ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪರೀಕ್ಷಾ ಅಕ್ರಮ ತಡೆಯಲು ಮಸೂದೆ– ಕಳಕಳಿಯ ಪರಿಣಾಮವಾಗಿ ಬಂದ ಕಾನೂನು

ಸಂಪಾದಕೀಯ
Published 23 ಫೆಬ್ರುವರಿ 2024, 19:31 IST
Last Updated 23 ಫೆಬ್ರುವರಿ 2024, 19:31 IST
ಅಕ್ಷರ ಗಾತ್ರ

ದೇಶದಲ್ಲಿನ ಪರೀಕ್ಷಾ ವ್ಯವಸ್ಥೆಗೆ ಬೆದರಿಕೆಯಾಗಿ ಪರಿಣಮಿಸಿರುವ ಸಮಸ್ಯೆಯೊಂದನ್ನು ನಿವಾರಿಸುವ ಉದ್ದೇಶದಿಂದ, ಈಚೆಗೆ ಮುಕ್ತಾಯಗೊಂಡ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪರೀಕ್ಷೆಗಳ (ಅಕ್ರಮಗಳ ನಿಯಂತ್ರಣ) ಮಸೂದೆಗೆ ಅಂಗೀಕಾರ ದೊರೆತಿದೆ. ಪರೀಕ್ಷೆಗಳಲ್ಲಿ ಅಕ್ರಮವನ್ನು ಹತ್ತಿಕ್ಕಲು ರಾಜ್ಯಗಳಿಗೆ ಮಾದರಿ ಮಸೂದೆಯಾಗಿ ಕೇಂದ್ರ ಸರ್ಕಾರವು ಈ ಮಸೂದೆಯನ್ನು ರೂಪಿಸಿದೆ. ಕೆಲವು ರಾಜ್ಯಗಳಲ್ಲಿ ಇದೇ ಉದ್ದೇಶದ ಪ್ರತ್ಯೇಕ ಕಾನೂನುಗಳು ಜಾರಿಯಲ್ಲಿವೆ. ಆದರೆ ಕೇಂದ್ರ ಸರ್ಕಾರ ರೂಪಿಸಿರುವ ಮಸೂದೆಯು ರಾಜ್ಯಗಳಿಗೆ ಪರೀಕ್ಷಾ ಅಕ್ರಮಗಳನ್ನು ಹತ್ತಿಕ್ಕಲು ದೊಡ್ಡ ಮಟ್ಟದಲ್ಲಿ ನೆರವಾಗುವ ನಿರೀಕ್ಷೆ ಇದೆ. ಸರ್ಕಾರದ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ‘ಅಕ್ರಮ’ಗಳನ್ನು ತಡೆಯುವುದು, ಪರೀಕ್ಷೆಗಳಲ್ಲಿ ಇನ್ನಷ್ಟು ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ತರುವುದು ಮಸೂದೆಯ ಉದ್ದೇಶ. ಈ ಉದ್ದೇಶಗಳು ಈಡೇರಿದಾಗ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳು ಸಿಕ್ಕಂತಾಗುತ್ತದೆ.
ಶಿಕ್ಷಣ ಕ್ಷೇತ್ರದ ಎಲ್ಲ ಪರೀಕ್ಷೆಗಳು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಆಯೋಜಿಸುವ ಪ್ರವೇಶ ಪರೀಕ್ಷೆಗಳು, ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ರೈಲ್ವೆ ಮತ್ತು ರಕ್ಷಣಾ ಇಲಾಖೆಗಳು ನಡೆಸುವ ಪರೀಕ್ಷೆಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ. ಅಲ್ಲದೆ, ಬ್ಯಾಂಕಿಂಗ್ ನೇಮಕಾತಿ ಸಂಸ್ಥೆ ನಡೆಸುವ ಪರೀಕ್ಷೆಗಳು ಕೂಡ ಇದರ ವ್ಯಾಪ್ತಿಗೆ ಬರುತ್ತವೆ.

ಪರೀಕ್ಷೆಗಳಲ್ಲಿ ನಕಲು, ಅಕ್ರಮ ನಡೆದ ವರದಿಗಳು ದೇಶದ ಎಲ್ಲ ಕಡೆಗಳಿಂದಲೂ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಇಂತಹ ಕೃತ್ಯಗಳ ಹಿಂದೆ ರಾಜಕೀಯ ಆಯಾಮಗಳೂ ಇರುತ್ತವೆ. ಪ್ರಶ್ನೆಪತ್ರಿಕೆಯ ಸೋರಿಕೆ ಹಾಗೂ ಇತರ ಪರೀಕ್ಷಾ ಅಕ್ರಮಗಳು ವರದಿಯಾದಾಗ ಆಡಳಿತಾರೂಢ ಪಕ್ಷವು ಅದಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸುತ್ತವೆ. ಕಳೆದ ಐದು ವರ್ಷಗಳಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಕನಿಷ್ಠ 41 ಪ್ರಕರಣಗಳು 15 ರಾಜ್ಯಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಗಳಿಗೆ ಅಡ್ಡಿಯಾಗಿ ಪರಿಣಮಿಸಿವೆ. ಇದರಿಂದಾಗಿ ಅಂದಾಜು ಒಂದು ಲಕ್ಷ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ 1.4 ಕೋಟಿ ಅಭ್ಯರ್ಥಿಗಳಿಗೆ ತೊಂದರೆ ಆಗಿದೆ. ಕೆಲವು ಪ್ರಕರಣಗಳಲ್ಲಿ, ಅಕ್ರಮಗಳ ಕಾರಣದಿಂದಾಗಿ ರದ್ದಾದ ಪರೀಕ್ಷೆಗಳು ತಿಂಗಳುಗಳು ಕಳೆದರೂ ಮತ್ತೆ ನಡೆದಿಲ್ಲ. ಅಂಗೀಕಾರ ಪಡೆದಿರುವ ಮಸೂದೆಯು ಒಟ್ಟು 15 ಬಗೆಯ ಕೃತ್ಯಗಳನ್ನು ‘ಅಕ್ರಮ’ ಎಂದು ಗುರುತಿಸಿದೆ. ಇವುಗಳಲ್ಲಿ ಪ್ರಶ್ನೆಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆಗಳ ಸೋರಿಕೆ ಕೂಡ ಸೇರಿವೆ. ತಪ್ಪು ಎಸಗಿದವರಿಗೆ ಗರಿಷ್ಠ 10 ವರ್ಷಗಳ ಜೈಲುಶಿಕ್ಷೆ ಮತ್ತು ₹ 1 ಕೋಟಿ ದಂಡ ವಿಧಿಸಲು ಅವಕಾಶ ಇದೆ. ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಸಂಘಟಿತ ಯತ್ನವೊಂದು ನಡೆದಿದ್ದರೆ ಅದಕ್ಕೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿ ಇದೆ. ಮಸೂದೆಯು ವ್ಯಾಖ್ಯಾನಿಸಿರುವ ಅಪರಾಧಗಳು ಜಾಮೀನುರಹಿತವಾಗಿರುತ್ತವೆ, ಗಂಭೀರ ಸ್ವರೂಪದ್ದು ಎಂದು ಪರಿಗಣಿತವಾಗುತ್ತವೆ. ವಾರಂಟ್ ಇಲ್ಲದೆಯೇ ಪೊಲೀಸರು ಕ್ರಮಕ್ಕೆ ಮುಂದಾಗಬಹುದು, ಅಪರಾಧ ಎಸಗಿದವರು ಮಾತುಕತೆಯ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ.

ಇವು ಕಠಿಣ ಕ್ರಮಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪರೀಕ್ಷೆಗಳಲ್ಲಿ ನಡೆಯುವ
ಅಕ್ರಮಗಳನ್ನು ಅಪರಾಧ ಮತ್ತು ಶಿಕ್ಷೆ ಎಂಬ ಎರಡೇ ಆಯಾಮಗಳಿಂದ ನೋಡಬೇಕಿಲ್ಲ. ಸಮಾಜದ ನೈತಿಕತೆಯಲ್ಲಿ ಕಂಡುಬಂದಿರುವ ಕುಸಿತದ ಲಕ್ಷಣಗಳಲ್ಲಿ ಇದು ಕೂಡ ಒಂದು ಎಂದು ಕಾಣಬೇಕು. ತಮ್ಮ ಗುರಿಯನ್ನು ಸಾಧಿಸಿಕೊಳ್ಳಲು ಕೆಲವರು ಯಾವ ಹಾದಿಯನ್ನೂ ತುಳಿಯಲು ಸಿದ್ಧರಾಗಿರುವ ಕಾರಣದಿಂದಾಗಿ ಇಂತಹ ಅಕ್ರಮಗಳು ನಡೆಯುತ್ತವೆ. ವ್ಯಾಪಕವಾಗಿರುವ ನಿರುದ್ಯೋಗ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳಲು ನಡೆಯುವ ಸ್ಪರ್ಧೆಯನ್ನು ಈ ಅಕ್ರಮಗಳು ತೋರಿಸುತ್ತವೆ. ದೇಶದ ಅರ್ಥ ವ್ಯವಸ್ಥೆ ಮತ್ತು ಸಮಾಜವು ಎಲ್ಲರಿಗೂ ಬೇಕಿರುವಷ್ಟು ಅವಕಾಶಗಳನ್ನು ಒದಗಿಸಲು
ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯು ಕ್ರಿಮಿನಲ್ ಅಪರಾಧಗಳನ್ನು ಎಸಗುವುದಕ್ಕೆ ಮತ್ತು ಅನೈತಿಕ ಹಾದಿ ತುಳಿಯುವುದಕ್ಕೆ ದಾರಿ ಮಾಡಿಕೊಡುವಂತೆ ಇದೆ. ಪರೀಕ್ಷೆಗಳಲ್ಲಿ ಅಕ್ರಮಗಳು ದೇಶದ ಯುವಕರನ್ನು ಹೆಚ್ಚಾಗಿ ಬಾಧಿಸುತ್ತವೆ. ಹೀಗಾಗಿಯೇ ಸರ್ಕಾರಗಳು ಈ ವಿಚಾರದಲ್ಲಿ ಅವರ ಬಗ್ಗೆ ಹೆಚ್ಚು ಕಳಕಳಿ ಹೊಂದಿರಬೇಕು. ಈ ಕಳಕಳಿಯ ಪರಿಣಾಮವಾಗಿ ಈ ಮಸೂದೆ ರೂಪುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT