ಭಾನುವಾರ, ಜನವರಿ 19, 2020
23 °C

‘ಸಪ್ತಪದಿ’ ಸಾಮೂಹಿಕ ವಿವಾಹ; ವೆಚ್ಚದ ಹೊರೆ ಇಳಿಸುವ ಉಪಕ್ರಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮವು ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮವಾದ ಉಪಕ್ರಮ. ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡುವ, ಅಧಿಕ ಆದಾಯವಿರುವ ‘ಎ’ ದರ್ಜೆಯ 100 ದೇವಸ್ಥಾನಗಳಲ್ಲಿ ಏಪ್ರಿಲ್‌ 26 ಮತ್ತು ಮೇ 24ರಂದು ಈ ವಿವಾಹಗಳು ಜರುಗಲಿವೆ. ಈ ವರ್ಷ ಈ ಕಾರ್ಯಕ್ರಮದಲ್ಲಿ ಒಂದು ಸಾವಿರ ಜೋಡಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ. ವಧು– ವರನ ಒಡವೆ, ವಸ್ತ್ರಕ್ಕಾಗಿ ಇಲಾಖೆಯು ಜೋಡಿಗೆ ತಲಾ ₹ 55 ಸಾವಿರ ಖರ್ಚು ಮಾಡಲು ಉದ್ದೇಶಿಸಿದೆ. ಮದುವೆಯನ್ನು ಆಡಂಬರದಿಂದ ಮಾಡುವುದರಿಂದ ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಭಾವಿಸುವವರೇ ನಮ್ಮಲ್ಲಿ ಹೆಚ್ಚು. ವೈಭವಯುತ ಮದುವೆಗೆ ಸಾಮರ್ಥ್ಯ ಮೀರಿ ಖರ್ಚು ಮಾಡಿ ಸಾಲದ ಸುಳಿಗೆ ಸಿಲುಕುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲ. ಸರಳ ವಿವಾಹಗಳ ಬಗ್ಗೆ ವಿಚಾರವಂತರು ಎಷ್ಟೇ ತಿಳಿಹೇಳಿದರೂ ನಿರೀಕ್ಷಿತ ಫಲ ದೊರೆತಿಲ್ಲ.

ಈಗ ಸರಳ ವಿವಾಹಕ್ಕೆ ಉತ್ತೇಜನ ನೀಡಲು ಸರ್ಕಾರವೇ ಮುಂದಾಗಿರುವುದು ಸ್ತುತ್ಯರ್ಹ. ‘ದೇವಾಲಯಗಳ ಹಣವನ್ನು ಬಳಕೆ ಮಾಡಿಕೊಂಡು ಈಗ ಹಿಂದೂಗಳಿಗೆ ಮಾತ್ರ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತಿದೆ. ಅದೇ ರೀತಿ ಇತರ ಧರ್ಮದವರು ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಇರುವ ಹಣವನ್ನು ಬಳಸಿಕೊಂಡು ಸಾಮೂಹಿಕ ವಿವಾಹ ನಡೆಸಲು ಮುಂದಾದರೆ, ಅಗತ್ಯ ಅನುಮತಿ ಮತ್ತು ಸಹಕಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಪ್ರಕಟಿಸಿರುವುದು ಕೃತಿಗಿಳಿಯುವುದು ಅಗತ್ಯ. ಹೆಣ್ಣು ಹೆತ್ತ ಬಡ ಪೋಷಕರಿಗೆ ಮದುವೆ ಎಂಬುದು ಇಂದಿಗೂ ಹೊರೆಯಾಗಿಯೇ ಪರಿಣಮಿಸಿರುವುದು ವ್ಯವಸ್ಥೆಯ ಜಡತ್ವಕ್ಕೆ ಕನ್ನಡಿ ಹಿಡಿಯುತ್ತದೆ. ವಿವಾಹದ ವಿಚಾರದಲ್ಲಿ ನಮ್ಮ ಮನೋಧೋರಣೆ ಬದಲಾಗಬೇಕಾದ ಅನಿವಾರ್ಯವನ್ನೂ ಸೂಚಿಸುತ್ತದೆ.

ಕೆಲವು ದೇವಸ್ಥಾನಗಳು, ಸಂಘ– ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುತ್ತವಾದರೂ ಅವುಗಳ ವ್ಯಾಪ್ತಿ ಸೀಮಿತ. ಸರ್ಕಾರವೇ ಮುಂದೆ ನಿಂತು ಸರಳ ವಿವಾಹಗಳನ್ನು ಮಾಡಿಸಿದರೆ ಅಂತಹ ಪ್ರಯತ್ನ ಎಲ್ಲರನ್ನೂ ತಲುಪುವ ಸಾಧ್ಯತೆ ಹೆಚ್ಚು. ಈಗಿನ ಸಾಮಾಜಿಕ– ಆರ್ಥಿಕ ಸ್ಥಿತಿಯಲ್ಲಿ ಅಪೇಕ್ಷಣೀಯವೂ ಹೌದು. ಆದರೆ, ಸಂಘ– ಸಂಸ್ಥೆಗಳು ನಡೆಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಬಾಲ್ಯವಿವಾಹಗಳು ನಡೆದಿರುವ ನಿದರ್ಶನಗಳೂ ಬೆಳಕಿಗೆ ಬಂದಿವೆ.

‘ಸಪ್ತಪದಿ’ಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆಯಾದರೂ ಅದರ ಅನುಷ್ಠಾನದಲ್ಲಿ ಅಷ್ಟೇ ಬದ್ಧತೆಯನ್ನು ಅಧಿಕಾರಿವರ್ಗ ತೋರಬೇಕಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಮದುವೆ ಆಗಬಯಸುವವರಿಗೆ ಸರ್ಕಾರವು 24 ಷರತ್ತುಗಳನ್ನು ವಿಧಿಸಿದೆ. ಇಲ್ಲಿ ನಡೆಯುವ ಮದುವೆಗೆ ಎರಡೂ ಕಡೆಯ ಪೋಷಕರ ಒಪ್ಪಿಗೆ ಕಡ್ಡಾಯ ಎಂಬುದು ಅದರಲ್ಲಿ ಒಂದು. ಈ ಷರತ್ತಿನ ಔಚಿತ್ಯದ ಬಗ್ಗೆ ಕೆಲವರು ಪ್ರಶ್ನಿಸಿದ್ದಾರೆ. ಮದುವೆಗೆ ನಿಗದಿಪಡಿಸಿದ ವಯಸ್ಸು ತುಂಬಿರುವ ಯುವಕ–ಯುವತಿಯರ ವಿವಾಹಕ್ಕೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಿರುವುದು ಎಷ್ಟು ಸರಿ ಎಂಬುದು ಪ್ರಶ್ನೆ. ತಾನು ಮದುವೆ ಆಗಬಯಸಿದ ಹುಡುಗ ಅಥವಾ ಹುಡುಗಿಯನ್ನು ಪೋಷಕರು ಒಪ್ಪದಿರುವ ಕಾರಣಕ್ಕೆ ಆ ಜೋಡಿಯನ್ನು ಈ ಕಾರ್ಯಕ್ರಮದಿಂದ ಹೊರಗಿಟ್ಟರೆ, ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಆ ಯುವಕ, ಯುವತಿಯ ಹಕ್ಕಿಗೆ ಧಕ್ಕೆ ತಂದಂತೆ ಆಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಎರಡನೇ ಮದುವೆಗೂ ಇಲ್ಲಿ ಆಸ್ಪದ ಇಲ್ಲ. ಮೊದಲ ಮದುವೆಯಲ್ಲಿ ಕಾನೂನಿನ ಅನುಸಾರ ವಿಚ್ಛೇದನ ಪಡೆದಿದ್ದರೆ, ಗಂಡ ಅಥವಾ ಹೆಂಡತಿ ಸಹಜವಾಗಿ ಸಾವನ್ನಪ್ಪಿದ ಕಾರಣಕ್ಕೆ ಮತ್ತೊಂದು ಮದುವೆ ಆಗಬಯಸಿದ್ದರೆ, ಅಂತಹವರು ಇಲ್ಲಿ ಸರಳವಾಗಿ ಮರು ಮದುವೆಯಾಗುವುದಕ್ಕೆ ಅನುಮತಿ ಕೊಡುವುದರಲ್ಲಿ ತಪ್ಪೇನಿದೆ ಎಂಬ ವಾದವೂ ಇದೆ. ಇಂತಹ ಕೆಲವು ಷರತ್ತುಗಳ ಬಗ್ಗೆ ಮರುಚಿಂತನೆ ನಡೆಸುವುದು ಅಗತ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು