಾನದ ಅಹಿತಕರ ವಿದ್ಯಮಾನಗಳನ್ನು ಕೊನೆಗೊಳಿಸಲು ಪ್ರೇರಣೆಗಳಿವೆ. ನಡೆ ಮತ್ತು ನುಡಿಯ ಮೌಲ್ಯವನ್ನು ಎತ್ತಿಹಿಡಿದ ಬಸವ ಸಂಸ್ಕೃತಿ ಸಮಕಾಲೀನ ರಾಜಕಾರಣಿಗಳಿಗೆ ನಿತ್ಯ ಅನುಷ್ಠಾನದ ತತ್ವವಾಗಬೇಕು. ಭಕ್ತಿಮಾರ್ಗದಲ್ಲಿದ್ದುಕೊಂಡೂ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತವಾಗಿರುವುದು ಸಾಧ್ಯ ಎನ್ನುವುದನ್ನು ಪ್ರಜಾಪ್ರತಿನಿಧಿಗಳು ಬಸವಣ್ಣನವರ ಮೂಲಕ ಅರಿಯಬೇಕಾಗಿದೆ. ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಪ್ರಕಟಿಸಿರುವ ಸರ್ಕಾರ, ಬಸವತತ್ವಗಳನ್ನು ವ್ಯಾಪಕ ಪ್ರಚಾರ ಮಾಡುವುದಾಗಿಯೂ ಹೇಳಿದೆ. ಸರ್ಕಾರದ ಉದ್ದೇಶ ಸ್ವಾಗತಾರ್ಹ. ಆದರೆ, ಬಸವತತ್ವದ ಬೀಜಗಳು ಜನಸಾಮಾನ್ಯರಿಗಿಂತಲೂ ಮೊದಲು ಪ್ರಜಾಪ್ರತಿನಿಧಿಗಳ ಎದೆಗೆ ಬೀಳಬೇಕಾಗಿದೆ. ಅದು ಸಾಧ್ಯವಾದಲ್ಲಿ, ಕಲುಷಿತಗೊಂಡಿರುವ ಸಮಕಾಲೀನ ರಾಜಕಾರಣ ಸ್ವಲ್ಪವಾದರೂ ಮಾನವೀಯಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT