ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರದ್ದಾದ ಹುದ್ದೆಗೆ ಮುಂಬಡ್ತಿ– ತೀರ್ಮಾನದ ಮರುಪರಿಶೀಲನೆ ಆಗಲಿ

Published 24 ಆಗಸ್ಟ್ 2023, 0:19 IST
Last Updated 24 ಆಗಸ್ಟ್ 2023, 0:19 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನೌಕರರ ಸೇವಾ ವಿಷಯಗಳ ನಿರ್ವಹಣೆಗಾಗಿ ‘ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು–2019’ ಜಾರಿಯಲ್ಲಿದೆ. ಇಲಾಖೆಯ ನೌಕರರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಈ ನಿಯಮಗಳ ಅನುಸಾರವೇ ಇತ್ಯರ್ಥಪಡಿಸಬೇಕಿದೆ. ಈಗ ಜಾರಿಯಲ್ಲಿರುವ ಈ ನಿಯಮಗಳ ಅನುಸಾರ 2019ರಲ್ಲೇ ರದ್ದುಗೊಂಡಿರುವ ನಿಲಯ ಪಾಲಕರ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳನ್ನು ಸಚಿವ ಸಂಪುಟ ಸಭೆ ಹಾಗೂ ಆರ್ಥಿಕ ಇಲಾಖೆಯ ಒಪ್ಪಿಗೆ ಇಲ್ಲದೇ ಇಲಾಖಾ ಹಂತದ ನಿರ್ಧಾರದ ಮೂಲಕವೇ ಮರು ಸೃಜಿಸಿ, 312 ಮಂದಿ ನಿಲಯ ಮೇಲ್ವಿಚಾರಕರಿಗೆ ಮುಂಬಡ್ತಿ ನೀಡಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ಕಾಯ್ದೆ–1978ರ ಅಡಿಯಲ್ಲಿ ರೂಪಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ 2019ರ ಸೆಪ್ಟೆಂಬರ್‌ 30ರಿಂದಲೇ ನಿಲಯ ಪಾಲಕರ ಹುದ್ದೆಗಳನ್ನು ರದ್ದುಗೊಳಿಸಲಾಗಿತ್ತು. ಆಗ ಸೇವೆಯಲ್ಲಿದ್ದ 118 ಮಂದಿಯ ಹೊರತಾಗಿ ಈ ವೃಂದದ ಯಾವುದೇ ಹುದ್ದೆಯನ್ನು ಮುಂಬಡ್ತಿ ಅಥವಾ ನೇರ ನೇಮಕಾತಿ ಮೂಲಕ ಭರ್ತಿ ಮಾಡುವಂತಿಲ್ಲ ಎಂಬ ಷರತ್ತು ನಿಯಮಗಳಲ್ಲಿದೆ. ಸಾಮಾನ್ಯ ಸಂದರ್ಭಗಳಲ್ಲಿ ಸರ್ಕಾರಿ ನೌಕರರ ಬಡ್ತಿ ಪ್ರಕ್ರಿಯೆಯಲ್ಲಿ ಅನುಸರಿಸುವ ಕ್ರಮಗಳನ್ನು ಪಾಲಿಸದೇ ಈಗ ಜಾರಿಯಲ್ಲಿರುವ ಸೇವಾ ನಿಯಮಗಳಿಗೆ ವಿರುದ್ಧವಾಗಿ ತರಾತುರಿಯಲ್ಲಿ ನಿಲಯ ಪಾಲಕರ ಹುದ್ದೆಗಳನ್ನು ಮರು ಸೃಜಿಸಿ 312 ಮಂದಿಗೆ ಬಡ್ತಿ ನೀಡಿರುವ ಪ್ರಕ್ರಿಯೆಯು ಸಂಶಯಕ್ಕೆ ಎಡೆಮಾಡುವಂತಿದೆ. ಇಲಾಖೆಯ ಕಡತ ನಿರ್ವಹಣೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದರೂ ನಿಲಯ ಮೇಲ್ವಿಚಾರಕರ ಬಡ್ತಿಗೆ ಸಂಬಂಧಿಸಿದ ಕಡತವನ್ನು ಇ–ಕಚೇರಿಯಲ್ಲಿ ನಿರ್ವಹಿಸದೇ ಭೌತಿಕ ಕಡತಗಳಲ್ಲಿ ಮಂಡಿಸಿ, ಅನುಮೋದನೆ ನೀಡಿರುವುದು ಅನುಮಾನಗಳನ್ನು ಹೆಚ್ಚಿಸುವಂತಿದೆ. ಸಚಿವ ಸಂಪುಟದ ನಿರ್ಣಯದಂತೆ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ ರದ್ದುಗೊಳಿಸಿದ ಹುದ್ದೆಗಳನ್ನು ಇಲಾಖಾ ಹಂತದಲ್ಲೇ ಮರು ಸೃಜಿಸಿ, ಬಡ್ತಿ ನೀಡಿರುವ ಕ್ರಮವು ಕಾನೂನಾತ್ಮಕವಾಗಿ ಸರಿಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಮುನ್ನ ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇಲಾಖಾ ಮುಂಬಡ್ತಿ ಸಮಿತಿಯು ನಿರ್ದಿಷ್ಟ ವೃಂದದಲ್ಲಿ ಬಡ್ತಿಗೆ ಅರ್ಹರಾದ ನೌಕರರ ಪಟ್ಟಿಯನ್ನು ಸಿದ್ಧಪಡಿಸಿ ಅವರ ಸೇವಾ ಪುಸ್ತಕಗಳು ಮತ್ತು ಕನಿಷ್ಠ ಐದು ವರ್ಷಗಳ ರಹಸ್ಯ ವರದಿಗಳನ್ನು ಪಡೆಯಬೇಕಾಗುತ್ತದೆ. ಅವುಗಳ ಸಂಪೂರ್ಣ ಪರಿಶೀಲನೆಯ ಜತೆಗೆ ಜ್ಯೇಷ್ಠತಾ ಪಟ್ಟಿಯಲ್ಲಿರುವ ಪ್ರತಿ ನೌಕರನ ವಿರುದ್ಧದ ಇಲಾಖಾ ವಿಚಾರಣೆ, ದಂಡನೆಗೊಳಗಾಗಿದ್ದಲ್ಲಿ ಅಂತಹ ಪ್ರಕರಣದ ವಿವರ, ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಸಲ್ಲಿಸಿರುವುದು ಸೇರಿದಂತೆ ಹಲವು ಅಂಶಗಳ ಕುರಿತು ವಿಸ್ತೃತವಾದ ಪರಿಶೀಲನೆ ನಡೆಸಬೇಕಾಗುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ನೇತೃತ್ವದ ಇಲಾಖಾ ಮುಂಬಡ್ತಿ ಸಮಿತಿಯು 312 ನಿಲಯ ಮೇಲ್ವಿಚಾರಕರಿಗೆ ನಿಲಯ ಪಾಲಕರ ಹುದ್ದೆಗೆ ಬಡ್ತಿ ನೀಡುವಾಗ ಈ ಎಲ್ಲ ಪ್ರಕ್ರಿಯೆಗಳನ್ನೂ ಕಾಟಾಚಾರಕ್ಕೆ ಎಂಬಂತೆ ನಡೆಸಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ. ಜುಲೈ 23ರಂದು 460 ನಿಲಯ ಮೇಲ್ವಿಚಾರಕರ ಪಟ್ಟಿ ಪಡೆಯಲಾಗಿದೆ. ಮರುದಿನ ಸರ್ಕಾರಿ ರಜಾ ದಿನವಾದರೂ ದೂರವಾಣಿ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮುಂಬಡ್ತಿ ಪಟ್ಟಿಯಲ್ಲಿದ್ದವರ ಸೇವಾ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಅದರ ಮರುದಿನವೇ (ಜುಲೈ 24) 312 ನಿಲಯ ಮೇಲ್ವಿಚಾರಕರ ಸೇವಾ ಪುಸ್ತಕಗಳು ಮತ್ತು ರಹಸ್ಯ ವರದಿಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಇಲಾಖಾ ವಿಚಾರಣೆ, ದಂಡನೆ, ಆಸ್ತಿ ವಿವರ ಸಲ್ಲಿಕೆಯ ಕುರಿತೂ ಪರಿಶೀಲಿಸಿ ಖಾತರಿಪಡಿಸಿಕೊಳ್ಳಲಾಗಿದೆ. ಅದೇ ದಿನ ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆಸಿ 312 ನೌಕರರಿಗೆ ಬಡ್ತಿ ನೀಡಲಾಗಿದೆ. ಮರುದಿನವೇ ಅವರಿಗೆ ಸ್ಥಳ ನಿಯುಕ್ತಿಯನ್ನೂ ಮಾಡಲಾಗಿದೆ. ಇಡೀ ಪ್ರಕ್ರಿಯೆಯನ್ನು ತರಾತುರಿಯಿಂದ ನಡೆಸಲಾಗಿದೆ. ‘ಹುದ್ದೆಗಳು ರದ್ದಾಗಿರುವ ಕಾರಣದಿಂದ ನಿಲಯ ಮೇಲ್ವಿಚಾರಕರಿಗೆ ಮುಂಬಡ್ತಿ ನೀಡಲು ಸಾಧ್ಯವಿಲ್ಲ’ ಎಂದು ನೌಕರರಿಗೆ ಅಧಿಕೃತವಾಗಿ ಹಲವು ಬಾರಿ ಹಿಂಬರಹ ನೀಡಿದ್ದ ಇಲಾಖೆಯ ಆಯುಕ್ತರೇ ದಿಢೀರ್‌ ನಿಲುವು ಬದಲಿಸಿ ಈ ಪರಿಯ ತರಾತುರಿಯಲ್ಲಿ ನಿರ್ಣಯ ಕೈಗೊಂಡಿರುವುದರ ಹಿಂದಿನ ಉದ್ದೇಶವೇ ಸಂಶಯಾಸ್ಪದ. ಬಡ್ತಿ ನೀಡಿದ ಬಳಿಕ ಹುದ್ದೆಗಳಿಲ್ಲದ ಕಾರಣದಿಂದ ಈ ಎಲ್ಲ ನೌಕರರನ್ನು ಹಿಂದೆ ಇದ್ದ ಹುದ್ದೆಗಳಲ್ಲೇ ಮುಂದುವರಿಸಿರುವುದು ಕೂಡ ಈ ತೀರ್ಮಾನ ದೋಷಪೂರಿತವಾದುದು ಎಂಬುದನ್ನು ಪುಷ್ಟೀಕರಿಸುವಂತಿದೆ. ನೌಕರರ ಬಡ್ತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದಂತೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನಿರ್ಣಯ ಕೈಗೊಳ್ಳಬೇಕಿರುವುದು ಇಲಾಖಾ ಮುಖ್ಯಸ್ಥರ ಹೊಣೆಗಾರಿಕೆ. ಆದರೆ, ಈ ಪ್ರಕರಣದಲ್ಲಿ ಇಲಾಖಾ ಮುಖ್ಯಸ್ಥರ ನಡವಳಿಕೆಯೇ ತದ್ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೌಕರರ ದೂರುಗಳಿಗೆ ಸ್ಪಂದಿಸಬೇಕಾದುದು ಸರ್ಕಾರದ ಕರ್ತವ್ಯ. ಶರವೇಗದಲ್ಲಿ ನಡೆದಿರುವ ಪ್ರಕ್ರಿಯೆ ಕುರಿತು ಎದ್ದಿರುವ ಸಂಶಯಗಳನ್ನು ದೂರಮಾಡಲು 312 ನೌಕರರ ಬಡ್ತಿ ಪ್ರಕ್ರಿಯೆಯನ್ನು ಸಮಗ್ರವಾಗಿ ಮರುಪರಿಶೀಲನೆಗೆ ಒಳಪಡಿಸಬೇಕು. ಆಗಿರುವ ಲೋಪಗಳನ್ನು ಸರಿಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT