ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಕ್ಕಳಿಗಾಗಿ ‘ಚಂದ್ರಯಾನ ಉತ್ಸವ’; ಕಲ್ಪಿತ ತಥ್ಯಗಳ ಅವಸರ ಪ್ರಸವ

Published 3 ನವೆಂಬರ್ 2023, 19:18 IST
Last Updated 3 ನವೆಂಬರ್ 2023, 19:18 IST
ಅಕ್ಷರ ಗಾತ್ರ

ವರ್ತಮಾನದ ಯಾವುದೇ ಮಹಾ ಸಾಧನೆಯನ್ನು ಮಕ್ಕಳ ಪಠ್ಯಪುಸ್ತಕಗಳಲ್ಲಿ ತ್ವರಿತವಾಗಿ ಸೇರಿಸುವುದು ಸುಲಭದ ಮಾತಲ್ಲ. ಅದಕ್ಕೆಂದೇ ಪೂರಕ ಪಠ್ಯಗಳನ್ನು ಸರ್ಕಾರ ಶಿಫಾರಸು ಮಾಡಬಹುದಾಗಿದೆ. ಈ ಉದ್ದೇಶದಿಂದ ಈಚಿನ ‘ಚಂದ್ರಯಾನ–3’ರ ಸಾಧನೆಯ ಕುರಿತು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಕಟಿಸಿರುವ ‘ಚಂದ್ರಯಾನ ಉತ್ಸವ’ ಸರಣಿ ಕೈಪಿಡಿಗಳು ಈಗ ವಿವಾದಕ್ಕೆ ಕಾರಣವಾಗಿವೆ. ಅವುಗಳಲ್ಲಿ ‘ವೈಜ್ಞಾನಿಕವಾಗಿ ತಪ್ಪುಗ್ರಹಿಕೆಗೆ ಆಸ್ಪದವಾಗುವ ಪುರಾಣದ ಉಲ್ಲೇಖಗಳಿವೆ’ ಎಂದು ವಿಜ್ಞಾನಕ್ಕೆ ಸಂಬಂಧಿಸಿದ ಸುಮಾರು 40 ಸಂಘಟನೆಗಳ ಜಾಲಬಂಧ (ಎಐಪಿಎಸ್‌ಎನ್‌) ಎತ್ತಿತೋರಿಸಿದೆ.

ಭಾರತದ ಬಾಹ್ಯಾಕಾಶ ಸಾಧನೆಗಳ ಬಗ್ಗೆ ಮಕ್ಕಳಿಗೆ ಶೀಘ್ರವಾಗಿ ತಿಳಿಸಬೇಕೆಂಬ ಎನ್‌ಸಿಇಆರ್‌ಟಿ ತುಡಿತ ಶ್ಲಾಘನೀಯವೇ ಹೌದಾದರೂ ಅದರಲ್ಲಿ ಪುರಾಣಕಾಲದ ಕಾಲ್ಪನಿಕ ಸಂಗತಿಗಳನ್ನು ಸತ್ಯವೆಂದೇ ನಂಬುವಂತೆ ಸೇರ್ಪಡೆ ಮಾಡಿದ್ದು ಅನೇಕರ ಆಕ್ಷೇಪಕ್ಕೆ ಕಾರಣವಾಗಿದೆ. ಕೆಲವು ವರ್ಷಗಳಿಂದ ವಿಜ್ಞಾನ ಮತ್ತು ವೈಚಾರಿಕತೆಗೆ ವಿರುದ್ಧವಾದ ಹೇಳಿಕೆಗಳು ಅಧಿಕಾರಸ್ಥರಿಂದ ಪದೇ ಪದೇ ಬರುತ್ತಲೇ ಇವೆ.

ಗಣೇಶನಿಗೆ ಆನೆಯ ರುಂಡವನ್ನು ಸೇರಿಸಿದ್ದೇ ಪ್ಲಾಸ್ಟಿಕ್‌ ಸರ್ಜರಿಯ ಮೂಲಪುರಾವೆ ಎಂಬುದಾಗಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಾಗಲೇ ವಿಜ್ಞಾನಿಗಳು ಆಕ್ಷೇಪ ಎತ್ತಿದ್ದರು. ಇಂತಹ ಅವೈಜ್ಞಾನಿಕ ಹೇಳಿಕೆಗಳ ಸರಣಿ ಇಂದಿಗೂ ಮುಂದುವರಿದಿದೆ. ಗಾಂಧಾರಿಗೆ ನೂರೊಂದು ಮಕ್ಕಳು ಜನಿಸಲು ಸ್ಟೆಮ್‌ ಸೆಲ್‌ ತಂತ್ರಜ್ಞಾನವೇ ಕಾರಣ ಎಂದು ಆಂಧ್ರ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ. ಜಿ.ನಾಗೇಶ್ವರ ರಾವ್‌ ಅವರು ಹೇಳಿದ್ದು; ಯಾವ ಮಂಗವೂ ಮನುಷ್ಯರಿಗೆ ಜನ್ಮ ನೀಡಿಲ್ಲವಾದ್ದರಿಂದ ಡಾರ್ವಿನ್‌ ಸಿದ್ಧಾಂತವೇ ತಪ್ಪು ಎಂದು ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಸತ್ಯಪಾಲ್‌ ಸಿಂಗ್‌ ಹೇಳಿದ್ದು; ಹಸುವಿನ ದೇಹದಲ್ಲಿ ಚಿನ್ನದ ಅಂಶ ಇರುವುದರಿಂದಾಗಿಯೇ ಅದರ ಹಾಲು ನಸುಹಳದಿ ವರ್ಣದ್ದೆಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್‌ ಘೋಷ್‌ ಪ್ರತಿಪಾದಿಸಿದ್ದು; ಅಷ್ಟೇಕೆ, ಮಾಂಸಾಹಾರ ಭಕ್ಷಣೆ ಮಾಡುತ್ತಿರುವುದೇ ಹಿಮಾಚಲ ಪ್ರದೇಶದ ಈಚಿನ ಮೇಘಸ್ಫೋಟದ ದುರಂತಕ್ಕೆ ಕಾರಣ ಎಂದು ಮಂಡಿಯ ಐಐಟಿಯ ನಿರ್ದೇಶಕ ಪ್ರೊ. ಲಕ್ಷ್ಮೀಧರ ಬೆಹ್ರಾ ಘೋಷಿಸಿದ್ದು- ಇವೆಲ್ಲವೂ ಉನ್ನತ ಸ್ಥಾನದಲ್ಲಿರುವವರ ಅಂಧವಿಶ್ವಾಸದ ಪ್ರತೀಕಗಳೇ ಆಗಿವೆ.

ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಆಯ್ಕೆಗೆಂದು ಆಟಗಾರರ ಪಟ್ಟಿಯನ್ನು ಜ್ಯೋತಿಷಿಯೊಬ್ಬರಿಗೆ ಕಳಿಸಿದ್ದಂತೂ ಅಂಧವಿಶ್ವಾಸದ ಪರಾಕಾಷ್ಠೆ ಎನ್ನಿಸಿದೆ. ಎನ್‌ಸಿಇಆರ್‌ಟಿಯ ಜಾಲತಾಣದಲ್ಲಿ ಈಗ ನೋಡಸಿಗುವ ‘ಚಂದ್ರಯಾನ ಉತ್ಸವ’ದ ಮಾಡ್ಯೂಲ್‌ನಲ್ಲೂ ವೇದಕಾಲದ್ದೆಂದು ಹೇಳಲಾದ ವೈಮಾನಿಕಶಾಸ್ತ್ರವನ್ನು ಶ್ಲಾಘಿಸಲಾಗಿದೆ. ಅದು ವೇದಕಾಲದ್ದಲ್ಲವೆಂದೂ 1920ರ ಆಸುಪಾಸಿನಲ್ಲಿ ಆನೇಕಲ್‌ನ ಪಂಡಿತ ಸುಬ್ಬರಾಯ ಶಾಸ್ತ್ರಿ ಎಂಬುವರು ರಚಿಸಿದ ಗ್ರಂಥವನ್ನೇ ಪುರಾತನದ್ದೆಂಬಂತೆ ಬಿಂಬಿಸಲಾಗುತ್ತಿದೆ ಎಂತಲೂ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ವಿಶ್ಲೇಷಿಸಿದ್ದಾರೆ. ಆ ಗ್ರಂಥದಲ್ಲಿನ ಯಾವ ವಿವರವೂ ವಿಮಾನದ ಹಾರಾಟಕ್ಕೆ ಪೂರಕ ಅಲ್ಲವೆಂತಲೂ ಹೇಳಿದ್ದಾರೆ. ಅಂತೂ ಪುರಾತನರ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಯಾವುದೇ ಪುರಾವೆ ಇಲ್ಲದಿದ್ದರೇನಾಯಿತು ಈಗಿನವರ ಅವೈಜ್ಞಾನಿಕ ಧೋರಣೆಗಳಿಗೆ ಪುರಾವೆಗಳು ಪುಂಖಾನುಪುಂಖವಾಗಿ ಸಿಗುತ್ತಲೇ ಇವೆ.

ಪುರಾತನ ಕತೆಗಳಿಗೆ ವಿಜ್ಞಾನದ ಬಣ್ಣವನ್ನು ಲೇಪಿಸಿದ್ದಷ್ಟೇ ಅಲ್ಲ, ಎನ್‌ಸಿಇಆರ್‌ಟಿಯ ಪಠ್ಯಕರ್ತರು ವಿಜ್ಞಾನದ ಚರಿತ್ರೆಯನ್ನೂ ತಿರುಚುವ ಕೆಲಸವನ್ನು ಮಾಡಿದ್ದಾರೆ. ಜರ್ಮನಿಯ ನಾಜಿ ಪಕ್ಷದ ಸದಸ್ಯನಾಗಿದ್ದ ವೆರ್ನರ್‌ ವೊನ್‌ ಬ್ರಾವ್ನ್‌ ಎಂಬಾತನನ್ನು ರಾಕೆಟ್‌ ವಿಜ್ಞಾನದ ಜನಕ ಎಂದು ಈ ‘ಉತ್ಸವ’ ಸರಣಿಯಲ್ಲಿ ಬಣ್ಣಿಸಲಾಗಿದ್ದು ‘ನಮಗೆಲ್ಲ ಆತನ ಅದಮ್ಯ ಚೈತನ್ಯವೇ ಪ್ರೇರಕಶಕ್ತಿ ಆಗಬೇಕಿದೆ’ ಎಂಬ ಹಾರೈಕೆಯೂ ಇದೆ. ವಾಸ್ತವ ಏನೆಂದರೆ, ಈತನಿಗಿಂತ ಹತ್ತು ವರ್ಷ ಮೊದಲೇ 1926ರಲ್ಲಿ ಅಮೆರಿಕದ ರಾಬರ್ಟ್‌ ಗೊಡ್ಡಾರ್ಡ್‌ ಎಂಬಾತ ರಾಕೆಟ್‌ ತಯಾರಿಸಿ ಹಾರಿಸಿದ್ದು, ಆತನೇ ರಾಕೆಟ್‌ ವಿಜ್ಞಾನದ ಜನಕ ಎಂದು ಅಮೆರಿಕದ ನಾಸಾ ಸಂಸ್ಥೆ ದಾಖಲಿಸಿದೆ. ಮೇರಿಲ್ಯಾಂಡ್‌ನಲ್ಲಿರುವ ಅತಿ ದೊಡ್ಡ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಗೊಡ್ಡಾರ್ಡ್‌ ರೂಪಿಸಿದ ಮಾದರಿಯನ್ನೇ ಆಧರಿಸಿ ಹತ್ತು ವರ್ಷಗಳ ನಂತರ ಈ ವೆರ್ನರ್‌ ಮಹಾಶಯ ನಾಜಿ ಸೈನ್ಯಕ್ಕೆಂದು ರಾಕೆಟ್‌ ತಯಾರಿಸಿದ್ದ. ತನ್ನ ಬಾಹ್ಯಾಕಾಶದ ಕನಸಿನ ಸಾಧನವನ್ನು ವೆರ್ನರ್‌ ಯುದ್ಧಾಸ್ತ್ರವಾಗಿ ಬಳಸಿಬಿಟ್ಟನಲ್ಲ ಎಂದು ಗೊಡ್ಡಾರ್ಡ್‌ ವ್ಯಥಿಸಿದ್ದ ಕೂಡ. ಇವೆಲ್ಲವೂ ಚರಿತ್ರೆಯಲ್ಲಿ ದಾಖಲಾಗಿದ್ದರೂ ಯುದ್ಧಾಪರಾಧದ ಶಿಕ್ಷೆಯಿಂದ ಬಚಾವಾಗಲೆಂದೇ ಜರ್ಮನಿಯಿಂದ ಅಮೆರಿಕಕ್ಕೆ ವಲಸೆ ಹೋದವನೆಂಬ ಆಪಾದನೆ ಹೊತ್ತ ರಾಕೆಟ್‌ ತಜ್ಞನ ಯಾವ ಆದರ್ಶವು ಮಕ್ಕಳಿಗೆ ಪ್ರೇರಕಶಕ್ತಿಯಾಗಲು ಸಾಧ್ಯ?

ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಸಾಧನೆಗಳು ಮಕ್ಕಳನ್ನು ತಲುಪಬೇಕು, ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಹಿಂದಿನ ಭಾರತೀಯ ಪರಂಪರೆಯನ್ನು ಹಾಡಿಹೊಗಳುವ ಭರದಲ್ಲಿ ಇಂಥ ಅವಸರದ, ತಪ್ಪು ಮಾಹಿತಿಗಳ, ಅಪಕ್ವ ಸಾಹಿತ್ಯವನ್ನು ಸೃಷ್ಟಿಸಿದ್ದೂ ಅಲ್ಲದೆ, ಅದಕ್ಕೆ ಆಕ್ಷೇಪಗಳು ಬಂದ ನಂತರವೂ ಸರಿಪಡಿಸದೇ ಎನ್‌ಸಿಇಆರ್‌ಟಿ ತನ್ನ ಜಾಲತಾಣದಲ್ಲಿ ಉಳಿಸಿಕೊಂಡಿದ್ದು ಧಾರ್ಷ್ಟ್ಯವಲ್ಲದೆ ‘ಚಂದ್ರಯಾನ ಉತ್ಸವ’ವಂತೂ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT