ಬಿಪೊರ್‌ಜಾಯ್ ಚಂಡಮಾರುತದ ಕೆಟ್ಟ ಪರಿಣಾಮಗಳನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೆಚ್ಚುಗೆಗೆ ಅರ್ಹವಾದ ಕೆಲಸಗಳನ್ನು ಮಾಡಿವೆ. ಈ ಚಂಡಮಾರುತವು ಗುಜರಾತ್ ಹಾಗೂ ರಾಜಸ್ಥಾನದ ಕೆಲವು ಪ್ರದೇಶಗಳಿಗೆ ಕೆಲವು ದಿನಗಳ ಹಿಂದಷ್ಟೇ ಅಪ್ಪಳಿಸಿದೆ. ಚಂಡಮಾರುತವು ಈ ಎರಡು ರಾಜ್ಯಗಳಲ್ಲಿನ ಮೂಲಸೌಕರ್ಯ ವ್ಯವಸ್ಥೆಗೆ ಹಾನಿ ಉಂಟುಮಾಡಿದೆ. ಅಲ್ಲದೆ, ಅಲ್ಲಿನ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಗೂ ದೂರಸಂಪರ್ಕ ವ್ಯವಸ್ಥೆಯನ್ನು ಬಹಳಷ್ಟು ಹಾಳು ಮಾಡಿದೆ. ಆದರೆ ಚಂಡಮಾರುತ ಅಪ್ಪಳಿಸುವ ಮೊದಲು ಸರ್ಕಾರಗಳು ಕೈಗೊಂಡ ಮುನ್ನೆಚ್ಚರಿಕೆಯ ಕ್ರಮಗಳು ಜೀವ ಹಾನಿಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿವೆ. ಚಂಡಮಾರುತದ ಪ್ರಭಾವ ತೀವ್ರವಾಗಿದ್ದ ಪ್ರದೇಶಗಳಲ್ಲಿ ಮನೆಗಳಿಗೆ, ಇತರ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ. ಅತ್ಯಂತ ತೀವ್ರವಾದ ಚಂಡಮಾರುತವೊಂದನ್ನು ಕಂಡ ಪ್ರದೇಶಗಳಲ್ಲಿ ಆಗಬಹುದಾಗಿದ್ದಕ್ಕಿಂತ ಬಹಳ ಕಡಿಮೆ ಪ್ರಮಾಣದ ಹಾನಿಯು ದಾಖಲಾಗಿದೆ. ಹಾನಿಯನ್ನು ಕನಿಷ್ಠ ಮಟ್ಟದಲ್ಲಿ ಇರಿಸಿದ ಶ್ರೇಯವು ಸಲ್ಲಬೇಕಿರುವುದು ವಿಕೋಪದ ಮುನ್ಸೂಚನೆಯನ್ನು ನೀಡುವ ವಿಚಾರದಲ್ಲಿ ಬಹಳಷ್ಟು ಮುನ್ನಡೆ ಸಾಧಿಸಿರುವ ಭಾರತೀಯ ಹವಾಮಾನ ಇಲಾಖೆಗೆ (ಐಎಂಡಿ). ಹಾಗೆಯೇ, ಅತ್ಯಂತ ತೀವ್ರ ಸ್ವರೂಪದ ವಿಕೋಪವೊಂದನ್ನು ನಿಭಾಯಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿರುವ ಇತರ ಹಲವು ಏಜೆನ್ಸಿಗಳಿಗೆ ಕೂಡ ಶ್ರೇಯದಲ್ಲಿ ಒಂದು ಪಾಲು ಸಲ್ಲಬೇಕು.

ಈಗ ಚಂಡಮಾರುತದ ಪ್ರಭಾವ ತಗ್ಗಿದೆ. ಚಂಡಮಾರುತ ಅಪ್ಪಳಿಸಿದ್ದ ಪಟ್ಟಣಗಳು ಹಾಗೂ ಹಳ್ಳಿಗಳು ಸಹಜ ಸ್ಥಿತಿಗೆ ಮರಳಲು ಆರಂಭಿಸಿವೆ. ಹೀಗಿದ್ದರೂ, ಅಲ್ಲಿ ಪುನರ್ವಸತಿ ಹಾಗೂ ಪರಿಹಾರ ಕ್ರಮಗಳನ್ನು ಪೂರ್ಣಗೊಳಿಸಲು ಇನ್ನೂ ಹಲವು ದಿನಗಳು ಬೇಕಾಗಬಹುದು. ಹವಾಮಾನ ಇಲಾಖೆಯು ಚಂಡಮಾರುತದ ಕುರಿತ ಮೊದಲ ಮುನ್ನೆಚ್ಚರಿಕೆಯನ್ನು ನೀಡಿದ್ದು ಜೂನ್ 8ರಂದು. ಜೂನ್ 11ರಂದು ಇನ್ನೊಂದು ವರದಿಯನ್ನು ನೀಡಿದ ಇಲಾಖೆಯು ಈ ಚಂಡಮಾರುತವು ಭಾರತದ ಭೂಭಾಗವನ್ನು ಅಪ್ಪಳಿಸುವುದು ಖಚಿತ ಎಂದು ಹೇಳಿತು. ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಹಾಗೂ ಕಚ್ ಪ್ರದೇಶಕ್ಕೆ ಹಾನಿ ಉಂಟುಮಾಡಬಹುದು ಎಂಬ ಮುನ್ಸೂಚನೆ ನೀಡಲಾಯಿತು. ಇದರಿಂದಾಗಿ, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಹಾಗೂ ವಿಪತ್ತೊಂದರ ನಿರ್ವಹಣೆಯ ಭಾಗವಾಗಿರುವ ಇನ್ನಿತರ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಸಮಯ ದೊರಕಿತು. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಯಿತು. ಸಹಸ್ರಾರು ಮಂದಿಯನ್ನು ಅಪಾಯದ ಸಾಧ್ಯತೆ ಇರುವ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ಆಶ್ರಯ ಕೇಂದ್ರಗಳಲ್ಲಿ ಆಹಾರ, ಔಷಧ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಯಿತು. ವಿಪತ್ತು ನಿರ್ವಹಣೆಯ ಭಾಗವಾಗಿರುವ ಎಲ್ಲ ಏಜೆನ್ಸಿಗಳು ಸಮನ್ವಯದಿಂದ ಕೆಲಸ ಮಾಡಿದವು, ಅಂದುಕೊಂಡ ಕೆಲಸವನ್ನು ದಕ್ಷವಾಗಿ ಅನುಷ್ಠಾನಕ್ಕೆ ತರಲಾಯಿತು.

1998ರಲ್ಲಿ ದೊಡ್ಡ ಚಂಡಮಾರುತವೊಂದು ಅಪ್ಪಳಿಸಿದಾಗ ಗುಜರಾತ್‌ನಲ್ಲಿ 10 ಸಾವಿರ ಜನ ಜೀವ ಕಳೆದುಕೊಂಡಿದ್ದರು. ಈ ಬಾರಿ ಜೀವಹಾನಿಯನ್ನು ಕನಿಷ್ಠ ಮಟ್ಟದಲ್ಲಿ ಇರಿಸಲಾಗಿದೆ. ಇದಕ್ಕೆ ಕಾರಣ, ಚಂಡಮಾರುತದ ಅಪಾಯಗಳನ್ನು ಎದುರಿಸುವಲ್ಲಿ ದೇಶವು ಗಳಿಸಿರುವ ಅನುಭವ. 1999ರಲ್ಲಿ ಒಡಿಶಾ ಕರಾವಳಿಗೆ ಭಾರಿ ಚಂಡಮಾರುತ ಅಪ್ಪಳಿಸಿದ್ದಾಗ 10 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಆದರೆ, ಆ ನಂತರದಲ್ಲಿ ದೇಶದಲ್ಲಿ ಚಂಡಮಾರುತಗಳನ್ನು ನಿಭಾಯಿಸುವ ವಿಚಾರದಲ್ಲಿ ಸುಧಾರಣೆಗಳು ಆಗಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಹಾಗೂ ಇತರ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚಂಡಮಾರುತಗಳನ್ನು ನಿಭಾಯಿಸುವಲ್ಲಿ ಒಡಿಶಾ ಮಾದರಿಯು ಇತರ ಕಡೆಗಳಲ್ಲಿಯೂ ಪರಿಣಾಮಕಾರಿ ಆಗಿದೆ. ಚಂಡಮಾರುತವೊಂದು ಬರಲಿದೆ ಎಂಬುದು ಗೊತ್ತಾದಾಗ, ಜನರನ್ನು ಇನ್ನೊಂದು ಪ್ರದೇಶಕ್ಕೆ ಕರೆದೊಯ್ಯುವುದು, ಅವರಿಗೆ ಅಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸುವುದು ಶಾಶ್ವತ ಕಾರ್ಯತಂತ್ರ ಆಗಬೇಕಾಗಿಲ್ಲ. ಅದರಲ್ಲೂ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಚಂಡಮಾರುತಗಳು ಹೆಚ್ಚಲಿವೆ ಎಂಬುದು ಸ್ಪಷ್ಟವಾಗಿರುವಾಗ ಬದಲಿ ಕಾರ್ಯತಂತ್ರದ ಕಡೆಯೂ ಗಮನ ನೀಡಬೇಕು. ಕರಾವಳಿ ಪ್ರದೇಶದ ನಿಯಂತ್ರಣಕ್ಕೆ ಇರುವ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ನಿರ್ಮಾಣ ಆಗುವ ಕಟ್ಟಡಗಳು ಚಂಡಮಾರುತದ ಪ್ರಭಾವವನ್ನು ತಾಳಿಕೊಳ್ಳುವಂತೆ ಇರಬೇಕು. ನಿಸರ್ಗ ಸಹಜ ತಡೆಗೋಡೆಯಾಗಿರುವ ಕಾಂಡ್ಲಾ ಕಾಡುಗಳನ್ನು ಬೆಳೆಸಲು ಹೆಚ್ಚಿನ ಗಮನ ನೀಡಬೇಕು. ಇವೆಲ್ಲ ವಿಪತ್ತು ನಿರ್ವಹಣೆ ಯೋಜನೆಯ ಭಾಗವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.