ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವೈದ್ಯರಿಗೆ ಗ್ರಾಮೀಣ ಸೇವೆ ವಿನಾಯಿತಿ– ತೀರ್ಮಾನದ ಮರುಪರಿಶೀಲನೆ ಅಗತ್ಯ

Published 21 ಅಕ್ಟೋಬರ್ 2023, 0:04 IST
Last Updated 21 ಅಕ್ಟೋಬರ್ 2023, 0:04 IST
ಅಕ್ಷರ ಗಾತ್ರ

ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪದವೀಧರರು ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎನ್ನುವ ನಿಯಮವನ್ನು ರದ್ದುಗೊಳಿಸುವ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರ ವ್ಯಾಪಕ ಚರ್ಚೆಗೊಳಗಾಗಬೇಕಾಗಿದೆ. ಈ ತೀರ್ಮಾನ ಗ್ರಾಮೀಣ ಭಾಗಗಳಲ್ಲಿನ ವೈದ್ಯಕೀಯ ಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.

ವೈದ್ಯಕೀಯ ಸವಲತ್ತುಗಳ ಕೊರತೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳು ಮತ್ತಷ್ಟು ತೊಂದರೆ ಎದುರಿಸಲು ಸರ್ಕಾರದ ತೀರ್ಮಾನವೇ ಎಡೆಮಾಡಿಕೊಡಬಹುದು. ಕರ್ನಾಟಕದಲ್ಲಿ ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮ ಈಗ ಜಾರಿಯಲ್ಲಿದೆ. ಇದರಿಂದಾಗಿ, ಹೊಸದಾಗಿ ವೈದ್ಯ ವೃತ್ತಿ ಪ್ರವೇಶಿಸುವ ತರುಣ ತರುಣಿಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಅನಿವಾರ್ಯ ಇತ್ತು.

2012ರ ಕಾಯ್ದೆ ಮತ್ತು 2015ರ ನಿಯಮಗಳು ಎಂಬಿಬಿಎಸ್‌ ಮತ್ತು ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದವು. ಇದೀಗ, ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ಮಸೂದೆ–2023’ಕ್ಕೆ ಒಪ್ಪಿಗೆ ನೀಡಿರುವ ಸಚಿವ ಸಂಪುಟ, ಇದನ್ನು ತುರ್ತಾಗಿ ಜಾರಿಗೊಳಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.

ಇತರೆ ಯಾವುದೇ ಪದವೀಧರರಿಗಿಲ್ಲದ ಕಡ್ಡಾಯ ಗ್ರಾಮೀಣ ಸೇವೆಯ ಷರತ್ತನ್ನು ವೈದ್ಯರಿಗೆ ಹೇರುವುದು ಸರಿಯಲ್ಲವೆನ್ನುವ ವಾದ ತಾರ್ಕಿಕವಾಗಿ ಸರಿ. ಆದರೆ, ಜನಜೀವನವನ್ನು ಹಸನುಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಉತರ ಉದ್ಯೋಗಗಳಿಗೂ, ಜೀವಗಳನ್ನು ಉಳಿಸಲು ಶ್ರಮಿಸುವ ವೈದ್ಯಕೀಯ ವೃತ್ತಿಗೂ ವ್ಯತ್ಯಾಸವಿದೆ. ಉಳಿದ ವೃತ್ತಿಗಿಂತಲೂ ಹೆಚ್ಚು ಸೇವಾಮನೋಭಾವವನ್ನು ವೈದ್ಯ ವೃತ್ತಿ ಅಪೇಕ್ಷಿಸುತ್ತದೆ. ಆ ಕಾರಣದಿಂದಾಗಿ, ಗ್ರಾಮೀಣ ಸೇವೆಯನ್ನು ಸಲ್ಲಿಸುವುದನ್ನು ವೈದ್ಯ ವೃತ್ತಿಯ ಸೇವಾ ಮನೋಭಾವದ ರೂಪದಲ್ಲಿಯೇ ನೋಡಬೇಕಾಗಿದೆ.

ಗ್ರಾಮೀಣ ಭಾಗಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವುದನ್ನು ಜನರ ಅನುಕೂಲದ ದೃಷ್ಟಿಯಿಂದಷ್ಟೇ ನೋಡಬೇಕಾಗಿಲ್ಲ. ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು, ವೈದ್ಯಕೀಯ ವೃತ್ತಿಯನ್ನು ಹೊಸತಾಗಿ ಪ್ರವೇಶಿಸುವ ತರುಣ ತರುಣಿಯರ ವ್ಯಕ್ತಿತ್ವ ವಿಕಸನದ ರೂಪದಲ್ಲೂ ನೋಡಬೇಕು. ಸಾರ್ವಜನಿಕ ಸೇವೆಯಲ್ಲಿ ಇರುವವರು ಗ್ರಾಮೀಣ ಭಾರತವನ್ನು ಪರಿಚಯಿಸಿಕೊಂಡಾಗಷ್ಟೇ ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲರು. ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇಲ್ಲದೆ ಹೋದಾಗ, ಸಮಾಜವನ್ನು ಅರ್ಥ ಮಾಡಿಕೊಳ್ಳುವ ಅಪೂರ್ವ ಅವಕಾಶವೊಂದು ಯುವ ವೈದ್ಯರಿಗೆ ತಪ್ಪಿಹೋಗುತ್ತದೆ. ಇದರಿಂದಾಗಿ, ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾದ ಮಾನವೀಯ ಆಯಾಮವೊಂದರ ಕೊರತೆಯುಂಟಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಪದವೀಧರರು ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸುವ ನಿಯಮ ರದ್ದುಪಡಿಸಲು ತೀರ್ಮಾನಿಸಿರುವ ಸರ್ಕಾರ, ರಾಜ್ಯದಲ್ಲಿ ವೈದ್ಯರ ಕೊರತೆಯಿಲ್ಲ ಎಂದು ಹೇಳುತ್ತಿದೆ. ಈ ಮಾತು ಸತ್ಯಕ್ಕೆ ದೂರವಾದುದು.

2023–24ನೇ ಸಾಲಿನಲ್ಲಿ 3,251 ಎಂಬಿಬಿಎಸ್‌ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಹೆಸರು ನೋಂದಾಯಿಸಿದ್ದಾರೆ. ಆದರೆ, 1,897 ಹುದ್ದೆಗಳು ಮಾತ್ರ ಖಾಲಿಯಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸಲು 1,354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಅಗತ್ಯವಿದ್ದಷ್ಟೇ ಹೊಸತಾಗಿ ವೈದ್ಯರನ್ನು ನೇಮಕ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ. ಈ ಹೇಳಿಕೆಯ ಜೊತೆಯಲ್ಲಿಯೇ, ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳಿಗೆ ವೈದ್ಯಕೀಯ ಸೇವೆಯನ್ನು ಒದಗಿಸುವ ‘ನಮ್ಮ ಕ್ಲಿನಿಕ್‌’ಗಳು ಆರಂಭಗೊಂಡ ಹತ್ತು ತಿಂಗಳಲ್ಲೇ ಅನಾರೋಗ್ಯಕ್ಕೆ ತುತ್ತಾಗಿರುವ ವರದಿ ಕಳೆದ ತಿಂಗಳು ಸುದ್ದಿಯಾಗಿದ್ದುದನ್ನು ಗಮನಿಸಬೇಕು. ‘ನಮ್ಮ ಆರೋಗ್ಯ, ನಮ್ಮ ಸಮೀಪ’ ಎನ್ನುವ ಘೋಷವಾಕ್ಯದಡಿ ಆರಂಭವಾದ ಅನೇಕ ‘ನಮ್ಮ ಕ್ಲಿನಿಕ್‌’ಗಳು ವೈದ್ಯರು ಹಾಗೂ ಶುಶ್ರೂಷಕರಿಲ್ಲದೆ ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿವೆ. ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶಗಳ ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತ ವರದಿಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿವೆ. ಈ ವಾಸ್ತವಕ್ಕೆ ಬೆನ್ನುಹಾಕಿ, ರಾಜ್ಯದಲ್ಲಿ ವೈದ್ಯರ ಕೊರತೆಯಿಲ್ಲ ಎಂದು ಹೇಳಿರುವ ಸರ್ಕಾರದ ಮಾತನ್ನು ತಿಳಿವಳಿಕೆಯ ಕೊರತೆ ಎಂದೇ ಭಾವಿಸಬೇಕಾಗುತ್ತದೆ. ವೈದ್ಯ ಪದವೀಧರರಿಗೆ ಗ್ರಾಮೀಣ ಪ್ರದೇಶಗಳಲ್ಲಿನ ಸೇವೆಯನ್ನು ಕಡ್ಡಾಯಗೊಳಿಸದಿರುವ ನಿರ್ಧಾರವನ್ನು ಸರ್ಕಾರ ಮರು ಪರಿಶೀಲಿಸಬೇಕು. ಹಳ್ಳಿಗಳು, ಪಟ್ಟಣಗಳಲ್ಲಿನ ಸರ್ಕಾರಿ ಆಸ್ಪತ್ರೆಗಳು ದುರ್ಬಲಗೊಳ್ಳದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಹೊಣೆಗಾರಿಕೆ. ತಾರ್ಕಿಕವಾಗಿ ಮಾತನಾಡುವುದರ ಬದಲು, ವಾಸ್ತವದ ನೆಲೆಗಟ್ಟಿನಲ್ಲಿ ಗ್ರಾಮೀಣರಿಗೆ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವ ದಿಸೆಯಲ್ಲಿ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT