ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆರೋಪಿಗಳ ಖಾಸಗಿ ವಿವರ ಪೊಲೀಸರ ಅಂಕೆ ಮೀರಿದ ನಡೆ

Last Updated 15 ಮಾರ್ಚ್ 2020, 18:29 IST
ಅಕ್ಷರ ಗಾತ್ರ

ಪ್ರಭುತ್ವವಾಗಲೀ, ಅದರ ಅಂಗವಾದ ಪೊಲೀಸ್ ವ್ಯವಸ್ಥೆಯಾಗಲೀ ಪ್ರಜೆಗಳ ಖಾಸಗಿತನದ ಹಕ್ಕನ್ನು ಮನಬಂದಂತೆ ಉಲ್ಲಂಘಿಸುವಂತೆ ಇಲ್ಲ ಎನ್ನುವ ಮಾತನ್ನು ದೇಶದ ನ್ಯಾಯಾಂಗ ಕಾಲಕಾಲಕ್ಕೆ ಹೇಳುತ್ತ ಬಂದಿದೆ. ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಖಾಸಗಿತನವನ್ನು ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಸಾರಿತು. ಹೀಗಿದ್ದರೂ, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರ ಭಾವಚಿತ್ರಗಳು ಮತ್ತು ಅವರಿಗೆ ಸಂಬಂಧಿಸಿದ ಕೆಲವು ಖಾಸಗಿ ವಿವರಗಳನ್ನುಉತ್ತರಪ್ರದೇಶದ ಲಖನೌ ನಗರದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದರು. ಆ ಮೂಲಕ, ತಾವು ಹೇಗೆ ನಡೆದುಕೊಳ್ಳಬಾರದು ಎಂಬ ವಿಚಾರದಲ್ಲಿ ಕೆಟ್ಟ ನಿದರ್ಶನವಾದರು.

ಖಾಸಗಿ ವಿವರ ಬಹಿರಂಗಪಡಿಸಿರುವ ಈ ಕ್ರಮವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್‌ ಹೈಕೋರ್ಟ್‌, ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸಾರ್ವಜನಿಕ ಆಸ್ತಿ‍ಪಾಸ್ತಿಗೆ ಹಾನಿ ಉಂಟುಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾದವರ ಹೆಸರು ಮತ್ತು ಅವರ ಖಾಸಗಿ ವಿವರಗಳನ್ನು ಸಾರ್ವಜನಿಕ ಸ್ಥಳಗಳಿಂದ ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿದೆ. ಆಡಳಿತ ವ್ಯವಸ್ಥೆಗೆ ಈ ನಿರ್ದೇಶನ ನೀಡುವುದರ ಜೊತೆಯಲ್ಲೇ, ಸರ್ಕಾರಗಳು ಪ್ರಜೆಗಳ ಖಾಸಗಿತನ ಕಾಪಾಡುವ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಿದೆ. ‘ಖಾಸಗಿತನದ ಹಕ್ಕು ನಮ್ಮ ಸಂವಿಧಾನ ವ್ಯವಸ್ಥೆಗೆ ಬಲ ಕೊಡುವಂಥದ್ದು. ಇದು ಚಿಕ್ಕ ಪ್ರಮಾಣದಲ್ಲಿ ಗಾಸಿಗೊಂಡರೂ, ಸಂವಿಧಾನದ ಪೀಠಿಕೆಯಲ್ಲಿ ಹೇಳಲಾದ ಮೌಲ್ಯಗಳ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಹಾಗಾಗಿ, ಈ ಹಕ್ಕು ಗಾಸಿಗೊಳ್ಳಲು ಅವಕಾಶ ಕೊಡಲಾಗದು’ ಎಂದು ಕೋರ್ಟ್‌ ಹೇಳಿರುವ ಮಾತಿನ ಅರ್ಥ ಮತ್ತು ವ್ಯಾಪ್ತಿಯು ಸಂವೇದನೆ ಇರುವ ಯಾರಿಗೇ ಆದರೂ ಅರ್ಥವಾಗುತ್ತದೆ.

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ ಆರೋಪ ಎದುರಿಸುತ್ತಿರುವವರ ಭಾವಚಿತ್ರ, ಹೆಸರು ಮತ್ತು ಅವರ ಕೆಲವು ಖಾಸಗಿ ವಿವರಗಳನ್ನು ಲಖನೌ ನಗರದ ಸಾರ್ವಜನಿಕ ಸ್ಥಳದಲ್ಲಿ ‍ಪ್ರದರ್ಶಿಸುವ ಮೂಲಕ ಲಖನೌ ಪೊಲೀಸರು ತಪ್ಪು ಮಾಡಿದರು. ಆರೋಪಿಗಳ ಖಾಸಗಿ ವಿವರಗಳನ್ನು ಬಹಿರಂಗಪಡಿಸುವ ಅಧಿಕಾರವು ಪೊಲೀಸರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಾಗಲೀ (ಸಿಆರ್‌ಪಿಸಿ) ಅಥವಾ ಇತರ ಯಾವುದೇ ಕಾಯ್ದೆಯ ಅಡಿಯಲ್ಲಾಗಲೀ ಇಲ್ಲ. ಹೀಗಿರುವಾಗ, ಪೊಲೀಸರ ಈ ಕೃತ್ಯವನ್ನು ಸಮರ್ಥಿಸಿಕೊಳ್ಳುವ ಮೂಲಕ ಉತ್ತರಪ್ರದೇಶ ಸರ್ಕಾರವೂ ತಪ್ಪು ಮಾಡಿತು. ‘ಉತ್ತರಪ್ರದೇಶದಲ್ಲಿ ಅಪರಾಧ ಎಸಗಿದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರು ಹಲವರಿದ್ದಾರೆ. ಆದರೆ, ಇವರ ಖಾಸಗಿ ವಿವರಗಳನ್ನು ಬಹಿರಂಗಪಡಿಸಿಲ್ಲ. ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ ಕೆಲವು ವ್ಯಕ್ತಿಗಳ ಖಾಸಗಿ ವಿವರಗಳನ್ನು ಮಾತ್ರ ಬಹಿರಂಪಡಿಸಿದ್ದು ಏಕೆ ಎಂಬುದಕ್ಕೆ ಅಡ್ವೊಕೇಟ್ ಜನರಲ್‌ ಅವರು ತೃಪ್ತಿಕರ ವಿವರಣೆ ನೀಡಿಲ್ಲ’ ಎಂದು ಕೋರ್ಟ್‌ ಹೇಳಿದೆ. ಅಷ್ಟೇ ಅಲ್ಲದೆ, ಕೆಲವು ವ್ಯಕ್ತಿಗಳ ಖಾಸಗಿ ವಿವರಗಳನ್ನು ಮಾತ್ರ ಬಹಿರಂಗಪಡಿಸುವ ಕಾರ್ಯಾಂಗದ ಕೃತ್ಯವು ‘ಸರಿಯೆಂಬಂತೆ ಕಾಣುವ ತಪ್ಪು ಕೆಲಸ’ ಎಂದು ಕೋರ್ಟ್‌ ಬಣ್ಣಿಸಿದೆ.

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದವರ ಖಾಸಗಿ ವಿವರಗಳನ್ನು ಮಾತ್ರ ಬಹಿರಂಗಪಡಿಸಿದ್ದರ ಹಿಂದೆ, ಸರ್ಕಾರದ ನಿರ್ದಿಷ್ಟ ನಿಲುವುಗಳನ್ನು ಟೀಕಿಸುವವರನ್ನು ದೇಶದ್ರೋಹಿಗಳು ಎಂಬಂತೆ ಚಿತ್ರಿಸುವ ಮನೋಭಾವ ಕೆಲಸ ಮಾಡಿರಲಿಕ್ಕೂ ಸಾಕು. ಈ ಪ್ರತಿಭಟನಕಾರರ ಖಾಸಗಿ ವಿವರಗಳನ್ನು ಬಹಿರಂಗಪಡಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ನಷ್ಟವನ್ನು ಅವರಿಂದ ವಸೂಲು ಮಾಡುವ ಉದ್ದೇಶ ತನ್ನದು ಎಂದು ಸರ್ಕಾರ ಹೇಳಿಕೊಂಡಿದೆ ಎಂಬ ವರದಿಗಳು ಇವೆ. ಹಾಗಿದ್ದರೂ ಇಂತಹವರೇ ಅಪರಾಧಿಗಳು ಎಂದು ಸರ್ಕಾರವೇ ತೀರ್ಮಾನಿಸುವುದು ಸರಿಯೇ? ಅಂತಹ ಕೆಲಸ ಸಹ ನ್ಯಾಯಸಮ್ಮತ ವಿಚಾರಣೆಯ ಮೂಲಕ ಆಗಬೇಕು. ಯಾರು ಅಪರಾಧ ಎಸಗಿದ್ದಾರೆ ಎಂಬುದನ್ನು ನ್ಯಾಯಾಂಗ ತೀರ್ಮಾನಿಸಿದ ನಂತರ, ಅವರಿಂದ ಆಸ್ತಿಪಾಸ್ತಿಗೆ ಆದ ನಷ್ಟಕ್ಕೆ ಪ್ರತಿಯಾಗಿ ಪರಿಹಾರ ಮೊತ್ತ ವಸೂಲು ಮಾಡಬಹುದೇ ವಿನಾ, ಅಪರಾಧ ತೀರ್ಮಾನವಾಗುವುದಕ್ಕೆ ಮೊದಲಿನ ಹಂತದಲ್ಲಿ ಅಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಗುಂಪುಹತ್ಯೆ ಪ್ರಕರಣಗಳ ಆರೋಪಿಗಳ ಭಾವಚಿತ್ರ, ಖಾಸಗಿ ವಿವರಗಳನ್ನು ಅಲ್ಲಿನ ಪೊಲೀಸರು ಬಹಿರಂಗಪಡಿಸಿ, ಹತ್ಯೆಗೀಡಾದವರ ಕುಟುಂಬಕ್ಕೆ ಆರೋಪಿಗಳಿಂದ ಪರಿಹಾರ ಕೊಡಿಸಲು ಮುಂದಾದ ಉದಾಹರಣೆಗಳೇನೂ ಸಿಗುವುದಿಲ್ಲ ಎಂಬುದನ್ನು ನೆನಪಿಸಿಕೊಂಡರೆ, ಅಲ್ಲಿನ ಪೊಲೀಸರ ತಾರತಮ್ಯದ ಧೋರಣೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT