ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಡೆಂಗಿ ಪ್ರಕರಣಗಳ ಉಲ್ಬಣ, ಆಡಳಿತ ಯಂತ್ರಕ್ಕೆ ಮದ್ದು ಬೇಕಿದೆ

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಡೆಂಗಿ ಪ್ರಕರಣಗಳು ರಾಜ್ಯದಲ್ಲಿ ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗಿರುವುದಕ್ಕೆ ಆರೋಗ್ಯ ಇಲಾಖೆ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರ ಸ್ಥಳೀಯ ಆಡಳಿತಗಳು ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದೇ ಕಾರಣ. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ರೋಗವನ್ನು ನಿಯಂತ್ರಿಸುವ ಹೊಣೆಗಾರಿಕೆ ನಿಭಾಯಿಸಬೇಕಾದವರು ಅಂಕಿಅಂಶಗಳನ್ನು ಕಲೆಹಾಕುವುದಷ್ಟಕ್ಕೆ ತಮ್ಮ ಜವಾಬ್ದಾರಿ ಸೀಮಿತಗೊಳಿಸಿಕೊಂಡಿದ್ದಾರೆ; ಚಿಕಿತ್ಸೆಗಿಂತಲೂ ರೋಗವನ್ನು ನಿಯಂತ್ರಿಸುವುದೇ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಮರೆತಿದ್ದಾರೆ. ಕೆಲವು ದಿನಗಳ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ; 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಶ್ವದ ಮೂರನೇ ಒಂದರಷ್ಟು ಡೆಂಗಿ ಪ್ರಕರಣಗಳು ಭಾರತದಲ್ಲಿ ವರದಿಯಾಗುತ್ತಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕೆಲವು ದಿನಗಳಿಂದ ಡೆಂಗಿ ಪ್ರಕರಣಗಳ ಸಂಖ್ಯೆ ಏರುಮುಖವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಹೀಗೆ ಒಂದೇ ಸಮನೆ ಡೆಂಗಿ ಪ್ರಕರಣಗಳು ಏರುತ್ತಿದ್ದರೂ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಇನ್ನೂ ಪೂರ್ಣಪ್ರಮಾಣದಲ್ಲಿ ಎಚ್ಚರಗೊಂಡಂತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜುಲೈನಲ್ಲಿ 1,649 ಹಾಗೂ ಆಗಸ್ಟ್‌ನಲ್ಲಿ 1,589 ಪ್ರಕರಣಗಳು ಪತ್ತೆಯಾಗಿವೆ. 2022ರಲ್ಲಿ ಒಟ್ಟು 9,529 ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಜ್ವರದ ತೀವ್ರ ಬಾಧೆಯಿಂದ 9 ಮಂದಿ ಮರಣಹೊಂದಿದ್ದರು. 2023ರಲ್ಲಿ ಸೆಪ್ಟೆಂಬರ್‌ ಮೊದಲ ವಾರದ ವೇಳೆಗಾಗಲೇ 8,563 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಮೈಸೂರು, ಉಡುಪಿ, ದಕ್ಷಿಣ ಕನ್ನಡ, ಕಲಬುರಗಿ, ವಿಜಯಪುರ, ಚಿತ್ರದುರ್ಗ, ಬೆಳಗಾವಿ, ಹಾಸನ, ದಾವಣಗೆರೆ, ತುಮಕೂರು, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡೆಂಗಿ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ.

ಕೋವಿಡ್‌–19 ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿಯೇ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ವೈಫಲ್ಯ ಸ್ಪಷ್ಟವಾಗಿ ಗೋಚರಿಸಿತ್ತು. ಕೋವಿಡ್‌ನಿಂದ ಸರ್ಕಾರಿ ಸಂಸ್ಥೆಗಳು ಪಾಠ ಕಲಿತಿಲ್ಲ ಎನ್ನುವುದನ್ನು ಈಗಿನ ಡೆಂಗಿ ಬಿಕ್ಕಟ್ಟು ಹೇಳುವಂತಿದೆ. ಮಳೆ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳ ಸಂತತಿ ಉಲ್ಬಣಗೊಂಡು ಡೆಂಗಿ ವ್ಯಾಪಕವಾಗುತ್ತಿದೆ. ರಸ್ತೆಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದರೆ ಅದರ ಹೊಣೆ ಯಾರದು? ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಈ ಪ್ರಶ್ನೆಗಳು ತಮಗೆ ಸಂಬಂಧಿಸಿದವಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಭಾವಿಸಿದಂತಿದ್ದಾರೆ. ಬೆಂಗಳೂರಂತೂ ಡೆಂಗಿ ಜ್ವರದ ರಾಜಧಾನಿ ಎನ್ನುವ ಕುಖ್ಯಾತಿ ‍ಪಡೆಯಲು ಸ್ಪರ್ಧೆ ನಡೆಸುತ್ತಿರುವಂತಿದೆ. ಡೆಂಗಿ ಪ್ರಕರಣಗಳ ಸಂಖ್ಯೆಯನ್ನು ಕಲೆ ಹಾಕುವುದಷ್ಟೇ ತನ್ನ ಕೆಲಸ ಎಂದು ಬಿಬಿಎಂಪಿ ಭಾವಿಸಿದಂತಿದೆ. ಡೆಂಗಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಪ್ರದೇಶಗಳಲ್ಲಿ ಔಷಧಿ ಸಿಂಪರಿಸಲು ಬಿಬಿಎಂಪಿ ಹಿಂದೆಮುಂದೆ ನೋಡುತ್ತಿದೆ. ಚರಂಡಿ ಹಾಗೂ ಮೋರಿಗಳನ್ನು ಸುವ್ಯವಸ್ಥೆಯಲ್ಲಿಡಲು ವಿಫಲವಾಗಿರುವ ಪಾಲಿಕೆ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದೆ. ಪಾಲಿಕೆಯಂತೆಯೇ ಆರೋಗ್ಯ ಇಲಾಖೆಯಲ್ಲಿಯೂ ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸುವ ಬಗ್ಗೆ ಯೋಜನೆಗಳಿದ್ದಂತಿಲ್ಲ. ಡೆಂಗಿ ಬಾಧಿತರು ಆಸ್ಪತ್ರೆಗಳ ವೆಚ್ಚ ಭರಿಸಲು ಒದ್ದಾಡುತ್ತಿದ್ದಾರೆ. ಆಸ್ಪತ್ರೆಗಳ ದುಬಾರಿ ಬಿಲ್‌ಗೆ ಹೆದರಿ, ಸ್ವಯಂ ಚಿಕಿತ್ಸಾಕ್ರಮಗಳಿಗೆ ಕೆಲವರು ಮುಂದಾಗುವ ಸ್ಥಿತಿಯನ್ನು ವೈದ್ಯಕೀಯ ವ್ಯವಸ್ಥೆಯೇ ಸೃಷ್ಟಿಸಿದೆ. ‘ಡೆಂಗಿ ಬಗ್ಗೆ ಭಯ ಬೇಡ, ಜಾಗ್ರತೆ ಇರಲಿ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಜನರಿಗೆ ನಿಜವಾದ ಭಯ ಇರುವುದು ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದ ಆಡಳಿತಯಂತ್ರದ ಬಗ್ಗೆ. ಜಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಸೊಳ್ಳೆಗಳ ನಿಯಂತ್ರಣ ಸೇರಿದಂತೆ ಪರಿಸರವನ್ನು ಚೊಕ್ಕಟವಾಗಿಡುವ ಅಗತ್ಯದ ಕುರಿತು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಆಂದೋಲನದ ರೂಪದಲ್ಲಿ ಕೈಗೊಳ್ಳಬೇಕಾಗಿದೆ. ಡೆಂಗಿ ನಿಯಂತ್ರಣಕ್ಕೆ ತಂತ್ರಜ್ಞಾನದ ನೆರವು ಪಡೆಯುವ ಸರ್ಕಾರದ ಉದ್ದೇಶ ಒಳ್ಳೆಯದು. ಈ ನಿಟ್ಟಿನಲ್ಲಿ, ಡೆಂಗಿ ರೋಗ ನಿಯಂತ್ರಣ ಹಾಗೂ ನಿರ್ವಹಣೆಗೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯು ಡ್ಯಾಶ್‌ಬೋರ್ಡ್‌ ಹಾಗೂ ಮೊಬೈಲ್ ಅಪ್ಲಿಕೇಷನ್‌ ಅಭಿವೃದ್ಧಿ‍ಪಡಿಸಿವೆ. ಈ ತಂತ್ರಜ್ಞಾನದಿಂದ ರೋಗದ ಮುನ್ಸೂಚನೆ ಮತ್ತು ವಿಶ್ಲೇಷಣೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ತಂತ್ರಜ್ಞಾನ ಎಷ್ಟೇ ಅತ್ಯುತ್ತಮವಾಗಿದ್ದರೂ, ಅಧಿಕಾರಿಗಳ ಜಡತ್ವ ಏನನ್ನು ಬೇಕಾದರೂ ತುಕ್ಕುಹಿಡಿಯುವಂತೆ ಮಾಡಬಲ್ಲದು ಎನ್ನುವುದನ್ನು ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT