ಭಾನುವಾರ, ಮಾರ್ಚ್ 29, 2020
19 °C

ಕೊರೊನಾ: ನಿರ್ಬಂಧ, ನಿಯಮಕ್ಕೆಜನಪ್ರತಿನಿಧಿಗಳು ಅತೀತರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಹರಡುವ ಅಪಾಯ ಇರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ತಮ್ಮ ನೇತೃತ್ವದ ಸರ್ಕಾರವೇ ವಿಧಿಸಿರುವ ನಿರ್ಬಂಧಗಳನ್ನು ತಾವೇ ಮುರಿದಿರುವುದು ಒಪ್ಪತಕ್ಕ ನಡವಳಿಕೆಯಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ತಾವಾಡುವ ಮಾತನ್ನು ತಾವೇ ಪಾಲಿಸದೆ ಹೋದರೆ ಅಂಥ ಮಾತಿಗೆ ಯಾವ ಬೆಲೆಯೂ ಇರುವುದಿಲ್ಲ. ಅಧಿಕಾರದಲ್ಲಿ ಇರುವವರಂತೂ ತಮ್ಮ ಸಾರ್ವಜನಿಕ ನಡವಳಿಕೆಗಳ ಬಗ್ಗೆ ಸದಾಕಾಲ ಎಚ್ಚರಿಕೆಯಿಂದ ಇರಬೇಕು; ಅವರ ಮಾತು–ಕೃತಿ ಜನಸಾಮಾನ್ಯರಿಗೆ ಮಾದರಿಯಾಗುವಂತೆ ಇರಬೇಕು. ಸರ್ಕಾರ ಹೊರಡಿಸಿದ ಆದೇಶಕ್ಕೆ ತಾವು ಅತೀತರು ಎಂದು ಯಾರೂ ಭಾವಿಸಬಾರದು. ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ನೂರಕ್ಕಿಂತಲೂ ಹೆಚ್ಚು ಜನ ಸೇರುವ ಸಮಾರಂಭಗಳನ್ನು ನಡೆಸಬಾರದು ಎನ್ನುವುದು ಅಂಥ ನಿರ್ಬಂಧಗಳಲ್ಲೊಂದು. ಅದನ್ನು ಉಲ್ಲಂಘಿಸಿ ಬೆಳಗಾವಿಯಲ್ಲಿ ನಡೆದ, ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ಮದುವೆಯಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದಾರೆ.

ಮುಖ್ಯಮಂತ್ರಿ ಬಂದಿದ್ದಾರೆ ಎಂಬ ಕಾರಣಕ್ಕಾಗಿಯೇ ಸಚಿವರು, ಶಾಸಕರು ಹಾಗೂ ಹಲವು ಜನಪ್ರತಿನಿಧಿಗಳ ದಂಡು ಸೇರಿದೆ. ಅಧಿಕಾರಿಗಳೂ ಭಾಗವಹಿಸಿದ್ದಾರೆ. ಸಾವಿರಾರು ಜನ ಸೇರಿದ್ದ ಅದ್ಧೂರಿ ಮದುವೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯಕ್ಕೆ ಮುಖ್ಯಮಂತ್ರಿ ಇಂಥ ಸಂದರ್ಭದಲ್ಲಿ ನೀಡಿರುವ ಸಂದೇಶವಾದರೂ ಏನು? ಮದುವೆಯಲ್ಲಿ ಭಾಗವಹಿಸಿರುವುದು ಮಾತ್ರವಲ್ಲ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿನ ಅವರ ನಡವಳಿಕೆಯೂ ಪ್ರಶ್ನಾರ್ಹ. ಆರೋಗ್ಯ ಇಲಾಖೆಯ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಮ್ಮಿಕೊಂಡಿದ್ದ ತಪಾಸಣೆಗೆ ಅವರು ಒಳಗಾಗಲಿಲ್ಲ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದ ಮುಖ್ಯಮಂತ್ರಿ ಅವರನ್ನು ಜ್ವರ ಪತ್ತೆ ಮಾಡುವ ಸಾಧನದ ಮೂಲಕ ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಆದರೆ, ತಪಾಸಣೆಗೆ ಒಳಗಾಗದೆ ಅವರು ಅಲ್ಲಿಂದ ತೆರಳಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಹಿರಿಯೂರಿನಲ್ಲಿ ನಡೆದ ವಿವಾಹವೊಂದರಲ್ಲಿ ಭಾಗವಹಿಸಿರುವುದು ಕೂಡ ಸದ್ಯದ ಸಂದರ್ಭದಲ್ಲಿ ಅಪೇಕ್ಷಣೀಯವಲ್ಲ. ಮೂರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎನ್ನಲಾದ ಆ ಮದುವೆ ಕೂಡ ಪ್ರಸಕ್ತ ನಿರ್ಬಂಧಗಳ ಉಲ್ಲಂಘನೆಯೇ ಆಗಿದೆ. ನೂರಕ್ಕೂ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳನ್ನು ನಡೆಸಬಾರದು ಎನ್ನುವ ಆದೇಶ ಹೊರಡಿಸಿದ ಸರ್ಕಾರವೇ ಅಂಥ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ಕಲ್ಪಿಸುವುದು ಹಾಗೂ ಮುಖ್ಯಮಂತ್ರಿ ಆಗಿರುವವರು ಹಾಗೂ ಪ್ರಧಾನಿಯಂತಹ ಜವಾಬ್ದಾರಿ ಸ್ಥಾನ ನಿರ್ವಹಿಸಿದವರು ಅವುಗಳಲ್ಲಿ ಭಾಗವಹಿಸಿರುವುದು ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ. ಈ ಹಿನ್ನೆಲೆಯಲ್ಲಿ, ಕಲಬುರ್ಗಿಯಲ್ಲಿ ನಡೆದ ಶರಣಬಸವೇಶ್ವರ ಜಾತ್ರೆಯನ್ನೂ ನೆನಪಿಸಿಕೊಳ್ಳಬೇಕು. ಕೊರೊನಾ ಸೋಂಕಿನ ಕಾರಣಕ್ಕಾಗಿ ದೇಶದಲ್ಲಿ ಮೊದಲ ಸಾವು ಮಾರ್ಚ್‌ 12ರಂದು ಕಲಬುರ್ಗಿಯಲ್ಲಿ ಸಂಭವಿಸಿದೆ. ಆ ಸಾವು ಕಲಬುರ್ಗಿ ಪರಿಸರದಲ್ಲಿ ಆತಂಕ ಸೃಷ್ಟಿಸಿದೆ. ಪರಿಸ್ಥಿತಿ ಸೂಕ್ಷ್ಮವಾದುದರಿಂದಲೇ ಜಾತ್ರೆ ಮತ್ತು ಸಂತೆಗಳಿಗೆ ಸರ್ಕಾರ ನಿಷೇಧ ಹೇರಿದೆ. ಆ ನಿರ್ಬಂಧವನ್ನು ಉಲ್ಲಂಘಿಸಿ ಕಲಬುರ್ಗಿಯಲ್ಲಿ ಶರಣಬಸವೇಶ್ವರ ರಥೋತ್ಸವ ನಡೆದಿದೆ, ಆ ಉತ್ಸವದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದಾರೆ.

ಸರ್ಕಾರಿ ಆದೇಶವನ್ನು ಮೀರುವುದರೊಂದಿಗೆ, ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ವೈರಾಣುವಿನ ವಿಷಯದಲ್ಲಿ ತೋರಿರುವ ನಿರ್ಲಕ್ಷ್ಯ ಗಾಬರಿಹುಟ್ಟಿಸುವಂತಹದ್ದು. ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ, ಆ ವ್ಯಕ್ತಿ ಭೇಟಿ ಮಾಡಿರುವ ಜನರನ್ನೆಲ್ಲ ತಪಾಸಣೆ ಮಾಡಬೇಕಾದ ಸಂದರ್ಭವಿರುವಾಗ, ಸಾವಿರಾರು ಜನರು ಒಂದೆಡೆ ಸೇರಲು ಅವಕಾಶ ಕಲ್ಪಿಸುವುದು ಅಪಾಯಕ್ಕೆ ಎಡೆಮಾಡಿಕೊಟ್ಟಂತೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ತಮ್ಮ ನಡವಳಿಕೆಗೆ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವುದು ಸದ್ಯದ ಅವಶ್ಯಕತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು