ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾವಿನ ಬಾಗಿಲಿಗೆ ಬಲವಂತದಿಂದ ತಳ್ಳಬೇಡಿ, ಪ್ರಾಣವಾಯು ಒದಗಿಸಿ

Last Updated 3 ಮೇ 2021, 20:00 IST
ಅಕ್ಷರ ಗಾತ್ರ

ಚಾಮರಾಜನಗರದ ಸರ್ಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ ಒಂದೇ ದಿನ23 ಜನ ಕೋವಿಡ್‌ ಪೀಡಿತರು ಹಾಗೂ ಜಿಲ್ಲೆಯ ಹನೂರು ಸಮೀಪದ ಆಸ್ಪತ್ರೆಯೊಂದರಲ್ಲಿ ಮತ್ತೊಬ್ಬ ರೋಗಿ ಸೇರಿದಂತೆ 24 ಮಂದಿ ಸಾವಿಗೀಡಾಗಿರುವ ವಿದ್ಯಮಾನ ಆಘಾತಕಾರಿ, ಹೃದಯವಿದ್ರಾವಕ. ಅದರಲ್ಲೂ ಹಲವರು ಆಮ್ಲಜನಕದ ಕೊರತೆಯಿಂದ ಕೊನೆಯುಸಿರು ಎಳೆಯುವಂತಾಗಿದ್ದು ಸದ್ಯದ ಪರಿಸ್ಥಿತಿಯ ಕ್ರೂರವ್ಯಂಗ್ಯ.

ರಾಜ್ಯದ ಚುಕ್ಕಾಣಿ ಹಿಡಿದವರು ಸಾಂಕ್ರಾಮಿಕದ ಈ ಸನ್ನಿವೇಶವನ್ನು ಎಷ್ಟೊಂದು ಕೆಟ್ಟದಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವುದಕ್ಕೂ ಈ ಘಟನೆ ದ್ಯೋತಕ. ಆಸ್ಪತ್ರೆಗಳಲ್ಲಿ ತರಗೆಲೆಗಳಂತೆ ಜೀವಗಳು ಉದುರುತ್ತಿರುವಾಗ ಕಣ್ಮುಚ್ಚಿ ಕುಳಿತಿದ್ದ ಜನಪ್ರತಿನಿಧಿಗಳು, ಈಗ ತಮ್ಮ ಜನಪರ ಕಾಳಜಿ ಕುರಿತು ಟ್ವೀಟ್‌ಗಳಲ್ಲಿ ಪುಂಖಾನುಪುಂಖವಾಗಿ ಬರೆಯುತ್ತಿದ್ದಾರೆ. ಇಂಥವರನ್ನು ಆಯ್ಕೆಮಾಡಿ ಕಳುಹಿಸಿದ್ದಕ್ಕೆ ಜನಸಾಮಾನ್ಯರು ತಮ್ಮನ್ನೇ ತಾವು ಹಳಿದುಕೊಳ್ಳುವಂತಾಗಿದೆ.

ಕೋವಿಡ್‌ನ ಎರಡನೇ ಅಲೆಯ ತೀವ್ರತೆ ಕುರಿತು ತಜ್ಞರು ಪದೇ ಪದೇ ಎಚ್ಚರಿಕೆ ನೀಡಿದರೂ ಜಿಲ್ಲಾ ಆಡಳಿತಗಳನ್ನು ಸನ್ನದ್ಧಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ವಿಫಲರಾಗಿದ್ದಾರೆ ಎನ್ನದೆ ವಿಧಿಯಿಲ್ಲ. ಕೋವಿಡ್‌ ಸೋಂಕಿತರ ಸಾವಿನ ಪ್ರಮಾಣ ಇಷ್ಟೊಂದು ಹೆಚ್ಚುತ್ತಿರುವುದಕ್ಕೆ ಸಕಾಲದಲ್ಲಿ ಅವರಿಗೆ ಆಮ್ಲಜನಕದ ವ್ಯವಸ್ಥೆ ಆಗದಿರುವುದೇ ಪ್ರಮುಖ ಕಾರಣ. ವೈದ್ಯಕೀಯ ಸೌಲಭ್ಯಗಳ ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ಇದ್ದರೂ ನಿರ್ಲಕ್ಷ್ಯದಿಂದ ಕೈಕಟ್ಟಿ ಕುಳಿತ ಆರೋಗ್ಯ ಇಲಾಖೆಯು ಕೋವಿಡ್‌ಪೀಡಿತರ ಸಂಕಟವನ್ನು ಹೆಚ್ಚಿಸಿದೆ.

ಆಮ್ಲಜನಕ ಪೂರೈಕೆಗೆ ಸಮರ್ಪಕ ವ್ಯವಸ್ಥೆ ಮಾಡದೆ ಸೋಂಕಿತರು ಏದುಸಿರುಬಿಡಲು ಕಾರಣವಾಗಿದೆ. ‘ಚಾಮರಾಜನಗರ ಆಸ್ಪತ್ರೆಯ ಎಲ್ಲ ಸೋಂಕಿತರ ಸಾವನ್ನು ಆಮ್ಲಜನಕದ ಕೊರತೆ ಯೊಂದಿಗೆ ಸಮೀಕರಿಸುವುದು ಸರಿಯಲ್ಲ’ ಎಂದು ಅಲ್ಲಿನ ಜಿಲ್ಲಾಧಿಕಾರಿ ಅವರೇನೋ ಹೇಳಿಕೆ ನೀಡಿದ್ದಾರೆ. ಆದರೆ, ಸಾವಿಗೀಡಾದ ಎಲ್ಲ ರೋಗಿಗಳೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರೆಲ್ಲರೂ ಉಸಿರಾಟಕ್ಕೆ ಆಮ್ಲಜನಕದ ಸಿಲಿಂಡರ್‌ಗಳನ್ನೇ ಅವಲಂಬಿಸಿದ್ದರು ಮತ್ತು ಅದೇ ಸಮಯದಲ್ಲಿ ಆಸ್ಪತ್ರೆಗೆ ಆಮ್ಲಜನಕದ ಕೊರತೆ ಎದುರಾಗಿತ್ತು ಎನ್ನುತ್ತವೆ ವರದಿಗಳು.

ಕುದುರೆಗಳೆಲ್ಲ ಓಡಿಹೋದ ಮೇಲೆ ಲಾಯಕ್ಕೆ ಬೀಗ ಹಾಕಿದಂತೆ ಈಗ ಸಾವಿನ ಕಾರಣವನ್ನು ಪತ್ತೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ. ಆದರೆ, ಜನ ಕೇಳುತ್ತಿರುವುದು ಸಾವಿನ ಕಾರಣ ಪತ್ತೆ ಮಾಡಿ ಎಂದಲ್ಲ; ಉಸಿರು ನಿಲ್ಲದಂತೆ ನೋಡಿಕೊಳ್ಳಲು ಪ್ರಾಣವಾಯು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕವಿಲ್ಲದೆ ಬಿದ್ದು ಒದ್ದಾಡುವವರ ಸಂಕಟ, ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಹೇಗೆ ಅರ್ಥವಾಗಬೇಕು?

ಆರೋಗ್ಯ ಸಚಿವ ಕೆ.ಸುಧಾಕರ್‌ ಅವರಿಗೆ ಪರಿಸ್ಥಿತಿಯ ತೀವ್ರತೆ ಎಷ್ಟಿದೆ ಎಂಬ ಅಂದಾಜು ಇದ್ದಂತಿಲ್ಲ. ಹೋದಲ್ಲೆಲ್ಲ ‘ಆಮ್ಲಜನಕದ ಕೊರತೆ ಇಲ್ಲ’ ಎಂದು ಬಿಡುಬೀಸಾಗಿ ಹೇಳಿಕೆ ನೀಡುತ್ತಿರುವ ಅವರು, ಜಿಲ್ಲೆಗಳ ಸ್ಥಿತಿಯನ್ನು ಕಣ್ತೆರೆದು ನೋಡಬೇಕು.

ಕಲಬುರ್ಗಿಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸಿದ ಬೆನ್ನ ಹಿಂದೆಯೇ ಈಗ ಚಾಮರಾಜನಗರದಲ್ಲಿ ದುರಂತ ಸಂಭವಿಸಿದೆ. ಸಚಿವರು ನೀಡುವ ಮಾಹಿತಿಗೂ ವಾಸ್ತವಿಕ ಅಂಶಗಳಿಗೂ ಅಜಗಜಾಂತರ ಇರುವುದು ಸುಸ್ಪಷ್ಟ. ಜನಸಾಮಾನ್ಯರು ಆಮ್ಲಜನಕದ ಸಿಲಿಂಡರ್‌ ಮತ್ತು ಕಾನ್ಸಂಟ್ರೇಟರ್‌ಗಳಿಗೆ ಹೇಗೆ ಒದ್ದಾಡುತ್ತಿದ್ದಾರೆ ಎಂಬುದು ನಗರ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿದರೆ ಅರಿವಿಗೆ ಬರುತ್ತದೆ.

‘ಪಿಎಂ ಕೇರ್ಸ್‌’ ಅಡಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿಯೇ ರಾಜ್ಯಕ್ಕೆ ಆರು ಆಮ್ಲಜನಕ ಉತ್ಪಾದನಾ ಘಟಕಗಳು ಮಂಜೂರಾಗಿವೆ. ಇದುವರೆಗೆ ಒಂದು ಘಟಕವೂ ಕಾರ್ಯಾರಂಭ ಮಾಡಿಲ್ಲ. ಅದೇ ಪಕ್ಕದ ಕೇರಳವು ಆಮ್ಲಜನಕ ಉತ್ಪಾದನೆಯ ವಿಚಾರದಲ್ಲಿ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡು ಕೊರತೆಯಾಗದಂತೆ ನೋಡಿಕೊಂಡಿದೆ. ತುರ್ತು ನಿಗಾ ಘಟಕಗಳ ವ್ಯವಸ್ಥೆ, ಕೋವಿಡ್‌ ಆರೈಕೆ ಕೇಂದ್ರಗಳ ಸ್ಥಾಪನೆ, ಜೀವರಕ್ಷಕ ಔಷಧಿಗಳ ಪೂರೈಕೆ ಹಾಗೂ ಲಸಿಕೆ ನೀಡುವಿಕೆ ಯಾವ ವಿಷಯದಲ್ಲೂ ರಾಜ್ಯ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಚಾಮರಾಜನಗರದಲ್ಲಿ ನಡೆದ ಈ ದುರಂತವು ಮಾನವೀಯತೆಗೆ ಬಿದ್ದ ಕೊಡಲಿ ಪೆಟ್ಟಲ್ಲದೆ ಬೇರೇನಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಪ್ರತಿಯೊಂದು ವೈಫಲ್ಯಕ್ಕೂ ಉತ್ತರದಾಯಿತ್ವದ ಹೊಣೆಗಾರಿಕೆ ಸ್ಪಷ್ಟಗೊಳ್ಳಬೇಕು. ಜೋರ್ಡನ್‌ನಲ್ಲಿ ಕೆಲವು ಸೋಂಕಿತರು ಆಮ್ಲಜನಕದ ಕೊರತೆಯಿಂದ ಸತ್ತಾಗ ಅಲ್ಲಿನ ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನೇ ನೀಡಿದರು. ನಮ್ಮ ದೇಶದಲ್ಲಿ ನೈತಿಕತೆಯನ್ನು ಅಷ್ಟೊಂದು ಉಚ್ಛ್ರಾಯ ಸ್ಥಿತಿಯಲ್ಲಿ ನಿರೀಕ್ಷಿಸುವಂತಿಲ್ಲ. ಏಕೆಂದರೆ, ಮನುಷ್ಯರ ಸಾವುಗಳೆಂದರೆ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಪಾಲಿಗೆ ಅಂಕಿಗಳು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT