ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಹಿರಿಯ ನಾಗರಿಕರ ಆರೈಕೆ: ಬೇಕಿದೆ ದೀರ್ಘಾವಧಿ ಕಾರ್ಯತಂತ್ರ

Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

‘ಭಾರತದಲ್ಲಿ ಹಿರಿಯ ನಾಗರಿಕರ ಆರೈಕೆ’ ಹೆಸರಿನಲ್ಲಿ ನೀತಿ ಆಯೋಗ ಸಿದ್ಧಪಡಿಸಿರುವ ವರದಿಯು ದೇಶದಲ್ಲಿ ಜನಸಂಖ್ಯೆಯ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ, ಹಲವು ಬಗೆಗಳಲ್ಲಿ ಇದು ತರಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ. ಹಿರಿಯ ನಾಗರಿಕರ ಪ್ರಮಾಣವು ಈಗ ಒಟ್ಟು
ಜನಸಂಖ್ಯೆಯಲ್ಲಿ ಶೇಕಡ 8.6ರಷ್ಟು ಇದೆ ಎಂದು ಅಂದಾಜಿಸಲಾಗಿದೆ. ಇದು 2030ರೊಳಗೆ
ಶೇ 13ಕ್ಕೆ ಹೆಚ್ಚಾಗಲಿದೆ, 2050ರೊಳಗೆ ಶೇ 20ಕ್ಕೆ ಏರಿಕೆ ಆಗಲಿದೆ ಎಂದು ವರದಿಯು ಅಂದಾಜಿಸಿದೆ. ಇದರ ಅರ್ಥ, ಹಿರಿಯ ನಾಗರಿಕರ ಆರೈಕೆಯನ್ನು ಗಮನದಲ್ಲಿ ಇರಿಸಿಕೊಂಡು ಹಲವು ಕ್ರಮಗಳನ್ನು
ಕೈಗೊಳ್ಳಬೇಕಾಗುತ್ತದೆ, ಅವರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಹಲವು ಯೋಜನೆಗಳನ್ನು
ಹಮ್ಮಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಹೆಚ್ಚಿನ ಕೆಲಸಗಳು ಆಗಿಲ್ಲ, ಕರಾರುವಾಕ್ ಆಗಿರುವ ಅಧ್ಯಯನಗಳು, ಅಂದಾಜುಗಳು ಕೂಡ ಲಭ್ಯವಿಲ್ಲ. ದೇಶದ ಹಿರಿಯ ನಾಗರಿಕರ ಪೈಕಿ ಶೇ 71ರಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ಇದ್ದಾರೆ. ಅಲ್ಲಿ ಹಣಕಾಸಿನ ಸೇವೆಗಳು, ಆರೋಗ್ಯ ಸೇವಾ ಸೌಲಭ್ಯಗಳು ಹಾಗೂ ಇತರ ಅಭಿವೃದ್ಧಿ ಕ್ರಮಗಳು ನಗರ ಪ್ರದೇಶಗಳಲ್ಲಿ ಇರುವಷ್ಟು ದೊಡ್ಡ ಮಟ್ಟದಲ್ಲಿ ಲಭ್ಯವಿಲ್ಲ. ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುವುದೇ ಈ ಸೌಲಭ್ಯಗಳು.

ನೀತಿ ಆಯೋಗದ ವರದಿಯು ಕೆಲವು ಕಟು ವಾಸ್ತವಗಳ ಬಗ್ಗೆಯೂ ಗಮನ ಸೆಳೆಯುವ ಕೆಲಸ ಮಾಡಿದೆ. ಹಿರಿಯ ನಾಗರಿಕರ ಪೈಕಿ ಸರಿಸುಮಾರು ಶೇ 75ರಷ್ಟು ಮಂದಿ ದೀರ್ಘಾವಧಿಯ ಕಾಯಿಲೆಗಳಿಗೆ ತುತ್ತಾಗಿದ್ದಾರೆ, ಪ್ರತಿ ಮೂವರಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದಾರೆ. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು ಸವಾಲಿನ ಕೆಲಸವೇ ಹೌದು. ಹಿರಿಯ ನಾಗರಿಕರಿಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿನ ತಜ್ಞತೆಯು ದೇಶದಲ್ಲಿ ಹೆಚ್ಚಿಲ್ಲ. ಅಲ್ಲದೆ, ಹಲವರಿಗೆ ತೀರಾ ಮೂಲಭೂತವಾದ ವೈದ್ಯಕೀಯ ಸೌಲಭ್ಯಗಳೂ ಸಿಗುತ್ತಿಲ್ಲ. ಹಿರಿಯ ನಾಗರಿಕರ ಪೈಕಿ ಶೇ 78ರಷ್ಟು ಮಂದಿಗೆ ಯಾವುದೇ ಪಿಂಚಣಿ ಸೌಲಭ್ಯ ಇಲ್ಲ, ಶೇ 18ರಷ್ಟು ಮಂದಿಗೆ ಮಾತ್ರ ಆರೋಗ್ಯ ವಿಮೆಯ ಸೌಲಭ್ಯ ಇದೆ. ಇವರಲ್ಲಿ ಹೆಚ್ಚಿನವರು ಆರ್ಥಿಕ ಅಭದ್ರತೆಯಲ್ಲಿದ್ದಾರೆ. ಹಲವರಿಗೆ ದಿನನಿತ್ಯದ ಆಹಾರವೇ ದೊಡ್ಡ ಸಮಸ್ಯೆ, ಸಾಮಾಜಿಕ ಭದ್ರತಾ ಸೌಲಭ್ಯಗಳು ಸಾಕಾಗುತ್ತಿಲ್ಲ ಅಥವಾ ಅವು ಇಲ್ಲವೇ ಇಲ್ಲ. ಸಣ್ಣ ಕುಟುಂಬಗಳ ಕಾರಣದಿಂದಾಗಿ ಹಿರಿಯ ನಾಗರಿಕರು ಒಂಟಿತನ ಅನುಭವಿಸುತ್ತಿದ್ದಾರೆ, ಅವರಲ್ಲಿ ನಿರಾಶೆ ಮನೆಮಾಡಿದೆ. ಹಿರಿಯ ನಾಗರಿಕರ ಪೈಕಿ ಮಹಿಳೆಯರಲ್ಲಿ ಶೇ 54ರಷ್ಟು ಮಂದಿ ವಿಧವೆಯರು, ಇವರಲ್ಲಿ ಶೇ 9ರಷ್ಟು ಮಂದಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಎಂದು ವರದಿಯು ಹೇಳಿದೆ. ತಮಗಾಗಿ ರೂಪಿಸಲಾಗಿರುವ ಯೋಜನೆಗಳು ಹಾಗೂ ಇರುವ ಸೌಲಭ್ಯಗಳ ಬಗ್ಗೆ ಹಲವರಿಗೆ ಮಾಹಿತಿಯೇ ಇಲ್ಲ ಎಂದು ಕೂಡ ಅದರಲ್ಲಿ ಉಲ್ಲೇಖಿಸಲಾಗಿದೆ.

ಜನಸಂಖ್ಯೆಯ ಸ್ವರೂಪದಲ್ಲಿನ ಬದಲಾವಣೆಯು ಮುಂದಿನ ದಿನಗಳಲ್ಲಿ ಹೆಚ್ಚು ವೇಗವಾಗಿ ಆಗಲಿ ರುವ ಕಾರಣದಿಂದ ಪರಿಸ್ಥಿತಿಯು ಇನ್ನಷ್ಟು ಕೆಡಲಿದೆ. ಹೀಗಾಗಿ, ಈ ಸಮಸ್ಯೆಯನ್ನು ನಿಭಾಯಿಸಲು ಅಗತ್ಯವಿರುವ ಕೆಲಸಗಳು, ಯೋಜನೆಗಳು ಈಗಿನಿಂದಲೇ ಸಿದ್ಧವಾಗಬೇಕು. ಜನಸಂಖ್ಯೆಯಲ್ಲಿ ಯುವ ಜನರ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಹಲವಷ್ಟು ಲಾಭಗಳು ಸಿಗಲಿವೆ ಎಂಬ ನಿರೀಕ್ಷೆ ಇದೆ. ಆದರೆ, ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳದೆ ಇದ್ದರೆ ಹಾಗೂ ಯೋಜನೆಗಳನ್ನು ರೂಪಿಸದೆ ಇದ್ದರೆ, ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಿಭಾಯಿಸುವ ಭರದಲ್ಲಿಯೇ ಜನಸಂಖ್ಯೆಯಿಂದ ಸಿಗುವ ಎಲ್ಲ ಬಗೆಯ ಲಾಭಗಳ ಪ್ರಯೋಜನ ದಕ್ಕದಂತೆ ಆಗಿಬಿಡುತ್ತದೆ. ಆರೋಗ್ಯ ಸೇವಾ ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸಬೇಕು, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಮೂಲಸೌಕರ್ಯವನ್ನು ಉತ್ತಮಪಡಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.


ವೃದ್ಧಾಪ್ಯದಲ್ಲಿ ಇರುವವರಿಗೆ ಹಣಕಾಸಿನ ಭದ್ರತೆ ಕಲ್ಪಿಸಲು ಯೋಜನೆ ರೂಪಿಸಬೇಕಿದೆ. ಪಿಂಚಣಿ, ವಿಮೆ, ತೆರಿಗೆ ಸುಧಾರಣೆಗಳು ಮತ್ತು ಹಿರಿಯ ನಾಗರಿಕರಿಗೆ ಸಂಬಂಧಿಸಿದ ಇತರ ಸುಧಾರಣಾ ಕ್ರಮಗಳ ಬಗ್ಗೆ ಗಮನ ನೀಡಬೇಕು. ಜೀವಿತಾವಧಿ ಹೆಚ್ಚಾದಂತೆಲ್ಲ ಕೆಲಸದ ಸ್ವರೂಪದಲ್ಲಿ ಇನ್ನಷ್ಟು
ಸುಧಾರಣೆಗಳನ್ನು ತರಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ದೀರ್ಘಾವಧಿಯ ಕಾರ್ಯತಂತ್ರವೊಂದನ್ನು ರೂಪಿಸಬೇಕು. ಈ ಕಾರ್ಯತಂತ್ರವನ್ನು ಕಾಲಕಾಲಕ್ಕೆ
ಪರಿಷ್ಕರಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT